ಕಾರ್ಯಕರ್ತರ ʼಕೈʼಗೆ  ಸಿಕ್ಕಿಲ್ಲ ನಿಗಮ-ಮಂಡಳಿ ಹುದ್ದೆ!  900ಕ್ಕೂ ಸ್ಥಾನ ಭರ್ತಿಗೆ ನಾಯಕತ್ವ ಗೊಂದಲವೇ  ಸಂಚಕಾರ
x

ಕಾರ್ಯಕರ್ತರ ʼಕೈʼಗೆ ಸಿಕ್ಕಿಲ್ಲ ನಿಗಮ-ಮಂಡಳಿ ಹುದ್ದೆ! 900ಕ್ಕೂ ಸ್ಥಾನ ಭರ್ತಿಗೆ ನಾಯಕತ್ವ ಗೊಂದಲವೇ ಸಂಚಕಾರ

ತಳಮಟ್ಟದ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳ ಸದಸ್ಯತ್ವ ಕೇವಲ ಒಂದು ಅಧಿಕಾರವಲ್ಲ, ಅದು ಅವರ ಶ್ರಮಕ್ಕೆ ಸಿಗುವ ಗುರುತಿಸುವಿಕೆಯಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೂ ಸ್ಥಾನಮಾನ ಸಿಗಲಿಲ್ಲ ಎಂಬ ಭಾವನೆ ಮೂಡಿದೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್ ಸರ್ಕಾರವು ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳತ್ತ ಸಾಗುತ್ತಿದ್ದರೂ, ಸರ್ಕಾರದ ಭಾಗವಾಗಬೇಕಿದ್ದ ತಳಮಟ್ಟದ ಕಾರ್ಯಕರ್ತರು ಇನ್ನೂ ಅಧಿಕಾರ ಲಭ್ಯವಾಗಿಲ್ಲ. ಸುಮಾರು 90ಕ್ಕೂ ಹೆಚ್ಚು ನಿಗಮ-ಮಂಡಳಿಗಳಲ್ಲಿನ 900ಕ್ಕೂ ಹೆಚ್ಚು ನಿರ್ದೇಶಕ, ಅಧ್ಯಕ್ಷರ ಮತ್ತು ಸದಸ್ಯರ ಹುದ್ದೆಗಳು ಇನ್ನೂ ಖಾಲಿ ಇವೆ!

ಒಂದೆಡೆ ನಾಯಕತ್ವದ ಹಗ್ಗಜಗ್ಗಾಟ, ಮತ್ತೊಂದೆಡೆ ಕಾರ್ಯಕರ್ತರ ಅಸಮಾಧಾನ ಕಾಣುತ್ತಿದೆ. ಈ ಸ್ಥಿತಿಯು ಸರ್ಕಾರಕ್ಕೆ ಹೊಸ ಸಂಕಷ್ಟವನ್ನು ತಂದೊಡ್ಡಿದೆ. ಯಾವುದೇ ಪಕ್ಷದ್ಲಲಾದರೂ ಕಾರ್ಯಕರ್ತರಿಗೆ ಮಂಡಳಿ-ನಿಗಮಗಳ ಸದಸ್ಯತ್ವ ಎನ್ನುವುದು ಕೇವಲ ಒಂದು ಅಧಿಕಾರವಲ್ಲ, ಅದು ಅವರ ಶ್ರಮಕ್ಕೆ ಸಿಗುವ ಗುರುತಿಸುವಿಕೆ. ಕೆಲವು ನಿಗಮ-ಮಂಡಳಿಗೆ ನೇಮಕವಾಗಿದೆ. ಆದರೆ, ಇನ್ನೂ ಬಹಳಷ್ಟು ನಿಗಮ-ಮಂಡಳಿಗಳಿಗೆ ನೇಮಕವಾಗಿಲ್ಲ.

ಕಳೆದ ಮೂರು ವರ್ಷಗಳಿಂದ ನೇಮಕಾತಿ ನಡೆಯದ ಕಾರಣ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೂ ನಮಗೆ ಸ್ಥಾನಮಾನ ಸಿಗಲಿಲ್ಲ ಎಂಬ ಭಾವನೆ ಈಗ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮನೆಮಾಡಿದೆ. ಇದು ಪಕ್ಷದ ಸಂಘಟನಾ ಶಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ವಿವಿಧ ಜಾತಿ, ವರ್ಗ ಮತ್ತು ಪ್ರದೇಶಗಳ ಕಾರ್ಯಕರ್ತರಿಗೆ ಮಂಡಳಿಗಳಲ್ಲಿ ಸ್ಥಾನ ನೀಡುವುದರಿಂದ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ವಿಳಂಬವು ಈ ಸಮತೋಲನವನ್ನು ಕಳೆದುಕೊಳ್ಳುವಂತೆ ಮಾಡಿದೆ ಎನ್ನಲಾಗಿದೆ.

ಅಧಿಕಾರ ಸಿಗದ ಹತಾಶೆ

2023ರ ವಿಧಾನ ಚುನಾವಣೆಯಲ್ಲಿ ಹಗಲು-ರಾತ್ರಿ ಶ್ರಮಿಸಿ, ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸಿದ ಕಾರ್ಯಕರ್ತರಿಗೆ ಮಂಡಳಿ-ನಿಗಮಗಳ ಸದಸ್ಯತ್ವವು ಅವರ ಶ್ರಮಕ್ಕೆ ಸಿಗುವ ಪ್ರತಿಫಲವಾಗಿದೆ. ನಮ್ಮ ಶ್ರಮದಿಂದ ನಾಯಕರು ಸಚಿವರಾಗಿದ್ದಾರೆ. ಆದರೆ ನಮ್ಮನ್ನು ಕೇಳುವವರೇ ಇಲ್ಲ ಎಂಬ ಮಾತುಗಳು ಈಗ ಕಾರ್ಯಕರ್ತರಲ್ಲಿ ಕೇಳಿಬರುತ್ತಿದೆ. ಅನೇಕ ಕಾರ್ಯಕರ್ತರು ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ಪಕ್ಷಕ್ಕಾಗಿ ದುಡಿದಿದ್ದಾರೆ.

ಮಂಡಳಿಗಳಲ್ಲಿ ಸದಸ್ಯತ್ವ ಸಿಕ್ಕರೆ ಅವರಿಗೆ ಒಂದು ಸಾಮಾಜಿಕ ಗೌರವ ಮತ್ತು ಅಲ್ಪಮಟ್ಟಿನ ಆರ್ಥಿಕ ಭದ್ರತೆ ಸಿಗುತ್ತಿತ್ತು. ಅದು ಸಿಗದಿರುವುದು ಅವರಲ್ಲಿ ತೀವ್ರ ಬೇಸರ ಮೂಡಿಸಿದೆ ಎಂದು ಮೂಲಗಳು ಹೇಳಿವೆ. ಈ ನಡುವೆ, ಕೆಪಿಸಿಸಿಯ ರೈತ ಘಟಕ ಅಧ್ಯಕ್ಷ ಸಚಿನ್‌ ಮೀಗಾ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.

ನೇಮಕಾತಿಗೆ ಅಡ್ಡಿಯಾದ ನಾಯಕತ್ವದ ಸಂಘರ್ಷ

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ಕುರಿತಾದ ಆಂತರಿಕ ಚರ್ಚೆಗಳು ಮಂಡಳಿ-ನಿಗಮಗಳ ನೇಮಕಾತಿಯ ಮೇಲೆ ನೇರ ಪರಿಣಾಮ ಬೀರಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸ್ಥಾನ ಕೊಡಿಸುವ ಪೈಪೋಟಿ ನಡೆದಿದೆ. ಈ ಪಾಲಿನ ರಾಜಕೀಯದಿಂದಾಗಿ ಅಂತಿಮ ಪಟ್ಟಿ ಸಿದ್ಧವಾಗುತ್ತಿಲ್ಲ ಎನ್ನಲಾಗಿದೆ. ರಾಜ್ಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಹೈಕಮಾಂಡ್ ಮಧ್ಯಪ್ರವೇಶಿಸುತ್ತಿದ್ದರೂ, ಅಂತಿಮ ನಿರ್ಧಾರ ತೆಗೆದುಕೊಳ್ಳುವಲ್ಲಿ ಆಗುತ್ತಿರುವ ವಿಳಂಬವು ಕಾರ್ಯಕರ್ತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಮಂಡಳಿಗಳು ಮತ್ತು ನಿಗಮಗಳು ಸ್ವಾಯತ್ತ ಸಂಸ್ಥೆಗಳಾಗಿ ಕೆಲಸ ಮಾಡುತ್ತವೆ. ಅಲ್ಲಿಗೆ ಕೇವಲ ಅಧಿಕಾರಿಗಳನ್ನು ನೇಮಿಸಿದರೆ ಸಾಲದು, ಜನರ ನಾಡಿಮಿಡಿತ ಅರಿತ ರಾಜಕೀಯ ಪ್ರತಿನಿಧಿಗಳೂ ಇರಬೇಕು. 900ಕ್ಕೂ ಹೆಚ್ಚು ನಿರ್ದೇಶಕ, ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗಳು ಖಾಲಿ ಇರುವುದು ಕೇವಲ ರಾಜಕೀಯ ನಷ್ಟವಲ್ಲ, ಇದು ಆಡಳಿತಾತ್ಮಕವಾಗಿಯೂ ದೊಡ್ಡ ಹಿನ್ನಡೆ. ನಿಗಮಗಳಲ್ಲಿ ಸದಸ್ಯರಿಲ್ಲದೆ ಸಮಿತಿಗಳ ಸಭೆಗಳು ನಡೆಯುತ್ತಿಲ್ಲ. ಇದರಿಂದ ಫಲಾನುಭವಿಗಳ ಆಯ್ಕೆ, ಹೊಸ ಯೋಜನೆಗಳ ಅನುಮೋದನೆ ಮತ್ತು ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಬಳಕೆಯಾಗದೆ ಉಳಿಯುತ್ತಿದೆ ಅಥವಾ ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ನಿಗಮಗಳಿಗೆ ಬಂದಾಗ, ಅವರಿಗೆ ಸ್ಪಂದಿಸಲು ಜನಪ್ರತಿನಿಧಿಗಳು ಇರುವುದಿಲ್ಲ. ಅಧಿಕಾರಿ ಶಾಹಿಯ ಬಿಗಿಹಿಡಿತದಿಂದಾಗಿ ಸಾಮಾನ್ಯ ಜನರ ಕೆಲಸಗಳು ವಿಳಂಬವಾಗುತ್ತಿವೆ. ಅಲ್ಲದೇ, ಅಧಿಕಾರಿಗಳು ಜನಸಾಮಾನ್ಯರ ಅಥವಾ ಕಾರ್ಯಕರ್ತರ ಅಹವಾಲುಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಹೆಚ್ಚಿವೆ.

ಯುವ ನಾಯಕತ್ವದ ಬೆಳವಣಿಗೆಗೆ ಅಡ್ಡಿ

ಮಂಡಳಿ-ನಿಗಮಗಳು ಮುಂದಿನ ಪೀಳಿಗೆಯ ನಾಯಕರಿಗೆ ತರಬೇತಿ ಕೇಂದ್ರಗಳಿದ್ದಂತೆ. ಇಲ್ಲಿ ಕೆಲಸ ಮಾಡಿದ ಅನುಭವವು ಅವರಿಗೆ ಶಾಸಕರಾಗಿ ಅಥವಾ ಸಂಸದರಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಈ ವಿಳಂಬವು ಯುವ ನಾಯಕತ್ವದ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಹಿರಿಯ ನಾಯಕರು ಮತ್ತು ಶಾಸಕರು ತಮ್ಮ ಬೆಂಬಲಿಗರಿಗೆ ಸ್ಥಾನ ಕೊಡಿಸಲು ಸಾಧ್ಯವಾಗದೆ ಮುಜುಗರ ಅನುಭವಿಸುತ್ತಿದ್ದಾರೆ. ಇದು ಪಕ್ಷದ ಆಂತರಿಕ ಭಿನ್ನಮತಕ್ಕೆ ದಾರಿಯಾಗುವ ಸಂಭವವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕರು ಎಂದು ಗುರುತಿಸಿಕೊಂಡಿದ್ದಾರೆ. ಮಂಡಳಿ-ನಿಗಮಗಳ ನೇಮಕಾತಿಯು ವಿವಿಧ ಸಮುದಾಯಗಳಿಗೆ ಅಧಿಕಾರ ಹಂಚಿಕೆ ಮಾಡುವುದರಿಂದ ಶಕ್ತಿ ತುಂಬಿದಂತಾಗುತ್ತದೆ. ಅನೇಕ ಸಣ್ಣಪುಟ್ಟ ಸಮುದಾಯಗಳಿಗೆ ರಾಜಕೀಯ ಮುಖ್ಯವಾಹಿನಿಗೆ ಬರಲು ಈ ಸದಸ್ಯತ್ವಗಳು ಏಣಿಗಳಾಗಿವೆ. ನೇಮಕಾತಿ ವಿಳಂಬದಿಂದ ಈ ಸಮುದಾಯಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಶೇ. 33ರಷ್ಟು ಮೀಸಲಾತಿಯ ಆಶಯದಂತೆ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಲು ಇದು ಸೂಕ್ತ ಸಮಯ. ಆದರೆ ವಿಳಂಬವು ಮಹಿಳಾ ಕಾರ್ಯಕರ್ತರ ಉತ್ಸಾಹವನ್ನು ಕುಗ್ಗಿಸಿದೆ ಎನ್ನಲಾಗಿದೆ.

ಸಂಘಟನೆಯ ಮೇಲೆ ಬೀರುವ ಪರಿಣಾಮಗಳು

ಮುಂದಿನ ದಿನಗಳಲ್ಲಿ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಈ ಅಸಮಾಧಾನವು ಅಪಾಯಕಾರಿಯಾಗಿರುತ್ತದೆ. ಈಗ ಅಸಮಾಧಾನಗೊಂಡಿರುವ ಕಾರ್ಯಕರ್ತರು ಮುಂದಿನ ಚುನಾವಣೆಗಳಲ್ಲಿ ಉತ್ಸಾಹದಿಂದ ಕೆಲಸ ಮಾಡುವುದು ಅನುಮಾನ. ಅಧಿಕಾರ ಸಿಗದಿದ್ದಲ್ಲಿ ಕಾರ್ಯಕರ್ತರು ತಟಸ್ಥರಾಗುವುದು ಅಥವಾ ಅನ್ಯ ಪಕ್ಷಗಳತ್ತ ಮುಖ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮುಖ್ಯಮಂತ್ರಿ ಗಾದಿಯ ಕುರಿತಾದ ಚರ್ಚೆಗಳು ಮಾಧ್ಯಮಗಳಲ್ಲಿ ಬರುತ್ತಿರುವಾಗ, ಕೆಳಮಟ್ಟದ ಕಾರ್ಯಕರ್ತರ ಈ ಮೌನ ಅಸಮಾಧಾನವು ಜ್ವಾಲಾಮುಖಿಯಂತೆ ಸ್ಫೋಟಿಸುವ ಮುನ್ಸೂಚನೆ ನೀಡುತ್ತಿದೆ. ಸರ್ಕಾರ ಮತ್ತು ಸಂಘಟನೆಯ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕಿದ್ದ ಮಂಡಳಿ-ನಿಗಮಗಳು ನಿಷ್ಕ್ರಿಯವಾಗಿರುವುದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ. ಕಾಂಗ್ರೆಸ್‌ನಲ್ಲಿ ಕೇವಲ ಲೂಟಿ ಮತ್ತು ಕುರ್ಚಿ ಜಗಳ ನಡೆಯುತ್ತಿದೆ, ಜನಸೇವೆ ಮರೆತಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವ ಟೀಕೆಗಳಿಗೆ ಈ ನೇಮಕಾತಿ ವಿಳಂಬವು ಪುಷ್ಟಿ ನೀಡುತ್ತಿದೆ ಎಂದು ಹೇಳಲಾಗಿದೆ.

ಶಿಫಾರಸುಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿಯ ರೈತ ಘಟಕ ಅಧ್ಯಕ್ಷ ಸಚಿನ್‌ ಮೀಗಾ ಹಲವು ಅಂಶಗಳನ್ನೊಳಗೊಂಡ ಮನವಿ ಮಾಡಿದ್ದಾರೆ. ಒಟ್ಟಿಗೆ 900 ಹುದ್ದೆಗಳನ್ನು ಭರ್ತಿ ಮಾಡುವುದು ಕಷ್ಟವಾದರೆ, ಮೊದಲು ಅತಿ ಹೆಚ್ಚು ಜನಸಂಪರ್ಕವಿರುವ ಮಂಡಳಿಗಳಿಗೆ ತಕ್ಷಣ ನೇಮಕಾತಿ ಮಾಡಬೇಕು. ಜಿಲ್ಲಾವಾರು ಮತ್ತು ಕ್ಷೇತ್ರವಾರು ನಿಷ್ಠಾವಂತ ಕಾರ್ಯಕರ್ತರ ಪಟ್ಟಿಯನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ಪಡೆದು, ಶೀಘ್ರವಾಗಿ ಪರಿಶೀಲಿಸಬೇಕು. ನೇಮಕಾತಿಯನ್ನು ಕನಿಷ್ಠ 1.5 ಅಥವಾ 2 ವರ್ಷಗಳಿಗೆ ಸೀಮಿತಗೊಳಿಸಿ, ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರಿಗೆ ಅವಕಾಶ ನೀಡುವ ರೋಟೇಷನ್‌ ನೀತಿ ಜಾರಿಗೊಳಿಸಬೇಕು. ಕೆಪಿಸಿಸಿ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸಲು ಒಂದು ಸಣ್ಣ ಸಮಿತಿಯನ್ನು ರಚಿಸಿ, ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂಬ ಒತ್ತಾಯ ಮಾಡಲಾಗಿದೆ.

Read More
Next Story