ಅಧಿಕಾರಕ್ಕಾಗಿ ‘ಡಿಕೆಶಿ’ ಹಿಂದೆ ಹೋಗಿ, ಸಂಘಟನೆಗಾಗಿ ನನ್ನ ಬಳಿ ಬನ್ನಿ; ಸಂಚಲನ ಸೃಷ್ಟಿಸಿದ ಹರಿಪ್ರಸಾದ್‌ ಹೇಳಿಕೆ
x

ಅಧಿಕಾರಕ್ಕಾಗಿ ‘ಡಿಕೆಶಿ’ ಹಿಂದೆ ಹೋಗಿ, ಸಂಘಟನೆಗಾಗಿ ನನ್ನ ಬಳಿ ಬನ್ನಿ; ಸಂಚಲನ ಸೃಷ್ಟಿಸಿದ ಹರಿಪ್ರಸಾದ್‌ ಹೇಳಿಕೆ

ಹೊಸ ಸಿಎಂ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಕೆಪಿಸಿಸಿ ಅಧ್ಯಕ್ಷರ ಇಂತಹ ಹೇಳಿಕೆ ಹೊರಬಿದ್ದಿರುವುದು ಭಿನ್ನಮತದ ಕಿಚ್ಚು ಇನ್ನೂ ಆರಿಲ್ಲ ಎಂಬ ವದಂತಿಗಳಿಗೆ ಸಾಕ್ಷಿಯಾಗಿದೆ.


ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸರ್ಕಾರ ಹಾಗೂ ಪಕ್ಷದ ನಡುವೆ ಶೀತಲ ಸಮರ ಆರಂಭವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಇಂತದ್ದೊಂದು ತಲ್ಲಣ ಸೃಷ್ಟಿಸಿದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಬಿ.ಕೆ. ಹರಿಪ್ರಸಾದ್, "ಸರ್ಕಾರದಲ್ಲಿ ಅಧಿಕಾರ, ಸಚಿವ ಸ್ಥಾನ ಅಥವಾ ಯಾವುದೇ ಹುದ್ದೆಗಳು ಬೇಕಾದವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಿಂದೆ ಹೋಗಲಿ. ಪಕ್ಷವನ್ನು ಸಂಘಟಿಸಲು ಮತ್ತು ಬಲಪಡಿಸಲು ಬಯಸುವವರು ನನ್ನ ಜೊತೆ ಬರಲಿ" ಎಂದು ಮುಕ್ತವಾಗಿ ಹೇಳಿದ್ದಾರೆ.

ಹೊಸ ಸಿಎಂ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಕೆಪಿಸಿಸಿ ಅಧ್ಯಕ್ಷರ ಇಂತಹ ಹೇಳಿಕೆ ಹೊರಬಿದ್ದಿರುವುದು ಭಿನ್ನಮತದ ಕಿಚ್ಚು ಇನ್ನೂ ಆರಿಲ್ಲ ಎಂಬ ವದಂತಿಗಳಿಗೆ ಸಾಕ್ಷಿಯಾಗಿದೆ.

ಬಿ.ಕೆ. ಹರಿಪ್ರಸಾದ್ ಅವರ ಮಾತುಗಳ ಹಿಂದೆ ತೀಕ್ಷ್ಣವಾದ ರಾಜಕೀಯ ಸಂದೇಶವಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ನಂತರ ಪಕ್ಷದ ಮೇಲಿನ ಹಿಡಿತ ಸಡಿಲಗೊಳ್ಳದಂತೆ ನೋಡಿಕೊಳ್ಳಲು ಬಯಸಿದ್ದರು. ಆದರೆ ಹೈಕಮಾಂಡ್ 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ನಿಯಮದಡಿ ಹರಿಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಈಗ ಹರಿಪ್ರಸಾದ್ ಅವರು "ಅಧಿಕಾರ ಬೇರೆ, ಸಂಘಟನೆ ಬೇರೆ" ಎಂದು ಗೆರೆ ಎಳೆಯುವ ಮೂಲಕ ಸಿಎಂ ಅಧಿಕಾರ ವ್ಯಾಪ್ತಿಗೆ ಟಾಂಗ್ ನೀಡಿದ್ದಾರೆ.

"ಅಧಿಕಾರ ಸಿಗದ ಮೂಲ ಕಾಂಗ್ರೆಸ್ಸಿಗರು ಮತ್ತು ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ, ನಾನು ನಿಮ್ಮ ಪರ ಇರುತ್ತೇನೆ" ಎಂದು ಹೇಳುವ ಮೂಲಕ ಪಕ್ಷದೊಳಗೆ ತಮ್ಮದೇ ಆದ ಒಂದು ಬಣವನ್ನು ಗಟ್ಟಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರು ಪಕ್ಷಕ್ಕಾಗಿ ರಸ್ತೆಗೆ ಇಳಿದು ಹೋರಾಡುತ್ತಿದ್ದಾರೆ. ನಾವು ಅಧಿಕಾರಕ್ಕಾಗಿ ಅಲ್ಲ, ಸಂಘಟನೆಗಾಗಿ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಧಿಕಾರ ಲಾಲಸೆಯ ರಾಜಕಾರಣದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷ- ಸರ್ಕಾರದ ನಡುವೆ ಕಂದಕ?

ಈ ಹೇಳಿಕೆಯು ಮುಂಬರುವ ದಿನಗಳಲ್ಲಿ ಸರ್ಕಾರ ಮತ್ತು ಸಂಘಟನೆಯ ನಡುವೆ ದೊಡ್ಡ ಮಟ್ಟದ ಭಿನ್ನಮತಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ನಡುವೆ ಸಮನ್ವಯತೆ ಇರಬೇಕು. ಆದರೆ, ಮೊದಲ ದಿನವೇ ಇಬ್ಬರು ನಾಯಕರ ನಡುವಿನ ಧ್ರುವೀಕರಣ ಸ್ಪಷ್ಟವಾಗಿ ಕಾಣಿಸುತ್ತಿದೆ.

ನಾಯಕತ್ವ ಬದಲಾವಣೆಯ ಸಮಾಧಾನದ ನಿಟ್ಟುಸಿರಿನಲ್ಲಿದ್ದ ಹೈಕಮಾಂಡ್ಗೆ ಈಗ ಕೆಪಿಸಿಸಿ ಮತ್ತು ಸಿಎಂ ನಡುವಿನ ಈ ಹೊಸ ಸಮರವನ್ನು ನಿಭಾಯಿಸುವುದು ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.

Read More
Next Story