ರಾಜ್ಯದಲ್ಲಿ ಡೀಪ್‌ಟೆಕ್ ಕ್ರಾಂತಿ: ಜಾಗತಿಕ ತಾಂತ್ರಿಕ ಕೇಂದ್ರವಾಗಿ ರಾಜ್ಯದತ್ತ ದಾಪುಗಾಲು
x

ರಾಜ್ಯದಲ್ಲಿ ಡೀಪ್‌ಟೆಕ್ ಕ್ರಾಂತಿ: ಜಾಗತಿಕ ತಾಂತ್ರಿಕ ಕೇಂದ್ರವಾಗಿ ರಾಜ್ಯದತ್ತ ದಾಪುಗಾಲು

ಎಐ, ರೋಬೊಟಿಕ್ಸ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ರಾಜ್ಯದ ಆಡಳಿತ ಮತ್ತು ಆರ್ಥಿಕತೆಯ ಭಾಗವಾಗಿಸಲು ಐದು ಪ್ರಮುಖ ಅಡಿಪಾಯಗಳನ್ನು ಸರ್ಕಾರ ಹಾಕಿದೆ.


Click the Play button to hear this message in audio format

ದೇಶದ ತಂತ್ರಜ್ಞಾನ ಮತ್ತು ನಾವೀನ್ಯತೆಯ ರಾಜಧಾನಿಯಾಗಿರುವ ಕರ್ನಾಟಕ, ಇದೀಗ ಡೀಪ್‌ಟೆಕ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ನಾಯಕತ್ವವನ್ನು ವಹಿಸಿಕೊಳ್ಳಲು ಸಜ್ಜಾಗಿದೆ. ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ರಾಜ್ಯದ ಆಡಳಿತ ಮತ್ತು ಆರ್ಥಿಕತೆಯ ಭಾಗವಾಗಿಸಲು ಐದು ಪ್ರಮುಖ ಅಡಿಪಾಯಗಳನ್ನು ಸರ್ಕಾರ ಹಾಕಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನಗರದಲ್ಲಿ ನಾಸ್ಕಾಂ ಆಯೋಜಿಸಿದ್ದ 'ಫ್ಯೂಚರ್ ಫೋರ್ಜ್ – ಚಾರ್ಟಿಂಗ್ ಇಂಡಿಯಾಸ್ ಡೀಪ್‌ಟೆಕ್ ಆರ್ಕಿಟೆಕ್ಚರ್' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಕರ್ನಾಟಕದ ಭವಿಷ್ಯದ ತಾಂತ್ರಿಕ ನೀಲನಕ್ಷೆಯನ್ನು ವಿವರಿಸಿದರು. ರಾಜ್ಯದಲ್ಲಿ ತಂತ್ರಜ್ಞಾನದ ಬೆಳವಣಿಗೆಯನ್ನು ಕೇವಲ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸೀಮಿತಗೊಳಿಸದೆ, ಸಂಶೋಧನಾ ಆಧಾರಿತ ಡೀಪ್‌ಟೆಕ್ ಕ್ಷೇತ್ರಕ್ಕೆ ವಿಸ್ತರಿಸಲು ಸಚಿವ ಪ್ರಿಯಾಂಕ್ ಖರ್ಗೆ ಐದು ಪ್ರಮುಖ ಅಂಶಗಳನ್ನು ಪ್ರಮುಖ ಅಡಿಪಾಯಗಳೆಂದು ಘೋಷಿಸಿದರು. ಪ್ರತಿಭೆಗೆ ಸಾಣೆ: ಕೌಶಲಗಳ ಅಭಿವೃದ್ಧಿಗೆ ಒತ್ತು ನೀಡಿ, ಉದ್ಯಮಗಳಿಗೆ ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವುದು. ಸಂಶೋಧನೆಗೆ ಒತ್ತು: ಅಕಾಡೆಮಿಕ್ ಮತ್ತು ಕೈಗಾರಿಕಾ ವಲಯಗಳ ಸಹಯೋಗದಲ್ಲಿ ಸಂಶೋಧನೆಗಳನ್ನು ಉತ್ತೇಜಿಸುವುದು. ನವೋದ್ಯಮಗಳಿಗೆ ಬೆಂಬಲ: ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಬಂಡವಾಳ ಮತ್ತು ಮಾರ್ಗದರ್ಶನ ನೀಡುವುದು. ಆಡಳಿತದಲ್ಲಿ ತಂತ್ರಜ್ಞಾನ: ಆಡಳಿತ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವುದು. ಕೌಶಲ್ಯ ಆಡಳಿತ: ಕೇವಲ ಇ-ಆಡಳಿತದಿಂದ 'ಐ-ಜಿ' ವ್ಯವಸ್ಥೆಗೆ ಪರಿವರ್ತನೆ ಹೊಂದುವುದಾಗಿದೆ ಎಂದು ಹೇಳಿದರು.

ನಿಪುಣ ಕರ್ನಾಟಕ ಮತ್ತು ಶ್ರೇಷ್ಠತಾ ಕೇಂದ್ರಗಳು

ಕರ್ನಾಟಕವನ್ನು ಕೌಶಲದ ತವರು ಮಾಡಬೇಕೆಂಬ ಉದ್ದೇಶದಿಂದ ಸರ್ಕಾರ ನಿಪುಣ ಕರ್ನಾಟಕ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ, ಮ್ಯಾನುಫ್ಯಾಕ್ಚರಿಂಗ್ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಯುವಜನರಿಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ 20ಕ್ಕೂ ಹೆಚ್ಚು ಶ್ರೇಷ್ಠತಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳು ಪ್ರಯೋಗಾಲಯದ ಸಂಶೋಧನೆಗಳನ್ನು ಮಾರುಕಟ್ಟೆಗೆ ಯೋಗ್ಯವಾದ ವಾಣಿಜ್ಯ ಉತ್ಪನ್ನಗಳಾಗಿ ಪರಿವರ್ತಿಸುವಲ್ಲಿ ಸಫಲವಾಗಿವೆ. ಅಚ್ಚರಿಯ ವಿಷಯವೆಂದರೆ, ಈ ಸಹಭಾಗಿತ್ವದ ಫಲವಾಗಿ ಇದುವರೆಗೆ 1,000ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ ಹಕ್ಕುಗಳು ಸೃಷ್ಟಿಯಾಗಿವೆ, ಇದು ರಾಜ್ಯದ ಸಂಶೋಧನಾ ಸಾಮರ್ಥ್ಯದ ದ್ಯೋತಕವಾಗಿದೆ ಎಂದರು.

ನವೋದ್ಯಮಗಳಿಗೆ ಸರ್ಕಾರಿ ನೆರವು

ಕರ್ನಾಟಕದ ಸ್ಟಾರ್ಟ್‌ಅಪ್‌ ಪರಿಸರ ವ್ಯವಸ್ಥೆಯು ದೇಶದಲ್ಲೇ ಅತ್ಯುತ್ತಮವಾಗಿದೆ. ಎಲೆವೇಟ್ ಮತ್ತು ಎಲೆವೇಟ್ ನೆಕ್ಸ್ಟ್ ಯೋಜನೆಗಳ ಮೂಲಕ ಇದುವರೆಗೆ 1,500ಕ್ಕೂ ಹೆಚ್ಚು ನವೋದ್ಯಮಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಿದೆ. ಡೀಪ್‌ಟೆಕ್ ಕ್ಷೇತ್ರಕ್ಕೆ ಸೇರಿರುವ ನವೋದ್ಯಮಗಳಿಗೆ ಪ್ರತಿ ಯೂನಿಟ್‌ಗೆ 1 ಕೋಟಿ ರೂ.ವರೆಗೆ ಅನುದಾನ ನೀಡಲಾಗುತ್ತಿದ್ದು, ಅವರಿಗೆ ಜಾಗತಿಕ ಮಾರುಕಟ್ಟೆಗಳ ಸಂಪರ್ಕವನ್ನೂ ಕಲ್ಪಿಸಿಕೊಡಲಾಗುತ್ತಿದೆ. ಸರ್ಕಾರವು ಹೊಸ ತಂತ್ರಜ್ಞಾನಗಳಿಗೆ ಮೊದಲ ಗ್ರಾಹಕನಾಗಬೇಕು ಎಂಬ ಉದ್ದೇಶದಿಂದ 'ಗವರ್ನ್‌ಮೆಂಟ್ ಫಸ್ಟ್' ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ. ರೋಗನಿರ್ಣಯಕ್ಕೆ ಎಐ ತಂತ್ರಜ್ಞಾನ ಬಳಕೆ ಮತ್ತು ಕೃಷಿ: ಬೆಳೆ ರೋಗ ಪತ್ತೆಗೆ ಡ್ರೋನ್ ಮತ್ತು ಡೇಟಾ ವಿಶ್ಲೇಷಣೆ. ಟ್ರಾಫಿಕ್ ನಿರ್ವಹಣೆ ಮತ್ತು ಸ್ಮಾರ್ಟ್ ಸಿಟಿ ಪರಿಹಾರಗಳಿಗೆ ನವೋದ್ಯಮಗಳ ತಂತ್ರಜ್ಞಾನ ಬಳಕೆ. ಈ ಮೂಲಕ ಪ್ರಯೋಗಾತ್ಮಕವಾಗಿ ಹೊಸ ತಂತ್ರಜ್ಞಾನಗಳನ್ನು ಆಡಳಿತಕ್ಕೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇ-ಆಡಳಿತದಿಂದ 'ಕೌಶಲ್ಯ ಆಡಳಿತ'ಕ್ಕೆ ಪಯಣ

"ನಾವು ಕೇವಲ ಫೈಲ್‌ಗಳನ್ನು ಡಿಜಿಟಲ್ ರೂಪಕ್ಕೆ ತರುತ್ತಿಲ್ಲ, ಬದಲಾಗಿ ಆಡಳಿತವನ್ನೇ ಬುದ್ಧಿವಂತ ಮಾಡ್ತಿದ್ದೇವೆ" ಎಂದ ಸಚಿವರು, ಎಐ ಮತ್ತು ಬಿಗ್ ಡೇಟಾ ಅನಾಲಿಟಿಕ್ಸ್ ಬಳಸಿ ನಾಗರಿಕರಿಗೆ ನೀಡುವ ಸರ್ಕಾರಿ ಸೇವೆಗಳನ್ನು ಇನ್ನಷ್ಟು ವೇಗಗೊಳಿಸಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿ ನಿರ್ಮಾಣವಾಗುವ ಡೇಟಾ ಸೆಂಟರ್‌ಗಳು ಪರಿಸರ ಸ್ನೇಹಿಯಾಗಿರಬೇಕು ಎಂಬುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಕರ್ನಾಟಕದಲ್ಲಿ ಉತ್ಪತ್ತಿಯಾಗುವ ಡೀಪ್‌ಟೆಕ್ ಆವಿಷ್ಕಾರಗಳು ಕೇವಲ ರಾಜ್ಯದ ಅಥವಾ ದೇಶದ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸೀಮಿತವಾಗಬಾರದು, ಜಗತ್ತಿನ ಎದುರಿರುವ ಹವಾಮಾನ ಬದಲಾವಣೆ, ಆರೋಗ್ಯ ತುರ್ತುಸ್ಥಿತಿ ಹಾಗೂ ಆಹಾರ ಭದ್ರತೆಯಂತಹ ಜಾಗತಿಕ ಸವಾಲುಗಳಿಗೆ ಪರಿಹಾರ ಒದಗಿಸುವಂತಾಗಬೇಕು ಎಂಬುದು ಸರ್ಕಾರದ ಮಹದಾಸೆಯಾಗಿದೆ ಎಂದು ನುಡಿದರು.

Read More
Next Story