Digital Karnataka | ಬೆರಳ ತುದಿಯಲ್ಲೇ ಸಿಗಲಿದೆ ಸರ್ಕಾರಿ ಸೇವೆ; ಡಿಜಿಲಾಕರ್‌ ವ್ಯವಸ್ಥೆಯಲ್ಲಿ ದಾಖಲೆ ಸೇಫ್‌
x

Digital Karnataka | ಬೆರಳ ತುದಿಯಲ್ಲೇ ಸಿಗಲಿದೆ ಸರ್ಕಾರಿ ಸೇವೆ; ಡಿಜಿಲಾಕರ್‌ ವ್ಯವಸ್ಥೆಯಲ್ಲಿ ದಾಖಲೆ ಸೇಫ್‌

ರಾಜ್ಯದ ಇ-ಆಡಳಿತ ವ್ಯವಸ್ಥೆಯು ಶೇ. 73 ರಷ್ಟು ಸೇವೆಗಳನ್ನು ಡಿಜಿಲಾಕರ್ (DigiLocker) ನೊಂದಿಗೆ ಸಂಯೋಜಿಸಿ ಒದಗಿಸುತ್ತಿದೆ. ರಾಜ್ಯದಲ್ಲಿ ಒಟ್ಟು 2.7 ಕೋಟಿಗೂ ಹೆಚ್ಚು ಜನರು, ಡಿಜಿಲಾಕರ್ ಖಾತೆಗಳನ್ನು ಹೊಂದಿದ್ದಾರೆ.


ಐಟಿ-ಬಿಟಿ, ಏರೋಸ್ಪೇಸ್, ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕ ಇದೀಗ ಡಿಜಿಟಲ್ ಆಡಳಿತದಲ್ಲೂ ಪಾರುಪತ್ಯ ಸ್ಥಾಪಿಸಿದೆ. ಇಡೀ ದೇಶದಲ್ಲೇ ಪರಿಣಾಮಕಾರಿಯಾಗಿ ಇ-ಆಡಳಿತ ಅಳವಡಿಸಿಕೊಂಡ ಮೊದಲ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಆ ಮೂಲಕ ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವತ್ತ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

2.7 ಕೋಟಿ ಡಿಜಿಲಾಕರ್ ಖಾತೆ

ರಾಜ್ಯದ ಇ-ಆಡಳಿತ ವ್ಯವಸ್ಥೆಯು ಶೇ. 73 ರಷ್ಟು ಸೇವೆಗಳನ್ನು ಡಿಜಿಲಾಕರ್ (DigiLocker) ನೊಂದಿಗೆ ಸಂಯೋಜಿಸಿ ಒದಗಿಸುತ್ತಿದೆ. ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 2.7 ಕೋಟಿಗೂ ಹೆಚ್ಚು ಜನರು, ಡಿಜಿಲಾಕರ್ ಖಾತೆಗಳನ್ನು ಹೊಂದಿದ್ದು, ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿದ್ದಾರೆ.

49 ಇಲಾಖೆಗಳಿಂದ ಡಿಜಿಟಲ್‌ ಸೇವೆ

ಶಿಕ್ಷಣ, ಸಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಆರೋಗ್ಯ ಸೇರಿದಂತೆ ಸುಮಾರು 49 ವಿವಿಧ ಇಲಾಖೆಗಳು ಉದ್ಯೋಗ ಮತ್ತು ಶೈಕ್ಷಣಿಕ ದಾಖಲೆಗಳ ಪರಿಶೀಲನೆಗಾಗಿ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ಅವಲಂಬಿಸಿವೆ. ಇದು ಭೌತಿಕ ದಾಖಲೆಗಳ ಹೊರೆ ತಗ್ಗಿಸುವುದಲ್ಲದೆ, ನಕಲಿ ದಾಖಲೆಗಳ ಹಾವಳಿಗೂ ಬ್ರೇಕ್ ಹಾಕಲಿದೆ.

ಇನ್ನು ಡಿಜಿಲಾಕರ್ ವ್ಯವಸ್ಥೆ ಅಥವಾ ದಾಖಲೆಗಳ ಡಿಜಿಟಲೀಕರಣದಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ಕಚೇರಿಗಳಿಗೆ ಅಲೆಯದೇ ಕುಳಿತಲ್ಲಿಯೇ ಸ್ಮಾರ್ಟ್ಫೋನ್ ಮೂಲಕ ಅಗತ್ಯ ದಾಖಲೆಗಳನ್ನು ಪಡೆಯಬಹುದಾಗಿದೆ. ಡಿಜಿಲಾಕರ್ ವ್ಯವಸ್ಥೆಯು ಕಾಗದರಹಿತ ಆಡಳಿತಕ್ಕೆ ಭದ್ರ ಬುನಾದಿ ಹಾಕಲಿದೆ. ಡಿಜಿಟಲ್‌ ತಂತ್ರಜ್ಞಾನ ಅಳವಡಿಕೆಯಿಂದ ಸುಸ್ಥಿರ ಹಾಗೂ ಸುರಕ್ಷಿತ ಆಡಳಿತವೂ ಸಾಧ್ಯವಾಗಲಿದೆ.


ಡಿಜಿಲಾಕರ್‌ ಎಂದರೇನು, ಸೌಲಭ್ಯ ಪಡೆಯೋದು ಹೇಗೆ?

ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ಡಿಜಿಟಲ್ ಇಂಡಿಯಾ' ಉಪಕ್ರಮದಡಿ ಡಿಜಿಲಾಕರ್‌ ಸೇವೆ ನೀಡುತ್ತಿದೆ. ನಿಮ್ಮ ಪ್ರಮುಖ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಕ್ಲೌಡ್ ಆಧಾರಿತ ಪ್ಲಾಟ್ಫಾರ್ಮ್ ಒದಗಿಸಿದೆ.

ರಾಜ್ಯದ ವಿವಿಧ ಇಲಾಖೆಗಳು ನೀಡುವ ಡಿಜಿಟಲ್ ದಾಖಲೆ ನೋಡಲು, ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಕರ್ನಾಟಕ ಸರ್ಕಾರವು ಡಿಜಿಲಾಕರ್‌ ವ್ಯವಸ್ಥೆ ಒದಗಿಸಿದೆ. ಇದನ್ನು ಸೆಂಟರ್ ಫಾರ್ ಇ-ಗವರ್ನೆನ್ಸ್ ನಿರ್ವಹಿಸುತ್ತಿದೆ. ಈ ವೇದಿಕೆಯು ನಾಗರಿಕರಿಗೆ ಸರ್ಕಾರಿ ಇಲಾಖೆಗಳಿಂದ ನೇರವಾಗಿ ಡಿಜಿಟಲ್ ರೂಪದಲ್ಲಿ ಅಧಿಕೃತ ಪ್ರಮಾಣಪತ್ರಗಳು ಮತ್ತು ದಾಖಲೆ ಪಡೆಯಲು ಮತ್ತು ಸೇವೆ ವಿತರಿಸಲು ಅನುವು ಮಾಡಿಕೊಡಲಿದೆ.

ಡಿಜಿಟಲ್‌ ಇಂಡಿಯಾ ಉಪಕ್ರಮದಡಿ ಪ್ರತಿ ಬಳಕೆದಾರರಿಗೆ 1ಜಿಬಿ ವರೆಗೆ ಕ್ಲೌಡ್ ಸಂಗ್ರಹಣಾ ಸ್ಥಳ ಸಿಗಲಿದೆ. ಇದರಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ವಾಹನ ನೋಂದಣಿ ಪ್ರಮಾಣಪತ್ರ, ಶೈಕ್ಷಣಿಕ ಅಂಕಪಟ್ಟಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. Digilocker.gov.in ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ 'DigiLocker' ಆ್ಯಪ್ ಡೌನ್ಲೋಡ್ ಮಾಡಿ, ಅಲ್ಲಿ ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ನಿಮ್ಮ ನೋಂದಾಯಿತ ಮೊಬೈಲ್‌ಗೆ ಬರುವ ಒಟಿಪಿ ಬಳಸಿ ಡಿಜಿಲಾಕರ್‌ ಖಾತೆಯ ಸೌಲಭ್ಯ ಪಡೆಯಬೇಕು.

ಯಾವುದೆಲ್ಲಾ ಡಿಜಿಟಲ್ ಸೇವೆ

ಶಿಕ್ಷಣ ಇಲಾಖೆಯಲ್ಲಿ 2005ರಿಂದ ಎಲ್ಲಾ ಅಂಕಪಟ್ಟಿಗಳು ಡಿಜಿಟಲ್ ರೂಪದಲ್ಲಿ ಸಿಗುತ್ತಿವೆ. ಎಸ್ಎಸ್ಎಲ್ಸಿ, ಪಿಯುಸಿ ಅಂಕಪಟ್ಟಿಗಳು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇರಿದಂತೆ 80ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ ಪದವಿ ಪ್ರಮಾಣಪತ್ರಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತಿವೆ.

ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಸೇರಿ 80ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ನೀಡುವ ಪದವಿ ಪ್ರಮಾಣ ಪತ್ರಗಳು, ಸೆಮಿಸ್ಟರ್ ಅಂಕಪಟ್ಟಿಗಳು ಮತ್ತು ಪ್ರಾವಿಜನಲ್ ಸರ್ಟಿಫಿಕೇಟ್ಗಳು ಡಿಜಿಟಲ್‌ ರೂಪದಲ್ಲಿ ಸಿಗುತ್ತಿವೆ.

ಸಾರಿಗೆ ಇಲಾಖೆಯಲ್ಲಿ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು (RC) ಭೌತಿಕವಾಗಿ ಪಡೆಯುವ ಅಗತ್ಯವಿಲ್ಲ. ಈ ದಾಖಲೆಗಳು ಕೂಡ ಡಿಜಿಟಲ್‌ ರೂಪದಲ್ಲಿ ಸಿಗುತ್ತಿವೆ.

ಕಂದಾಯ ಇಲಾಖೆಯಲ್ಲಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಮತ್ತು ಅತಿ ಮುಖ್ಯವಾಗಿ 'ಪಹಣಿ' ದಾಖಲೆಗಳು ಡಿಜಿಟಲ್‌ ರೂಪದಲ್ಲಿ ಸಿಗುತ್ತಿವೆ. ಇಂಧನ ಇಲಾಖೆಯಲ್ಲಿ ಎಸ್ಕಾಂಗಳು ಈಗಾಗಲೇ 3 ಕೋಟಿಗೂ ಅಧಿಕ ಡಿಜಿಟಲ್ ವಿದ್ಯುತ್‌ ಬಿಲ್ಗಳನ್ನು ಗ್ರಾಹಕರ ಖಾತೆಗೆ ಲಿಂಕ್ ಮಾಡಿವೆ. ಇದರಿಂದ ಗ್ರಾಹಕರ ಮೊಬೈಲ್‌ಗೆ ಡಿಜಿಟಲ್‌ ಬಿಲ್‌ ಬರಲಿದೆ. ಇದನ್ನು ಬೇಕಾದಲ್ಲಿ ಡಿಜಿಲಾಕರ್‌ನಲ್ಲಿ ಸಂಗ್ರಹಿಸಿಡಬಹುದು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಕಾರ್ಡ್ (ABHA ID), ಲಸಿಕಾ ಪ್ರಮಾಣಪತ್ರಗಳು ಮತ್ತು ವೈದ್ಯಕೀಯ ವರದಿಗಳು ಡಿಜಿಟಲ್‌ ರೂಪದಲ್ಲಿ ಸಿಗುತ್ತಿವೆ. ಕೆಇಎಯಲ್ಲಿ ಸಿಇಟಿ ಫಲಿತಾಂಶ ಮತ್ತು ಶ್ರೇಣಿ ಪಟ್ಟಿ ನೀಡಲಾಗುತ್ತಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಆಸ್ತಿ ನೋಂದಣಿ ಪತ್ರಗಳ ಪ್ರತಿಗಳು ಸಿಗುತ್ತಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೆರಿಗೆ ರಶೀದಿಗಳು ಸಿಗುತ್ತಿವೆ. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಕಾರ್ಡ್‌, ಕೌಶಲ್ಯ ಪ್ರಮಾಣ ಪತ್ರಗಳು ಲಭ್ಯವಾಗುತ್ತಿವೆ.

ಯಾವ ರಾಜ್ಯದಲ್ಲಿ ಹೇಗಿದೆ ಡಿಜಿಟಲ್‌ ಕ್ರಾಂತಿ?

ರಾಜಸ್ಥಾನವು ಡಿಜಿಟಲ್ ಆಡಳಿತದಲ್ಲಿ ತನ್ನ ಡಿಜಿಲಾಕರ್ ವ್ಯವಸ್ಥೆಯನ್ನು ಹೆಚ್ಚು ಸಂಯೋಜಿಸಿದೆ. 7.5 ಕೋಟಿಗೂ ಹೆಚ್ಚು ನಾಗರಿಕರು ಜನ ಆಧಾರ್ ಕುಟುಂಬ ದಾಖಲೆಗಳು (Jan Aadhaar Integration), ಶೈಕ್ಷಣಿಕ ಪ್ರಮಾಣ ಪತ್ರಗಳು ಮತ್ತು ವಿದ್ಯುತ್ ಬಿಲ್‌ಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯುತ್ತಿದ್ದಾರೆ. ಈ ಉಪಕ್ರಮವು ಡಿಜಿಲಾಕರ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಕಾಗದರಹಿತ, ಸುರಕ್ಷಿತ ಮತ್ತು ತ್ವರಿತ ದಾಖಲೆ ಪರಿಶೀಲನೆಯನ್ನು ಉತ್ತೇಜಿಸಲಿದೆ.

ಗುಜರಾತ್ ಡಿಜಿಟಲ್ ಆಡಳಿತದಲ್ಲಿ ಡಿಜಿಲಾಕರ್‌ ವ್ಯವಸ್ಥೆಯನ್ನು ವ್ಯಾಪಕವಾಗಿ ಸಂಯೋಜಿಸಲಾಗಿದೆ. ಶೇ 65 ರಷ್ಟು ಸರ್ಕಾರಿ ಸೇವೆಗಳು ಡಿಜಿಲಾಕರ್‌ ಮೂಲಕವೇ ಸಿಗುತ್ತಿವೆ. GSEB( ಗುಜರಾತ್‌ ಪ್ರೌಢಶಿಕ್ಷಣ ಮಂಡಳಿ) ಪ್ರಮಾಣಪತ್ರಗಳು, ಪಡಿತರ ಚೀಟಿಗಳು ಮತ್ತು ಜಾತಿ ಪ್ರಮಾಣಪತ್ರದಂತಹ ಡಿಜಿಟಲ್ ದಾಖಲೆಗಳು ಲಭ್ಯವಾಗುತ್ತಿದ್ದು, ಇದರಿಂದ 1.92 ಕೋಟಿಗೂ ಹೆಚ್ಚು ನಾಗರಿಕರು ಪ್ರಯೋಜನ ಪಡೆಯುತ್ತಿದ್ದಾರೆ.

ಡಿಜಿಲಾಕರ್ ವ್ಯವಸ್ಥೆ ಅಳವಡಿಕೆಯಲ್ಲಿ ಕೇರಳ ಮುಂಚೂಣಿಯಲ್ಲಿದೆ. 38 ಇಲಾಖೆಗಳು 120 ಕ್ಕೂ ಹೆಚ್ಚು ಸೇವೆಗಳನ್ನು ಡಿಜಿಲಾಕರ್‌ ಜೊತೆ ಸಂಯೋಜಿಸಿವೆ. ಡಿಜಿಲಾಕರ್ ಅಪ್ಲಿಕೇಶನ್ ಮೂಲಕ ಪ್ರಮಾಣಪತ್ರಗಳು, ಪರವಾನಗಿಗಳು ಮತ್ತು ಭೂ ದಾಖಲೆಗಳಂತಹ ಡಿಜಿಟಲ್, ಕಾನೂನುಬದ್ಧ ದಾಖಲೆಗಳ ಪ್ರತಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು, ಪ್ರವೇಶಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ. ನಾಗಾಲ್ಯಾಂಡ್ 32,500 ಸೇವೆಗಳನ್ನು ಡಿಜಿಲಾಕರ್ ವ್ಯವಸ್ಥೆಗೆ ಸಂಯೋಜಿಸುವ ಮೂಲಕ ತನ್ನ ಡಿಜಿಟಲ್ ಆಡಳಿತವನ್ನು ಗಮನಾರ್ಹವಾಗಿ ಹೆಚ್ಚಿಸಿದೆ, ಇದು 'ಡಿಜಿಟಲ್ ರೈಸಿಂಗ್ ಸ್ಟೇಟ್' ಎಂಬ ಮನ್ನಣೆಯನ್ನು ಹೊಂದಿದೆ.

Read More
Next Story