
ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಸಭಾ ಸಂಸದ ಅಶೋಕ್ ಚವಾಣ್, ಇದೊಂದು "ನಿರಾಸೆ ತರುವ ಬೆಳವಣಿಗೆ" ಎಂದಿದ್ದಾರೆ.
ವೆಚ್ಚ ಭರಿಸಲು ಕರ್ನಾಟಕ ನಕಾರ; ನಾಂದೇಡ್-ಬೀದರ್ ರೈಲ್ವೆ ಯೋಜನೆಗೆ ಹಿನ್ನಡೆ
ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಸಭಾ ಸಂಸದ ಅಶೋಕ್ ಚವಾಣ್, ಇದೊಂದು "ನಿರಾಸೆ ತರುವ ಬೆಳವಣಿಗೆ" ಎಂದಿದ್ದಾರೆ.
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ 'ನಾಂದೇಡ್-ಬೀದರ್ ರೈಲ್ವೆ ಯೋಜನೆಗೆ' ದೊಡ್ಡ ಹಿನ್ನಡೆಯಾಗಿದೆ. ಈ ಯೋಜನೆಯ ಶೇಕಡಾ 50ರಷ್ಟು ವೆಚ್ಚವನ್ನು ಭರಿಸಲು ಕರ್ನಾಟಕ ಸರ್ಕಾರ ನಿರಾಕರಿಸಿದ್ದು, ಯೋಜನೆಯ ಭವಿಷ್ಯ ಅತಂತ್ರವಾಗಿದೆ.
ಗುರುವಾರ ನಾಂದೇಡ್‌ನಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಮಂಡಿಸಿದ ಪ್ರಗತಿ ವರದಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ಫೆಬ್ರವರಿ 5, 2024ರಂದೇ ತನ್ನ ಪಾಲಿನ ಶೇ 50ರಷ್ಟು ವೆಚ್ಚವನ್ನು ಭರಿಸಲು ಒಪ್ಪಿಗೆ ನೀಡಿತ್ತು. ಆದರೆ, ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 27, 2024ರಂದು ಬರೆದ ಪತ್ರದಲ್ಲಿ ತನ್ನ ಪಾಲಿನ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜಕೀಯ ನಾಯಕರ ತೀವ್ರ ಅಸಮಾಧಾನ
ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಸಭಾ ಸಂಸದ ಅಶೋಕ್ ಚವಾಣ್, ಇದೊಂದು "ನಿರಾಸೆ ತರುವ ಬೆಳವಣಿಗೆ" ಎಂದಿದ್ದಾರೆ. "ಕರ್ನಾಟಕದ ಈ ನಿರಾಕರಣೆಯು ಎರಡೂ ರಾಜ್ಯಗಳ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದು, ಪ್ರಾದೇಶಿಕ ಸಂಪರ್ಕ ಹಾಗೂ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ" ಎಂದು ಅವರು ಹೇಳಿದ್ದಾರೆ. ಈ ಅನ್ಯಾಯದ ಬಗ್ಗೆ ಕೇಂದ್ರ ಮಟ್ಟದಲ್ಲಿ ದನಿ ಎತ್ತುವುದರ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೂ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.
ಯೋಜನೆಯ ಮಹತ್ವ ಹಾಗೂ ಹಿನ್ನೆಲೆ
ಸುಮಾರು 157 ಕಿ.ಮೀ ಉದ್ದದ ಈ ನಾಂದೇಡ್-ಬೀದರ್ ರೈಲು ಮಾರ್ಗವನ್ನು ಕೇಂದ್ರ ಸರ್ಕಾರ ಮತ್ತು ಎರಡು ರಾಜ್ಯ ಸರ್ಕಾರಗಳ ಸಮಾನ ವೆಚ್ಚ ಹಂಚಿಕೆ ಮಾದರಿಯಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ಉದ್ದೇಶಿತ ಮಾರ್ಗದಲ್ಲಿ ಸುಮಾರು 101 ಕಿ.ಮೀ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿದ್ದರೆ, 56 ಕಿ.ಮೀ ಕರ್ನಾಟಕದ ವ್ಯಾಪ್ತಿಯಲ್ಲಿದೆ.
ಈ ಯೋಜನೆಯು ಧಾರ್ಮಿಕ, ಆರ್ಥಿಕ ಹಾಗೂ ಪ್ರಾದೇಶಿಕವಾಗಿ ಅತ್ಯಂತ ಮಹತ್ವದ್ದು. ಎರಡು ಪ್ರಮುಖ ಸಿಖ್ ಪುಣ್ಯಕ್ಷೇತ್ರಗಳಾದ ನಾಂದೇಡ್‌ನ 'ಹಜೂರ್ ಸಾಹಿಬ್' ಮತ್ತು ಬೀದರ್‌ನ 'ಗುರುನಾನಕ್ ಜೀರಾ ಸಾಹಿಬ್' ನಡುವೆ ನೇರ ಸಂಪರ್ಕ ಕಲ್ಪಿಸುತ್ತದೆ.
ಪ್ರವಾಸೋದ್ಯಮದ ಜೊತೆಗೆ ವ್ಯಾಪಾರ-ವಹಿವಾಟು ಮತ್ತು ಉದ್ಯೋಗ ಸೃಷ್ಟಿಗೆ ಈ ಯೋಜನೆ ಪೂರಕವಾಗಲಿದೆ. ನಾಂದೇಡ್ ಮತ್ತು ಬೆಂಗಳೂರು ನಡುವಿನ ಪ್ರಯಾಣದ ದೂರ ಹಾಗೂ ಸಮಯವನ್ನು ಈ ಮಾರ್ಗ ಗಣನೀಯವಾಗಿ ಕಡಿಮೆ ಮಾಡುತ್ತದೆ. ಹಲವು ವರ್ಷಗಳಿಂದ ಈ ಯೋಜನೆಗಾಗಿ ಸಕ್ರಿಯ ಪ್ರಯತ್ನಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರ ಮತ್ತು ಎರಡೂ ರಾಜ್ಯ ಸರ್ಕಾರಗಳ ಮುಂದಿನ ಮಾತುಕತೆಗಳ ಮೇಲೆಯೇ ಈ ಯೋಜನೆಯ ಭವಿಷ್ಯ ನಿಂತಿದೆ.

