
ಅತಿವೃಷ್ಟಿ-ಬರ ಪರಿಶೀಲನೆಗೆ ಜಿಲ್ಲಾ ಉಸ್ತುವಾರಿ ನೇಮಕ: ಪರಿಶೀಲನೆಗೆ ಸಿಎಂ ಸೂಚನೆ
ಸಚಿವರು ತಮಗೆ ಹಂಚಿಕೆ ಮಾಡಲಾದ ಜಿಲ್ಲೆಗಳಿಗೆ ತಕ್ಷಣವೇ ತೆರಳಿ, ಪ್ರತಿಯೊಂದು ತಾಲೂಕಿನಲ್ಲೂ ಸಂಚರಿಸಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸಿಎಂ ಡಿಕೆಶಿ ಸೂಚನೆ ನೀಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡುಬರುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಠಿಯಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸಂಪುಟದ ಎಲ್ಲಾ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿಯನ್ನು ನೀಡಿದ್ದಾರೆ. ಉಸ್ತುವಾರಿ ವಹಿಸಿರುವ ಸಚಿವರು ಪ್ರವಾಸ ಕೈಗೊಂಡು ಅಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿನ ಪ್ರಸ್ತುತ ಹವಾಮಾನ ವೈಪರೀತ್ಯ ಹಾಗೂ ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು ತಮಗೆ ಹಂಚಿಕೆ ಮಾಡಲಾದ ಜಿಲ್ಲೆಗಳಿಗೆ ತಕ್ಷಣವೇ ತೆರಳಿ, ಪ್ರತಿಯೊಂದು ತಾಲೂಕಿನಲ್ಲೂ ಸಂಚರಿಸಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಬೇಕು. ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಮೂಲಸೌಕರ್ಯಗಳ ಕುಸಿತ ಸೇರಿದಂತೆ ಪ್ರತಿಯೊಂದು ಅಂಶದ ಬಗ್ಗೆಯೂ ಸಮಗ್ರವಾದ ವಾಸ್ತವಿಕ ಸ್ಥಿತಿಗತಿಯ ವರದಿಯನ್ನು ಸಿದ್ಧಪಡಿಸಿ, ಅದನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಜಿಲ್ಲಾವಾರು ಉಸ್ತುವಾರಿಗಳ ವಿವರ
ಒಟ್ಟು 30 ಸಚಿವರನ್ನು ಜಿಲ್ಲಾ ಉಸ್ತುವಾರಿಗಳನ್ನಾಗಿ ನೇಮಿಸಿದೆ. ಡಾ. ಜಿ. ಪರಮೇಶ್ವರ್ - ತುಮಕೂರು, ರಘುಮೂರ್ತಿ - ಚಿತ್ರದುರ್ಗ, ಬೈರತಿ ಸುರೇಶ್ - ಚಿಕ್ಕಬಳ್ಳಾಪುರ, ಕೆ.ಎಚ್. ಮುನಿಯಪ್ಪ - ಬೆಂಗಳೂರು ಗ್ರಾಮಾಂತರ, ರಾಮಲಿಂಗಾ ರೆಡ್ಡಿ - ಕೋಲಾರ, ಎಚ್. ಸಿ. ಬಾಲಕೃಷ್ಣ - ಬೆಂಗಳೂರು ದಕ್ಷಿಣ, ಜಮೀರ್ ಅಹಮದ್ ಖಾನ್ - ವಿಜಯನಗರ, ಕೆ.ಜೆ. ಜಾರ್ಜ್ - ಚಿಕ್ಕಮಗಳೂರು, ಕೆ.ಎಂ. ಶಿವಲಿಂಗೇಗೌಡ - ಹಾಸನ, ಮಧು ಬಂಗಾರಪ್ಪ - ಶಿವಮೊಗ್ಗ, ಎಂ.ಬಿ. ಪಾಟೀಲ - ವಿಜಯಪುರ, ವಿಜಯಾನಂದ ಕಾಶಪ್ಪನವರ - ಬಾಗಲಕೋಟೆ, ಬಸವರಾಜ ರಾಯರೆಡ್ಡಿ - ಗದಗ, ಎಸ್. ಎಸ್. ಮಲ್ಲಿಕಾರ್ಜುನ - ದಾವಣಗೆರೆ, ರುದ್ರಪ್ಪ ಲಮಾಣಿ - ಹಾವೇರಿ, ಸತೀಶ್ ಜಾರಕಿಹೊಳಿ - ಬೆಳಗಾವಿ, ಸಂತೋಷ್ ಲಾಡ್ - ಧಾರವಾಡ, ಲಕ್ಷ್ಮಣ ಸವದಿ - ಉತ್ತರಕನ್ನಡ, ಪ್ರಿಯಾಂಕ್ ಖರ್ಗೆ - ಕಲಬುರಗಿ, ಅಜಯ್ ಸಿಂಗ್ - ರಾಯಚೂರು, ಈಶ್ವರ್ ಖಂಡ್ರೆ - ಬೀದರ್, ಯು.ಟಿ. ಖಾದರ್ - ದಕ್ಷಿಣ ಕನ್ನಡ ಮತ್ತು ಉಡುಪಿ, ಪಿ.ಎಂ. ನರೇಂದ್ರಸ್ವಾಮಿ - ಕೊಡಗು, ಯತೀಂದ್ರ ಸಿದ್ದರಾಮಯ್ಯ- ಮೈಸೂರು, ಚಲುವರಾಯಸ್ವಾಮಿ - ಮಂಡ್ಯ, ಪುಟ್ಟರಂಗಶೆಟ್ಟಿ - ಚಾಮರಾಜನಗರ, ಬಿ. ನಾಗೇಂದ್ರ - ಬಳ್ಳಾರಿ, ಶರಣ ಪ್ರಕಾಶ ಪಾಟೀಲ - ಯಾದಗಿರಿ, ಶಿವರಾಜ್ ತಂಗಡಗಿ - ಕೊಪ್ಪಳ, ಕೃಷ್ಣ ಬೈರೇಗೌಡ - ಬೆಂಗಳೂರು ನಗರ.
ರಾಜ್ಯದಲ್ಲಿನ ಕೃಷಿ ಚಟುವಟಿಕೆಗಳಿಗೆ ಅತಿವೃಷ್ಟಿ ದೊಡ್ಡ ಹೊಡೆತ ನೀಡಿದೆ. ಹಲವೆಡೆ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರವು ಕೇವಲ ಕಚೇರಿಗಳಲ್ಲಿ ಕುಳಿತು ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಸಚಿವರು ನೇರವಾಗಿ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಜನರಿಗೆ ಆತ್ಮವಿಶ್ವಾಸ ತುಂಬಬೇಕು ಮತ್ತು ವಾಸ್ತವಿಕ ಅಂದಾಜನ್ನು ಸರ್ಕಾರಕ್ಕೆ ನೀಡಬೇಕು ಎಂಬುದು ಆದೇಶದ ಪ್ರಮುಖ ಉದ್ದೇಶವಾಗಿದೆ.
ಕ್ಷೇತ್ರ ಮಟ್ಟದ ಪರಿಶೀಲನೆಯ ಅಗತ್ಯತೆ
ಪ್ರತಿಯೊಂದು ತಾಲೂಕಿನಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಎಂದು ಸೂಚಿಸಿರುವುದು ಸರ್ಕಾರದ ಗಂಭೀರತೆಯನ್ನು ಸೂಚಿಸುತ್ತದೆ. ಕೇವಲ ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗದೆ, ತಾಲೂಕು ಮಟ್ಟದಲ್ಲಿನ ಹಾನಿಯನ್ನು ಗುರುತಿಸುವುದು, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವುದು ಮತ್ತು ಅಗತ್ಯ ಬಿದ್ದಲ್ಲಿ ತುರ್ತು ಧನಸಹಾಯವನ್ನು ಬಿಡುಗಡೆ ಮಾಡಲು ಈ ವರದಿಗಳು ಆಧಾರವಾಗಲಿವೆ.
ಸಚಿವರು ಈ ಆದೇಶವನ್ನು ಸ್ವೀಕರಿಸಿದ ಕೂಡಲೇ ತಮ್ಮ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ವರದಿ ಸಲ್ಲಿಕೆಯಾದ ಬಳಿಕ, ಸರ್ಕಾರವು ಸಂತ್ರಸ್ತರಿಗೆ ನೀಡಬೇಕಾದ ಪರಿಹಾರದ ಮೊತ್ತ, ಬೆಳೆ ವಿಮೆ ವಿತರಣೆ ಮತ್ತು ಕುಡಿಯುವ ನೀರಿನ ಪೂರೈಕೆಯಂತಹ ತುರ್ತು ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಕೃತಿ ವಿಕೋಪದ ಈ ಸಂಕಷ್ಟದ ಸಮಯದಲ್ಲಿ, ಸಚಿವರ ನೇರ ಭೇಟಿಯು ಜನರಲ್ಲಿ ಸರ್ಕಾರ ನಮ್ಮ ಕತೆಗಿದೆ ಎಂಬ ಭರವಸೆಯನ್ನು ಮೂಡಿಸುವುದಲ್ಲದೆ, ಪರಿಹಾರ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.

