ಸಭಾಪತಿ ಚುನಾವಣೆ ಕಾವು: ಸಲೀಂ ಅಹಮದ್ vs ಪಿ.ಹೆಚ್. ಪೂಜಾರ್ ನಾಮಪತ್ರ ಸಲ್ಲಿಕೆ
x

ಸಭಾಪತಿ ಚುನಾವಣೆ ಕಾವು: ಸಲೀಂ ಅಹಮದ್ vs ಪಿ.ಹೆಚ್. ಪೂಜಾರ್ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್ತಿನ ಒಟ್ಟು 75 ಸ್ಥಾನಗಳಲ್ಲಿ ಕಾಂಗ್ರೆಸ್ 38 ಸದಸ್ಯ ಬಲವನ್ನು ಹೊಂದಿದ್ದು, ಬಹುಮತದ ಬೆಂಬಲವನ್ನು ಹೊಂದಿದೆ.ಬಿಜೆಪಿ 25, ಜೆಡಿಎಸ್ 6, ಪಕ್ಷೇತರ 1, 5 ಸ್ಥಾನಗಳು ಖಾಲಿ ಇವೆ.


Click the Play button to hear this message in audio format

ರಾಜಕಾರಣದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಇದೀಗ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದೆ. ಆಡಳಿತ ಪಕ್ಷವಾದ ಕಾಂಗ್ರೆಸ್‌ನಿಂದ ಸಲೀಂ ಅಹಮದ್ ಅವರು ಮತ್ತು ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಜೆಪಿಯ ಪಿ.ಹೆಚ್. ಪೂಜಾರ್ ಅವರು ವಿಧಾನ ಪರಿಷತ್ ಕಾರ್ಯದರ್ಶಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

ಸದ್ಯದ ಬಲಾಬಲವನ್ನು ಗಮನಿಸಿದರೆ, ವಿಧಾನ ಪರಿಷತ್ತಿನ ಒಟ್ಟು 75 ಸ್ಥಾನಗಳಲ್ಲಿ ಕಾಂಗ್ರೆಸ್ 38 ಸದಸ್ಯ ಬಲವನ್ನು ಹೊಂದಿದ್ದು, ಬಹುಮತದ ನಿಚ್ಚಳ ಬೆಂಬಲವನ್ನು ಹೊಂದಿದೆ. ಬಿಜೆಪಿ 25, ಜೆಡಿಎಸ್ 6, ಪಕ್ಷೇತರ 1 ಹಾಗೂ ಐದು ಸ್ಥಾನಗಳು ಖಾಲಿ ಇವೆ. ಈ ಪ್ರಕಾರ, ಸಲೀಂ ಅಹಮದ್ ಅವರ ಗೆಲುವು ಬಹುತೇಕ ಖಚಿತವೆಂದೇ ಹೇಳಲಾಗುತ್ತಿದೆ. ನಾಮಪತ್ರ ಸಲ್ಲಿಕೆಯ ನಂತರ ಮಾತನಾಡಿದ ಬಿಜೆಪಿಯ ಪಿ.ಹೆಚ್. ಪೂಜಾರ್, "ಆಡಳಿತ ಪಕ್ಷದ ಸಂವಿಧಾನಬಾಹಿರ ನಡವಳಿಕೆಗಳಿಂದಲೇ ಈ ಅನಿವಾರ್ಯ ಚುನಾವಣೆ ಬಂದೊದಗಿದೆ. ಗೆಲುವು-ಸೋಲಿಗಿಂತಲೂ ಮಿಗಿಲಾಗಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಈ ಸ್ಪರ್ಧೆ ಮುಖ್ಯ" ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಬಸವರಾಜ ಹೊರಟ್ಟಿ ಅವರ ಉಪಸ್ಥಿತಿ

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆಯ ಬಳಿಕ ಮೊದಲ ಬಾರಿಗೆ ಕಲಾಪದಲ್ಲಿ ಭಾಗವಹಿಸಿದರು. ಬಲವಂತದ ರಾಜೀನಾಮೆಯ ನೋವನ್ನು ಹೊರಹಾಕಿದ್ದ ಅವರು, ಇಂದಿನ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಪಕ್ಕದ ಆಸನದಲ್ಲಿ ಕುಳಿತು ಗಮನ ಸೆಳೆದರು. ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ಅವರು ಕಲಾಪದ ಜವಾಬ್ದಾರಿಯನ್ನು ನಿರ್ವಹಿಸಿದರು. ಕಲಾಪದ ಮೊದಲ ದಿನ ಇತ್ತೀಚೆಗೆ ಅಗಲಿದ 13 ಮಂದಿ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಮೌನಾಚರಣೆಯ ಮೂಲಕ ಸದನವು ಅಗಲಿದ ಆತ್ಮಗಳಿಗೆ ನಮನ ಸಲ್ಲಿಸಿತು. ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಸದಸ್ಯರು ದಿ. ಚೆನ್ನಮ್ಮ ದೇವೇಗೌಡ, ಗಾಯಕಿ ಎಸ್. ಜಾನಕಿ, ಸಚಿವ ಡಿ. ಸುಧಾಕರ್ ಸೇರಿದಂತೆ ಹಲವರ ಸ್ಮರಣೆಯನ್ನು ಮಾಡಿದರು.

ಬಿಸಿಯೂಟ ಯೋಜನೆಗೆ ಚನ್ನಮ್ಮ ಹೆಸರು

ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ದಿ. ಚೆನ್ನಮ್ಮ ದೇವೇಗೌಡರ ಕುರಿತು ಭಾವುಕರಾಗಿ ಮಾತನಾಡಿದರು. ಬಂದವರಿಗೆಲ್ಲ ಅತಿಥಿ ಸತ್ಕಾರ ಮಾಡುತ್ತಾ 'ಅನ್ನಪೂರ್ಣೇಶ್ವರಿ' ಎಂದೇ ಖ್ಯಾತರಾಗಿದ್ದ ಅಮ್ಮನವರ ಹೆಸರನ್ನು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇಡಬೇಕು ಎಂದು ಒತ್ತಾಯಿಸಿದರು. ಇದೇ ಅಭಿಪ್ರಾಯವನ್ನು ಬೆಂಬಲಿಸಿದ ನೂತನ ಸದಸ್ಯ ಮಳವಳ್ಳಿ ಶಿವಣ್ಣ ಅವರು, ಕೇಂದ್ರ ಸರ್ಕಾರದ ಅನ್ನಭಾಗ್ಯ ಯೋಜನೆಗೂ ಚೆನ್ನಮ್ಮ ಅವರ ಹೆಸರಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಾಂಸ್ಕೃತಿಕ ನಮನ ಮತ್ತು ಸ್ಮಾರಕಗಳ ಬೇಡಿಕೆ

ಕನ್ನಡದ ಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೆಸ್ ಸದಸ್ಯೆ ಉಮಾಶ್ರೀ, ಅವರ ಅಪಾರ ಕೊಡುಗೆಯನ್ನು ಸ್ಮರಿಸಿದರು. ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆದ ಹಿನ್ನೆಲೆಯಲ್ಲಿ, ಅವರ ನೆನಪಿಗಾಗಿ ರಾಜ್ಯ ಸರ್ಕಾರ ಒಂದು ಸ್ಮಾರಕವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು. ಇದರ ಬೆನ್ನಲ್ಲೇ ಮಾತನಾಡಿದ ಬಿಜೆಪಿ ಶಾಸಕ ರವಿಕುಮಾರ್, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಯುವಕರಿಗಾಗಿ ದಿ. ಎಸ್. ಜಾನಕಿ ಮತ್ತು ದಿ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆಯಾಗಬೇಕೆಂದು ಪ್ರಸ್ತಾವನೆ ಸಲ್ಲಿಸಿದರು.

ಬಿಜೆಪಿ ಶಾಸಕ ನವೀನ್, "ಜನಪ್ರತಿನಿಧಿಗಳು ಅಥವಾ ಶಾಸಕರು ಅನಾರೋಗ್ಯಕ್ಕೆ ಒಳಗಾದಾಗ, ಸರ್ಕಾರವು ಮುತುವರ್ಜಿ ವಹಿಸಿ ತಜ್ಞ ವೈದ್ಯರ ತಂಡವನ್ನು ರಚಿಸಬೇಕು. ಕುಟುಂಬ ಸದಸ್ಯರಿಗೆ ಸಕಾಲದಲ್ಲಿ ನಿಖರವಾದ ಮಾಹಿತಿ ಲಭಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ" ಎಂದು ಮನವಿ ಮಾಡಿದರು. ಇದು ಸದನದ ಎಲ್ಲ ಸದಸ್ಯರ ಗಮನ ಸೆಳೆಯಿತು.

ಸಂತಾಪ ಸೂಚನೆ ಮತ್ತು ಮನವಿಗಳ ಸಲ್ಲಿಕೆಯ ನಂತರ, ಕಲಾಪವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು. ನಾಳೆ ಸಭಾಪತಿ ಚುನಾವಣೆ ನಡೆಯಲಿದೆ. ಆಡಳಿತ ಪಕ್ಷದ ಬಹುಮತದ ಆಟದಲ್ಲಿ ಸಲೀಂ ಅಹಮದ್ ಸಭಾಪತಿಯಾಗುವುದು ಖಚಿತವಾದರೂ, ಮೈತ್ರಿಕೂಟದ ಸದಸ್ಯರು ಸದನದಲ್ಲಿ ಹೇಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story