
ಸೈಬರ್ ವಂಚನೆಗೆ ಸಂಬಂಧಿಸಿದಂತೆ 14,885 ಪ್ರಕರಣಗಳು ದಾಖಲಾಗಿವೆ
ರಾಜ್ಯದಲ್ಲಿ ಅಪರಾಧ ಹೆಚ್ಚಳ: 'ಕಳ್ಳತನ' ನಂ.1, ಬೆನ್ನಿಗೇ ಇದೆ 'ಸೈಬರ್' ವಂಚನೆ; ಆತಂಕ ಸೃಷ್ಟಿಸಿದ ಪೋಕ್ಸೊ
ರಾಜ್ಯದಲ್ಲಿ ಒಟ್ಟು 19,998 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರು ನಗರ (8,203 ಪ್ರಕರಣ) ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ (27 ಪ್ರಕರಣ) ಅತ್ಯಂತ ಕಡಿಮೆ ಕಳ್ಳತನ ದಾಖಲಾದ ಜಿಲ್ಲೆಯಾಗಿದೆ.
ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದ್ದು, 2025ನೇ ಸಾಲಿನ ಅಪರಾಧಗಳ ಪಟ್ಟಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸುವಂತಿದೆ. ಕಳೆದ ವರ್ಷ ದಾಖಲಾದ ಒಟ್ಟು ಪ್ರಕರಣಗಳಲ್ಲಿ 'ಕಳ್ಳತನ' ಮೊದಲ ಸ್ಥಾನದಲ್ಲಿದ್ದರೆ, ಹೈಟೆಕ್ ಯುಗದ ಪಿಡುಗಾಗಿರುವ 'ಸೈಬರ್ ಕ್ರೈಂ' ಎರಡನೇ ಸ್ಥಾನ ಆಕ್ರಮಿಸಿಕೊಂಡಿದೆ. ವಿಶೇಷವಾಗಿ ಮಕ್ಕಳ ಮೇಲಿನ ದೌರ್ಜನ್ಯ (ಪೋಕ್ಸೊ) ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಉಳಿದಂತೆ ಜೂಜಾಟ, ಮಾರಣಾಂತಿಕ ಹಲ್ಲೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಂತರದ ಸ್ಥಾನಗಳಲ್ಲಿವೆ.
ರಾಜಧಾನಿಯಲ್ಲೇ ಕಳ್ಳರ ಹಾವಳಿ ಹೆಚ್ಚು
ಕಳೆದೊಂದು ವರ್ಷದ ಅವಧಿಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 19,998 ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರು ನಗರವೊಂದರಲ್ಲೇ 8,203 ಪ್ರಕರಣಗಳು ದಾಖಲಾಗುವ ಮೂಲಕ ಕ್ರೈಂ ಲಿಸ್ಟ್‌ನಲ್ಲಿ ರಾಜಧಾನಿ ಅಗ್ರಸ್ಥಾನದಲ್ಲಿದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 27 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲೇ ಅತಿ ಕಡಿಮೆ ಕಳ್ಳತನ ನಡೆದ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಇನ್ನು ವಿಶೇಷವೆಂಬಂತೆ ಇದೇ ಮೊದಲ ಬಾರಿಗೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಒಂದು ಕಳ್ಳತನ ಪ್ರಕರಣವೂ ದಾಖಲಾಗಿಲ್ಲ ಎಂಬುದು ಗಮನಾರ್ಹ.
ವಿದ್ಯಾವಂತರೇ ಸೈಬರ್ ವಂಚಕರ ಟಾರ್ಗೆಟ್
ಸೈಬರ್ ವಂಚನೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಅಂಕಿಅಂಶಗಳೇ ಸಾಕ್ಷಿ. 2024ರಲ್ಲಿ 22,478 ಇದ್ದ ಸೈಬರ್ ಪ್ರಕರಣಗಳು 2025ರಲ್ಲಿ 14,885ಕ್ಕೆ ಇಳಿಕೆಯಾಗಿದ್ದರೂ, ವಂಚನೆಯ ಸ್ವರೂಪ ಗಂಭೀರವಾಗಿದೆ. ಒಟ್ಟು ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲೇ ಸಿಂಹಪಾಲು ಅಂದರೆ 10,668 ಪ್ರಕರಣಗಳು ದಾಖಲಾಗಿವೆ. ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರೇ ಶೇ.68ರಷ್ಟು ಪ್ರಕರಣಗಳಲ್ಲಿ ವಂಚಕರ ಬಲೆಗೆ ಬಿದ್ದಿರುವುದು ದುರಂತ. ಇನ್ನು ರಾಯಚೂರು ಜಿಲ್ಲೆಯಲ್ಲಿ ಕೇವಲ 24 ಮತ್ತು ರೈಲ್ವೆ ಠಾಣೆಗಳಲ್ಲಿ 11 ಸೈಬರ್ ಪ್ರಕರಣಗಳು ದಾಖಲಾಗಿವೆ. ಆದರೆ, ಸೈಬರ್ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಮತ್ತು ಶಿಕ್ಷೆಯ ಪ್ರಮಾಣ ಶೇ.12ರ ಗಡಿ ದಾಟಿಲ್ಲ ಎನ್ನುವುದು ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ಬೆಚ್ಚಿಬೀಳಿಸುತ್ತಿದೆ ಮಕ್ಕಳ ಮೇಲಿನ ದೌರ್ಜನ್ಯ
ಮಕ್ಕಳ ಸುರಕ್ಷತೆಯ ವಿಷಯದಲ್ಲಿ 2025 ಕರಾಳ ವರ್ಷ. ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ 3,307ಕ್ಕೆ ಏರಿಕೆಯಾಗಿದ್ದರೆ, ಇತರೆ ಪೋಕ್ಸೊ ಪ್ರಕರಣಗಳ ಸಂಖ್ಯೆ 1,248ಕ್ಕೆ ತಲುಪಿದೆ. 2024-25ರ ಅವಧಿಯಲ್ಲಿ 2,254 ಪೋಕ್ಸೊ ಪ್ರಕರಣಗಳಷ್ಟೆ ದಾಖಲಾಗಿದ್ದವು. ಆದರೆ 2025ರಲ್ಲಿ ಒಂದೇ ವರ್ಷ 1,053 ಪ್ರಕರಣಗಳು ಹೆಚ್ಚಳವಾಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
ಕೊಲೆ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳು
ಗಂಭೀರ ಸ್ವರೂಪದ ಅಪರಾಧಗಳೂ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆದಿವೆ. 2025ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 1,210 ಕೊಲೆ ಪ್ರಕರಣಗಳು, 3,258 ಕೊಲೆ ಯತ್ನ ಪ್ರಕರಣಗಳು ನಡೆದಿವೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 656 ಅತ್ಯಾಚಾರ ಪ್ರಕರಣಗಳು, 5,840 ಲೈಂಗಿಕ ಶೋಷಣೆ ಪ್ರಕರಣಗಳು ಹಾಗೂ ಬರೋಬ್ಬರಿ 16,713 ಮಾನಸಿಕ ಕಿರುಕುಳ ಪ್ರಕರಣಗಳು ವರದಿಯಾಗಿವೆ. ಪತಿಯಿಂದ ಪತ್ನಿಗೆ ದೈಹಿಕ ಕಿರುಕುಳ ನೀಡಿದ 2,830 ಪ್ರಕರಣಗಳು ಹಾಗೂ 116 ವರದಕ್ಷಿಣೆ ಸಾವು ಪ್ರಕರಣಗಳು ಠಾಣೆಯ ಮೆಟ್ಟಿಲೇರಿವೆ. ದರೋಡೆಗೆ ಸಂಬಂಧಿಸಿದಂತೆ 143 ಡಕಾಯಿತಿ ಹಾಗೂ 625 ಸುಲಿಗೆ ಪ್ರಕರಣಗಳು ದಾಖಲಾದರೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ 2,411 ದೂರುಗಳು ದಾಖಲಾಗಿವೆ. ಮಾರಣಾಂತಿಕ ಹಲ್ಲೆಯ ಒಟ್ಟು 11,408 ಪ್ರಕರಣಗಳು ವರದಿಯಾಗಿವೆ.
ಗಂಭೀರವಲ್ಲದ ಪ್ರಕರಣಗಳೂ ಸೇರ್ಪಡೆ
ಮಾರಣಾಂತಿಕವಲ್ಲದ ಪ್ರಕರಣಗಳ ಸಂಖ್ಯೆ 31,751ರಷ್ಟಿದೆ. ಇವುಗಳಲ್ಲಿ ಸಣ್ಣಪುಟ್ಟ ಜಗಳ, ನಿಂದನೆ, ಖಾಸಗಿ ದೂರುಗಳು, ಶೂನ್ಯ ಎಫ್‌ಐಆರ್‌ಗಳು ಮತ್ತು ಸಾಮಾನ್ಯ ಅಪಘಾತಗಳು ಸೇರಿವೆ. ಈ ಸಂಖ್ಯೆ ದೊಡ್ಡದಾಗಿದ್ದರೂ, ಇವುಗಳಿಂದ ಕಾನೂನು ಸುವ್ಯವಸ್ಥೆಯ ಬಗ್ಗೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಇಲಾಖೆಯ ವರದಿಗಳು ತಿಳಿಸಿವೆ.

