ಮೊದಲ ಹಂತದಲ್ಲಿ 101 ತಾಲೂಕುಗಳು ಬರಪೀಡಿತ: ಡಿಸಿಎಂ ಘೋಷಣೆ
x

ಮೊದಲ ಹಂತದಲ್ಲಿ 101 ತಾಲೂಕುಗಳು ಬರಪೀಡಿತ: ಡಿಸಿಎಂ ಘೋಷಣೆ

ರಾಜ್ಯದಲ್ಲಿನ ಒಟ್ಟು 190 ತಾಲೂಕುಗಳಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದೆ. ಇದರಲ್ಲಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವಿಂಗಡಿಸಲಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೈಕೊಟ್ಟ ಪರಿಣಾಮ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಜಲಾಶಯಗಳು ಬತ್ತುತ್ತಿವೆ ಮತ್ತು ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಭೀತಿಯಲ್ಲಿ ಜನರು ಕಾಲ ಕಳೆಯುತ್ತಿದ್ದಾರೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಸರ್ಕಾರ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿನ ಒಟ್ಟು 190 ತಾಲೂಕುಗಳಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದೆ. ಇದರಲ್ಲಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವಿಂಗಡಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡಿನಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.31 ಮತ್ತು ಕರಾವಳಿ ಭಾಗದಲ್ಲಿ ಶೇ.24 ರಷ್ಟು ಮಳೆ ಕೊರತೆ ದಾಖಲಾಗಿದೆ. 13 ತಾಲೂಕುಗಳಲ್ಲಿ ಅತ್ಯಂತ ಭೀಕರ ಮಳೆ ಕೊರತೆಯು ಕೃಷಿಕರ ಬದುಕನ್ನು ಮೂರಾಬಟ್ಟೆ ಮಾಡಿದೆ.

ಜಲಾಶಯಗಳು, ಅಂತರ್ಜಲದ ಸಂಕಷ್ಟ

ರಾಜ್ಯದ ಜೀವಾಡಿಯಾಗಿರುವ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕೇವಲ 684 ಟಿಎಂಸಿಗೆ ಕುಸಿದಿದೆ. ಒಳಹರಿವು ಸಂಪೂರ್ಣವಾಗಿ ಕ್ಷೀಣಿಸಿರುವುದರಿಂದ ನೀರಾವರಿ ಮತ್ತು ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ರಾಜ್ಯದ 131 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳಲ್ಲಿ ನೀರು ಸಿಗದ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಸುಮಾರು 2,021 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗುವ ಆತಂಕವಿದೆ. ಕೇವಲ ಮಾನವ ಕುಲಕ್ಕೆ ಮಾತ್ರವಲ್ಲದೆ, ಜಾನುವಾರುಗಳಿಗೂ ಮೇವಿನ ಅಭಾವ ಕಾಡಲಾರಂಭಿಸಿದೆ. ಪ್ರಸ್ತುತ ರಾಜ್ಯದಲ್ಲಿ 151 ಲಕ್ಷ ಟನ್ ಮೇವು ಲಭ್ಯವಿದ್ದು, ಇದು ಕೇವಲ 33 ವಾರಗಳಿಗೆ ಮಾತ್ರ ಸಾಕಾಗಲಿದೆ. ಅದರಲ್ಲಿಯೂ 49 ತಾಲೂಕುಗಳಲ್ಲಿ ಪರಿಸ್ಥಿತಿ ಅತಿ ಗಂಭೀರವಾಗಿದ್ದು, 20 ವಾರಗಳಿಗಿಂತ ಕಡಿಮೆ ಅವಧಿಗೆ ಮಾತ್ರ ಮೇವು ಲಭ್ಯವಿದೆ. ಜಾನುವಾರುಗಳನ್ನು ಮಾರಾಟ ಮಾಡದಂತೆ ತಡೆಯಲು ಸರ್ಕಾರ ಮೇವು ಕಿಟ್‌ಗಳನ್ನು ವಿತರಿಸುವ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ವಲಸೆ ತಡೆಗೆ ವಿಬಿಜಿ ರಾಮ್‌ ಜಿ ಅಸ್ತ್ರ

ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಿಂದ ನಗರಗಳಿಗೆ ಜನರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಯುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ರಾಜ್ಯಾದ್ಯಂತ ಚುರುಕುಗೊಳಿಸಲಾಗಿದೆ. ಜುಲೈನಿಂದ ಆಗಸ್ಟ್‌ ಅವಧಿಯಲ್ಲಿ ಈಗಾಗಲೇ 66.73 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಬರ ನಿರ್ವಹಣೆಗೆ ಹಣಕಾಸಿನ ನೆರವು

ಸರ್ಕಾರವು ಈಗಾಗಲೇ ಬರ ನಿರ್ವಹಣೆಗಾಗಿ 635 ಕೋಟಿ ರೂ. ಅನುದಾನವನ್ನು ವಿವಿಧ ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ. ಪ್ರಸ್ತುತ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ 329 ಕೋಟಿ ರೂ. ಲಭ್ಯವಿದೆ. ಕುಡಿಯುವ ನೀರಿನ ತುರ್ತು ಪೂರೈಕೆಗಾಗಿ 117 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ 189 ಕೋಟಿ ರೂ. ಹಂಚಿಕೆ ಮಾಡಲಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ರಾಜ್ಯಕ್ಕೆ ಬರ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ಒಟ್ಟು 1,239 ಕೋಟಿ ರೂ. ದೊರೆಯಬೇಕಿದೆ. ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರಕ್ಕೆ ಸಮಗ್ರ ವರದಿಯನ್ನು ಸಲ್ಲಿಸುತ್ತಿದ್ದು, ತುರ್ತು ಅಗತ್ಯವಾಗಿ ಮೊದಲ ಕಂತಾಗಿ 450 ಕೋಟಿ ರೂ. ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಕೇಂದ್ರವು ರಾಜಕೀಯ ಭೇದವಿಲ್ಲದೆ ತಕ್ಷಣ ಸ್ಪಂದಿಸಬೇಕೆಂದು ತಿಳಿಸಿದರು.

ಬರ ಘೋಷಣೆಯಾದ ಬಳಿಕ, ಈಗ ಸರ್ಕಾರಕ್ಕೆ ಇರುವ ದೊಡ್ಡ ಸವಾಲೆಂದರೆ ಪರಿಹಾರ ಕಾರ್ಯಗಳು ಸರಿಯಾಗಿ ತಲುಪುವುದೇ ಎಂಬುದು. ಬರದ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ತಳಮಟ್ಟದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂಪನ್ಮೂಲಗಳನ್ನು ಮರುಪೂರಣ ಮಾಡುವುದು, ಜಾನುವಾರುಗಳಿಗೆ ಮೇವು ಒದಗಿಸುವುದು ಮತ್ತು ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದು ಸರ್ಕಾರದ ಮುಂದಿನ ದಿನಗಳ ದೊಡ್ಡ ಪರೀಕ್ಷೆಯಾಗಿದೆ.

Read More
Next Story