
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕದನ: ಸೆ.10ಕ್ಕೆ ಡಿಕೆಶಿ-ರಾಜಣ್ಣ ಮುಖಾಮುಖಿ ಸಾಧ್ಯತೆ?
ಜ.29ಕ್ಕೆ ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಡಿ.ಕೆ. ಶಿವಕುಮಾರ್, ಕೆ.ಎನ್. ರಾಜಣ್ಣ ನಡುವಿನ ಸಂಘರ್ಷ ಚುನಾವಣೆ ಮುಂದೂಡಿಕೆಗೆ ಕಾರಣವಾಗಿತ್ತು ಎನ್ನಲಾಗಿದೆ.
ರಾಜ್ಯ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿಯಮಿತದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಅಧಿಕೃತ ನೋಟಿಸ್ ಹೊರಡಿಸಲಾಗಿದ್ದು, ಇದೇ ತಿಂಗಳು 10 ರಂದು ಚುನಾವಣೆ ನಡೆಯಲಿದೆ.
ಸೆ.10ರ ಬೆಳಿಗ್ಗೆ 9 ಗಂಟೆಯಿಂದಲೇ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ. ಆಕಾಂಕ್ಷಿ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸಬೇಕು. ನಂತರ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಘೋಷಿಸಲಾಗುತ್ತದೆ. ತದನಂತರ ಸ್ಪರ್ಧೆಯಿಂದ ಹಿಂದೆ ಸರಿಯಲು ಬಯಸುವವರಿಗೆ 30 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ ಉಳಿದುಕೊಂಡ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಮಧ್ಯಾಹ್ನ 11:55 ರಿಂದ 12:40ರವರೆಗೆ ಗೌಪ್ಯ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ನಡೆಸಿ ಫಲಿತಾಂಶವನ್ನು ಘೋಷಿಸಲಾಗುತ್ತದೆ.
ಹಿಂದಿನ ಜಟಾಪಟಿ, ಮುಂದೂಡಿಕೆ
ಕಳೆದ ಜನವರಿ 29ಕ್ಕೆ ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಚಿವ ಕೆ.ಎನ್. ರಾಜಣ್ಣ ನಡುವಿನ ಸಂಘರ್ಷ ಈ ಚುನಾವಣೆಯ ಮುಂದೂಡಿಕೆಗೆ ಕಾರಣವಾಗಿತ್ತು ಎಂದು ಹೇಳಲಾಗಿದೆ. ಬ್ಯಾಂಕ್‌ನ ಅಧ್ಯಕ್ಷ ಸ್ಥಾನವನ್ನು ತಮ್ಮ ಆಪ್ತ ಎಸ್ ರವಿ ಅವರಿಗೆ ಕೊಡಿಸಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದರೆ, ಅತ್ತ ಕೆ.ಎನ್. ರಾಜಣ್ಣ ಅವರು ತಮ್ಮದೇ ಆದ ಪ್ರಬಲ ಬೆಂಬಲದೊಂದಿಗೆ ಅಧ್ಯಕ್ಷ ಗಾದಿ ಏರಲು ಹವಣಿಸುತ್ತಿದ್ದರು. ಅಂದು ಪಕ್ಷದ ವರಿಷ್ಠರ ಹಸ್ತಕ್ಷೇಪದಿಂದಾಗಿ ಚುನಾವಣೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟು, ಬ್ಯಾಂಕ್ ಆಡಳಿತಾಧಿಕಾರಿಯ ಸುಪರ್ದಿಗೆ ಹೋಗಿತ್ತು. ಇದೀಗ ಸುಮಾರು ಎಂಟು ತಿಂಗಳ ಬಳಿಕ ಮತ್ತೆ ಚುನಾವಣಾ ಅಖಾಡ ಸಿದ್ಧವಾಗಿದೆ.
ರಾಜಕೀಯ ಸಮೀಕರಣಗಳ ಲೆಕ್ಕಾಚಾರ
ಈ ಬಾರಿಯ ಚುನಾವಣೆ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ಕೆ.ಎನ್. ರಾಜಣ್ಣ ಅವರು ಸುಮಾರು 11 ನಿರ್ದೇಶಕರ ಬೆಂಬಲವನ್ನು ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಡಳಿತ ಮಂಡಳಿಯಲ್ಲಿ ಅವರು ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿಯ ಕೆಲವು ನಿರ್ದೇಶಕರು ಹಾಗೂ ಜೆಡಿಎಸ್ ಬೆಂಬಲಿತ ನಿರ್ದೇಶಕರು ಕೂಡ ರಾಜಣ್ಣ ಅವರಿಗೆ ಬೆಂಬಲ ನೀಡಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಕೆಎಂಎಫ್ ಮತ್ತು ಅಪೆಕ್ಸ್ ಬ್ಯಾಂಕ್‌ನಂತಹ ಸಹಕಾರಿ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವುದು ಡಿ.ಕೆ. ಶಿವಕುಮಾರ್ ಅವರ ದೀರ್ಘಕಾಲೀನ ತಂತ್ರವಾಗಿದೆ. ಪಕ್ಷದ ಆಂತರಿಕ ರಾಜಕೀಯದಲ್ಲಿ ಕೆ.ಎನ್. ರಾಜಣ್ಣ ಅವರು ಸವಾಲಾಗಿ ಪರಿಣಮಿಸಿರುವುದರಿಂದ, ಈ ಸ್ಥಾನವನ್ನು ತಮ್ಮ ಆಪ್ತರಿಗೆ ದಕ್ಕಿಸಿಕೊಡುವುದು ಡಿಕೆಶಿವಕುಮಾರ್‌ಗೆ ಅನಿವಾರ್ಯವಾಗಿದೆ.
ಬಿಜೆಪಿ-ಜೆಡಿಎಸ್ ಪಾತ್ರವೇನು?
ಸಹಕಾರಿ ಸಂಸ್ಥೆಗಳ ಚುನಾವಣೆಗಳಲ್ಲಿ ಯಾವಾಗಲೂ ರಾಜಕೀಯ ಪಕ್ಷಗಳ ಪರೋಕ್ಷ ಬೆಂಬಲ ನಿರ್ಣಾಯಕವಾಗಿರುತ್ತದೆ. ಆಡಳಿತ ಮಂಡಳಿಯಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ನಿರ್ದೇಶಕರು ಯಾವ ಬಣಕ್ಕೆ ವಾಲುತ್ತಾರೆ ಎಂಬುದು ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರಾಜಣ್ಣ ಅವರು ಒಂದು ವೇಳೆ ಬಿಜೆಪಿ ಮತ್ತು ಜೆಡಿಎಸ್ ನಿರ್ದೇಶಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ಆಂತರಿಕ ಸಮೀಕರಣಗಳು ಬದಲಾಗಲಿವೆ. ಬೆಳ್ಳಿ ಪ್ರಕಾಶ್ ಅವರ ನೇತೃತ್ವದ ಆಡಳಿತ ಮಂಡಳಿಯ ಅವಧಿಯು 2025ರ ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡಿತ್ತು. ತದನಂತರ ಹೊಸ ಆಡಳಿತಕ್ಕಾಗಿ ನಡೆದಿದ್ದ ಸಿದ್ಧತೆಗಳು ಅತಂತ್ರವಾಗಿದ್ದವು. ಜನವರಿ 2026 ರಲ್ಲಿ ನಾಮಪತ್ರ ಸಲ್ಲಿಕೆ ನಡೆದರೂ ರಾಜಕೀಯ ಮೇಲಾಟಗಳಿಂದಾಗಿ ಅದು ಮುಂದುವರಿಯಲಿಲ್ಲ. ಈಗ ಚುನಾವಣಾ ಪ್ರಾಧಿಕಾರವು ಮತ್ತೆ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದು, ಕಡ್ಡಾಯವಾಗಿ ಚುನಾವಣೆ ನಡೆಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸವಾಲಿನ ಸನ್ನಿವೇಶ
ಕೆ.ಎನ್. ರಾಜಣ್ಣ ಅವರು ಸಚಿವರಾಗಿದ್ದಾಗ ರಾಜಕೀಯವಾಗಿ ಕೆಲವು ಸಂಕಷ್ಟಗಳನ್ನು ಎದುರಿಸಿ ಅಧಿಕಾರ ಕಳೆದುಕೊಂಡಿದ್ದರು. ಇದೀಗ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಾದಿ ಅವರ ರಾಜಕೀಯ ಮರುಜನ್ಮಕ್ಕೆ ವೇದಿಕೆಯಾಗಬಲ್ಲದು. ಮತ್ತೊಂದೆಡೆ, ರಾಜ್ಯದ ರಾಜಕಾರಣದಲ್ಲಿ ಉನ್ನತ ಸ್ಥಾನದ ಕನಸು ಕಾಣುತ್ತಿರುವ ಡಿ.ಕೆ. ಶಿವಕುಮಾರ್ ಬಣಕ್ಕೆ, ಅಪೆಕ್ಸ್ ಬ್ಯಾಂಕ್ ಕೈತಪ್ಪುವುದು ದೊಡ್ಡ ಹಿನ್ನಡೆಯಾಗಲಿದೆ. ಸೆಪ್ಟೆಂಬರ್ 10 ರಂದು ನಡೆಯುವ ಈ ಆಯ್ಕೆ ಪ್ರಕ್ರಿಯೆಯು ಕಾಂಗ್ರೆಸ್‌ನೊಳಗಿನ ಶೀತಲ ಸಮರಕ್ಕೆ ತೆರೆ ಎಳೆಯುವುದೇ ಅಥವಾ ಹೊಸ ಸಂಘರ್ಷಕ್ಕೆ ನಾಂದಿ ಹಾಡುವುದೇ ಎಂಬುದು ಕುತೂಹಲ ಮೂಡಿಸಿದೆ. ಅಭ್ಯರ್ಥಿಯಾಗಿ ರಾಜಣ್ಣ ಅವರೇ ಕಣಕ್ಕಿಳಿಯುತ್ತಾರೋ ಅಥವಾ ತಮ್ಮ ಬೆಂಬಲಿಗರನ್ನು ನಿಲ್ಲಿಸುತ್ತಾರೋ ಎಂಬುದು ಸೆಪ್ಟೆಂಬರ್ 10 ರ ಬೆಳಿಗ್ಗೆ ನಾಮಪತ್ರ ಸಲ್ಲಿಕೆಯ ವೇಳೆ ಖಚಿತವಾಗಲಿದೆ. ಸಹಕಾರಿ ಸಂಸ್ಥೆ ಎಂಬ ನಾಮಫಲಕದ ಹಿಂದೆ ನಡೆಯುತ್ತಿರುವ ಈ ರಾಜಕೀಯ ಜಿದ್ದಾಜಿದ್ದಿ, ರಾಜ್ಯದ ಸಹಕಾರಿ ವಲಯದ ಮೇಲಿನ ರಾಜಕೀಯ ಹಿಡಿತಕ್ಕೆ ಒಂದು ಸಾಕ್ಷಿಯಾಗಿದೆ.

