
ವೈದ್ಯರು
ಗ್ರಾಮೀಣ ಸೇವೆಗೆ ಗೈರು; 450ಕ್ಕೂ ಹೆಚ್ಚು ವೈದ್ಯರಿಗೆ ತಲಾ 15 ಲಕ್ಷ ರೂ. ದಂಡ, ಕ್ರಿಮಿನಲ್ ಕೇಸ್
ಕಡ್ಡಾಯ ಸೇವೆಗೆ ಬೆನ್ನುತಿರುಗಿಸಿದ ವೈದ್ಯರ ವಿರುದ್ಧ ಕಠಿಣ ದಂಡಾಸ್ತ್ರ ಪ್ರಯೋಗಿಸಿದ್ದು, ಪ್ರತಿಯೊಬ್ಬರಿಗೂ ತಲಾ 15 ಲಕ್ಷ ರೂ.ದಂಡ ವಿಧಿಸಿ ಇಲಾಖೆಯು ಲೀಗಲ್ ನೋಟಿಸ್ ಜಾರಿಗೊಳಿಸಿದೆ.
ಸರ್ಕಾರಿ ಕೋಟಾದಡಿ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ, ನಿಯಮದಂತೆ ಗ್ರಾಮೀಣ ಸೇವೆಗೆ ಹಾಜರಾಗದೆ ತಪ್ಪಿಸಿಕೊಳ್ಳಲು ಯತ್ನಿಸಿದ 450ಕ್ಕೂ ಹೆಚ್ಚು ವೈದ್ಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಾಕ್ ನೀಡಿದೆ.
ಕಡ್ಡಾಯ ಸೇವೆಗೆ ಬೆನ್ನುತಿರುಗಿಸಿದ ವೈದ್ಯರ ವಿರುದ್ಧ ಕಠಿಣ ದಂಡಾಸ್ತ್ರ ಪ್ರಯೋಗಿಸಿದ್ದು, ಪ್ರತಿಯೊಬ್ಬರಿಗೂ ತಲಾ 15 ಲಕ್ಷ ರೂ.ದಂಡ ವಿಧಿಸಿ ಇಲಾಖೆಯು ಲೀಗಲ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕದ ಕಡ್ಡಾಯ ಸೇವಾ ನಿಯಮಾವಳಿ ಪ್ರಕಾರ, ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪದವಿ ನಂತರ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. 2018-19ನೇ ಬ್ಯಾಚ್‌ನ 450ಕ್ಕೂ ಹೆಚ್ಚು ವೈದ್ಯರು ಈ ನಿಯಮವನ್ನು ಸಂಪೂರ್ಣ ಗಾಳಿಗೆ ತೂರಿ ಕರ್ತವ್ಯದಿಂದ ಹೊರಗುಳಿದಿದ್ದಾರೆ.
ಈ ಸಂಬಂಧ ಆರೋಗ್ಯ ಇಲಾಖೆಯು ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಈಗ ದಂಡದ ಜೊತೆಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಸದ್ಯ ಕಡ್ಡಾಯ ಸೇವೆಗೆ ಹಾಜರಾಗದ ಇತರ ವಿದ್ಯಾರ್ಥಿಗಳಿಗೆ ಕೊನೆಯ ಕಾಲಾವಕಾಶ ನೀಡಿದ್ದು, ಮುಂದಿನ ವರ್ಷದಿಂದ 15 ಲಕ್ಷ ರೂ. ದಂಡದ ಮೊತ್ತವನ್ನು ಬರೋಬ್ಬರಿ 25 ಲಕ್ಷ ರೂ.ಗಳಿಗೆ ಏರಿಕೆ ಮಾಡಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ಇನ್ಮುಂದೆ ಸಿಗಲ್ಲ ಪದವಿ ಸರ್ಟಿಫಿಕೇಟ್
ದಂಡ ವಿಧಿಸಿದರೂ ವೈದ್ಯರು ಕಡ್ಡಾಯ ಸೇವೆಗೆ ಬಾರದೇ ಇದ್ದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಗ್ರಾಮೀಣ ಸೇವೆ ಸಲ್ಲಿಸದ ವೈದ್ಯರಿಗೆ ಇನ್ನು ಮುಂದೆ ಮೂಲ ಪದವಿ ಪ್ರಮಾಣಪತ್ರ ನೀಡದಂತೆ ತಡೆಹಿಡಿಯುವ ಹೊಸ ಷರತ್ತನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಬಗ್ಗೆ ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿಗಳ ಜೊತೆ ಈಗಾಗಲೇ ಮಹತ್ವದ ಚರ್ಚೆ ನಡೆಸಿದ್ದು, ಕಾನೂನು ಅಭಿಪ್ರಾಯ ಪಡೆದು ಈ ನಿಯಮವನ್ನು ಜಾರಿಗೆ ತರಲು ಇಲಾಖೆ ಸಜ್ಜಾಗಿದೆ.
"ಯಾರು ಕಡ್ಡಾಯ ಸೇವೆಗೆ ಹಾಜರಾಗುವುದಿಲ್ಲವೋ ಅವರಿಗೆ ಸರ್ಟಿಫಿಕೇಟ್ ನೀಡದಂತೆ ಷರತ್ತು ಹಾಕಬೇಕು. ಸರ್ಕಾರಿ ನೇಮಕಾತಿಯಾಗಿಯೂ ಕರ್ತವ್ಯಕ್ಕೆ ಬಾರದವರ ವಿರುದ್ಧ ದಂಡ ವಿಧಿಸುವುದಷ್ಟೇ ಅಲ್ಲದೆ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಬೇಕು." ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಸದ್ಯಕ್ಕೆ ತಲಾ 15 ಲಕ್ಷ ರೂ. ದಂಡ ಹಾಕಲಾಗುವುದು, ಮುಂದಿನ ವರ್ಷದಿಂದ 25 ಲಕ್ಷ ರೂ.ಗೆ ಏರಿಕೆ ಸಾಧ್ಯತೆ ಇದೆ. ಸೇವೆ ಮುಗಿಸದಿದ್ದರೆ ರಾಜೀವ್ಗಾಂಧಿ ವಿವಿಯಿಂದ ಪದವಿ ಪ್ರಮಾಣಪತ್ರ ಸಿಗುವುದು ಅನುಮಾನವಾಗಲಿದೆ.

