ಬರ ಪರಿಸ್ಥಿತಿ ಅಧ್ಯಯನಕ್ಕೆ ಅ.3 ರಿಂದ 6 ರವರೆಗೆ ರಾಜ್ಯಕ್ಕೆ ಕೇಂದ್ರ ತಂಡ ಭೇಟಿ
x

ಬರ ಪರಿಸ್ಥಿತಿ ಅಧ್ಯಯನಕ್ಕೆ ಅ.3 ರಿಂದ 6 ರವರೆಗೆ ರಾಜ್ಯಕ್ಕೆ ಕೇಂದ್ರ ತಂಡ ಭೇಟಿ

ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಮತ್ತು ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು 3,705.30 ಕೋಟಿ ರೂ. ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರಧಾನಿಗೆ ಪತ್ರ ಬರೆದಿದ್ದರು.


ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಂತರ ಸಚಿವಾಲಯ ಕೇಂದ್ರ ತಂಡವು ಅಕ್ಟೋಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸಲಿದೆ. ಅ.3 ರಿಂದ 6 ರವರೆಗೆ ಈ ತಂಡವು ರಾಜ್ಯದ ವಿವಿಧ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವಸ್ತುಸ್ಥಿತಿ ಪರಿಶೀಲನೆ ನಡೆಸಲಿದೆ.

ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಸಮಿತಿಯು ಮೂರು ತಂಡಗಳಲ್ಲಿ ರಾಜ್ಯದ ವಿವಿಧೆಡೆ ಬರ ಅಧ್ಯಯನ ನಡೆಸಿ, ನಷ್ಟ ಅಂದಾಜಿಸಲಿದೆ. ಅಕ್ಟೋಬರ್ 3 ರಂದು ಬೆಂಗಳೂರಿನಿಂದ ಆರಂಭವಾಗುವ ಈ ಪ್ರವಾಸದಲ್ಲಿ ಕೇಂದ್ರ ತಂಡವು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಪೂರ್ವಭಾವಿ ಸಭೆ ನಡೆಸಲಿದೆ. ಈ ಸಭೆಯಲ್ಲಿ ರಾಜ್ಯ ಸರ್ಕಾರವು ಇದುವರೆಗೆ ಸಿದ್ಧಪಡಿಸಿರುವ ಬರಪೀಡಿತ ತಾಲೂಕುಗಳ ಸಮಗ್ರ ಅಂಕಿಅಂಶಗಳು ಹಾಗೂ ಬೆಳೆ ಹಾನಿ ವರದಿಯನ್ನು ಕೇಂದ್ರ ತಂಡಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಿದೆ.

ಬಳಿಕ ತಂಡದ ಮೂರು ಉಪ ವಿಭಾಗಗಳು ನಿಗದಿತ ಜಿಲ್ಲೆಗಳಿಗೆ ತೆರಳಿ ನೇರವಾಗಿ ರೈತರನ್ನು ಭೇಟಿಯಾಗಿ ಸಂಕಷ್ಟದ ಬಗ್ಗೆ ಮಾಹಿತಿ ಕಲೆಹಾಕಲಿವೆ. ಮೊದಲ ತಂಡವು ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಎರಡನೇ ತಂಡವು ಹಾಸನ, ಮೈಸೂರು, ಚಾಮರಾಜನಗರ ಹಾಗೂ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಪರಿಶೀಲನೆಗಾಗಿ ಮಂಡ್ಯ ಜಿಲ್ಲೆಗೂ ಭೇಟಿ ನೀಡಲಿದೆ. ಮೂರನೇ ತಂಡವು ಯಾದಗಿರಿ, ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸಂಚರಿಸಿ ಬರ ಅಧ್ಯಯನ ನಡೆಸಲಿದೆ.

3,705 ಕೋಟಿ ರೂ. ತುರ್ತು ಪರಿಹಾರಕ್ಕೆ ಮನವಿ

ರಾಜ್ಯದಲ್ಲಿ ಮಳೆ ಕೊರತೆಯಿಂದ ಮುಂಗಾರು ಹಂಗಾಮಿನಲ್ಲಿ ತೀವ್ರ ಬೆಳೆ ನಷ್ಟ ಉಂಟಾಗಿದ್ದು, ಈಗಾಗಲೇ ಒಟ್ಟು 206 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ನೆಲಮಟ್ಟದ ಪರಿಶೀಲನೆ ಹಾಗೂ ಇತರೆ ತಾಲೂಕುಗಳ ವರದಿ ಬಂದ ಬಳಿಕ ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರಲಿದೆ.

ಈ ಹಿನ್ನೆಲೆಯಲ್ಲಿ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಮತ್ತು ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಒಟ್ಟು 3,705.30 ಕೋಟಿ ರೂ. ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಇದರ ಜೊತೆಗೆ ಶೇ. 50 ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ತಕ್ಷಣವೇ ಬಿಡುಗಡೆ ಮಾಡುವಂತೆಯೂ ಮನವಿ ಮಾಡಲಾಗಿದೆ.

ಕೇಂದ್ರ ತಂಡವು ರಾಜ್ಯದಲ್ಲಿ ನಡೆಸಲಿರುವ ಈ ನಾಲ್ಕು ದಿನಗಳ ಅಧ್ಯಯನ ಮತ್ತು ವರದಿಯ ಆಧಾರದ ಮೇಲೆ, ಕೇಂದ್ರ ಸರ್ಕಾರದಿಂದ ಅಂತಿಮ ಬರ ಪರಿಹಾರದ ಮೊತ್ತ ಬಿಡುಗಡೆಯಾಗುವ ನಿರೀಕ್ಷೆಯಿದೆ.

Read More
Next Story