Cabinet Reshuffle| ಸಿದ್ದರಾಮಯ್ಯ ಕುರ್ಚಿ ಉಳಿಸಲು ತಂತ್ರ; ಸಂಪುಟ ಪುನಾರಚನೆ ಅಸ್ತ್ರ ಬಳಕೆ
x

Cabinet Reshuffle| ಸಿದ್ದರಾಮಯ್ಯ ಕುರ್ಚಿ ಉಳಿಸಲು ತಂತ್ರ; ಸಂಪುಟ ಪುನಾರಚನೆ ಅಸ್ತ್ರ ಬಳಕೆ

ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ರಾಜ್ಯ ಕಾಂಗ್ರೆಸ್ಸಿಗರು ಭೇಟಿಯಾಗಿ ಸಂಪುಟ ಪುನರ್‌ ರಚನೆ ಮಾಡುವಂತೆ ಮನವಿ ಮಾಡಿದರು. ಕೆಲವು ಸಚಿವರನ್ನು ಕೈಬಿಟ್ಟು, ತಮಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ 'ಕೈ' ಪಾಳಯದ ಒಳಜಗಳ, ಅಧಿಕಾರದ ಹಪಾಹಪಿ ಮತ್ತೊಮ್ಮೆ ದೆಹಲಿ ಅಂಗಳ ತಲುಪಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಚಿವ ಸಂಪುಟ ಪುನಾರಚನೆ ಎಂಬ ಹೊಸ ಅಸ್ತ್ರ ಬಳಸಿಕೊಂಡು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ರಾಜಕೀಯ ಚಟುವಟಿಕೆ ಆರಂಭವಾಗಿದೆ. ರಾಜ್ಯದ 12ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟು, ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿರುವುದು ಸಂಚಲನ ಮೂಡಿಸಿದೆ.

ಇದೇ ವೇಳೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ರಾಜ್ಯ ಕಾಂಗ್ರೆಸ್ಸಿಗರು ಭೇಟಿಯಾಗಿ ಸಂಪುಟ ಪುನಾರಚನೆ ಮಾಡುವಂತೆ ಮನವಿ ಮಾಡಿದರು. ಕಾಂಗ್ರೆಸ್‌ ಹಿರಿಯ ಶಾಸಕರಾದ ಟಿ.ಬಿ. ಜಯಚಂದ್ರ, ಅಶೋಕ್ ಪಟ್ಟಣ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಸುಮಾರು 12 ಮಂದಿ ಶಾಸಕರು ದೆಹಲಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಶಾಸಕರ ತಂಡವು ಪ್ರಸಕ್ತ ಸಂಪುಟದಲ್ಲಿರುವ ಕೆಲವು ಸಚಿವರನ್ನು ಕೈಬಿಟ್ಟು, ಹಿರಿಯ ಮತ್ತು ಅನುಭವವಿರುವ ತಮಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದೆ. ಈ ವೇಳೆ ಸುರ್ಜೇವಾಲ ಅವರು ಶಾಸಕರ ಅಹವಾಲನ್ನು ಆಲಿಸಿ, ಶೀಘ್ರದಲ್ಲೇ ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಹೊಸ ಆಸೆ ಮೂಡಿಸಿದೆ.

ಶಾಸಕರ ದಂಡು: ಯಾರಿದ್ದಾರೆ ಈ ಪಟ್ಟಿಯಲ್ಲಿ?

ದೆಹಲಿಯಲ್ಲಿ ಠಿಕಾಣಿ ಹೂಡಿರುವ ಶಾಸಕರ ಪಟ್ಟಿ ಗಮನಿಸಿದರೆ, ಅದರಲ್ಲಿ ಬಹುತೇಕರು ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕರು ಎಂಬುದು ಸ್ಪಷ್ಟವಾಗುತ್ತದೆ. ಟಿ.ಬಿ. ಜಯಚಂದ್ರ ಹಿರಿಯ ನಾಯಕರಾಗಿದ್ದು, ತುಮಕೂರು ಭಾಗದ ಪ್ರಭಾವಿಯಾಗಿದ್ದಾರೆ. ಅಶೋಕ್ ಪಟ್ಟಣ್ ಮುಖ್ಯ ಸಚೇತಕರಾಗಿದ್ದಾರೆ. ಅವರು ಬೆಳಗಾವಿ ಭಾಗದ ನಾಯಕರಾಗಿದ್ದಾರೆ.

ರಾಘವೇಂದ್ರ ಹಿಟ್ನಾಳ್, ಡಿ.ಜಿ. ಶಾಂತನಗೌಡ, ಹಂಪನಗೌಡ ಬಾರ‍್ಲಿ ಕೊಪ್ಪಳ ಮತ್ತು ಉತ್ತರ ಕರ್ನಾಟಕದ ನಾಯಕರಾಗಿದ್ದಾರೆ. ಬಸವರಾಜ್ ಶಿವಣ್ಣನವರ್, ಮಹಾಂತೇಶ್ ಕೌಜಲಗಿ, ಷಡಕ್ಷರಿ, ಯಶವಂತರಾಯಗೌಡ ಪಾಟೀಲ್, ಜಿ.ಟಿ. ಪಾಟೀಲ್‌ ಪಕ್ಷಕ್ಕೆ ನಿಷ್ಠರಾಗಿರುವ ಹಾಗೂ ಸಚಿವ ಸ್ಥಾನಕ್ಕೆ ಅರ್ಹರಾಗಿರುವ ಹಿರಿಯ ಶಾಸಕರಾಗಿದ್ದಾರೆ.

ಸಿದ್ದರಾಮಯ್ಯ ‘ಸ್ಥಾನ ರಕ್ಷಣೆ’ ತಂತ್ರಗಾರಿಕೆ?

ಈ ಬೆಳವಣಿಗೆಯ ಹಿಂದೆ ಕೇವಲ ಶಾಸಕರ ವೈಯಕ್ತಿಕ ಆಸೆ ಮಾತ್ರವಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣವು ಆಗಾಗ್ಗೆ ಬದಲಾವಣೆಯ ಮಾತುಗಳನ್ನಾಡುತ್ತಿದೆ. ಈ ಸಂದರ್ಭದಲ್ಲಿ 12-15 ಶಾಸಕರನ್ನು ಸಚಿವ ಸ್ಥಾನದ ಭರವಸೆಯೊಂದಿಗೆ ದೆಹಲಿಗೆ ಕಳುಹಿಸುವ ಮೂಲಕ, ಹೈಕಮಾಂಡ್ ಮೇಲೆ ನಮಗೆ ಸಿಎಂ ಬದಲಾವಣೆ ಬೇಡ, ಸಂಪುಟ ಬದಲಾವಣೆ ಸಾಕು ಎಂಬ ಸಂದೇಶ ರವಾನಿಸುವ ತಂತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ.

ಅಲ್ಲದೇ, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕೂಗು ಬಲವಾಗಿ ಕೇಳಿಬಂದರೆ ಅದು ಕುರ್ಚಿಗೆ ಅಪಾಯ ತರಬಹುದು. ಹಾಗಾಗಿ, ಸಂಪುಟ ಪುನಾರಚನೆ ಎಂಬ ಆಮಿಷವನ್ನು ಮುನ್ನೆಲೆಗೆ ತಂದು ಶಾಸಕರನ್ನು ತಮ್ಮ ಪರವಾಗಿ ನಿಲ್ಲಿಸಿಕೊಳ್ಳುವುದು ಸಿದ್ದರಾಮಯ್ಯ ಅವರ ಉದ್ದೇಶವಿರಬಹುದು ಎಂದು ಹೇಳಲಾಗಿದೆ.

ಹೈಕಮಾಂಡ್ ಮುಂದಿರುವ ಸವಾಲುಗಳು

ಸಂಪುಟ ಪುನಾರಚನೆ ಎನ್ನುವುದು ಸುಲಭದ ಕೆಲಸವಲ್ಲ. ಪ್ರಸಕ್ತ ಸಚಿವರನ್ನು ಕೈಬಿಡುವುದು ಹೈಕಮಾಂಡ್‌ಗೆ ಅಗ್ನಿಪರೀಕ್ಷೆಯಾಗಿದೆ. ಈಗ ಸಂಪುಟದಲ್ಲಿರುವವರು ಪ್ರಭಾವಿ ಸಮುದಾಯಗಳಿಗೆ ಸೇರಿದವರು. ಅವರನ್ನು ಕೈಬಿಟ್ಟರೆ ಪಕ್ಷದೊಳಗೆ ಬಂಡಾಯ ಏಳುವ ಸಾಧ್ಯತೆ ಇರುತ್ತದೆ.

ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಸಚಿವ ಸ್ಥಾನಗಳನ್ನು ಸಮನಾಗಿ ಹಂಚುವುದು ದೊಡ್ಡ ಸವಾಲು. ದೆಹಲಿಗೆ ಹೋಗಿರುವ ಶಾಸಕರಲ್ಲಿ ವಿವಿಧ ಸಮುದಾಯಗಳವರಿದ್ದಾರೆ, ಇವರೆಲ್ಲರಿಗೂ ನ್ಯಾಯ ಒದಗಿಸುವುದು ಕಷ್ಟಕರ. ಸರ್ಕಾರದ ಅವಧಿ ಮೂರು ವರ್ಷದತ್ತ ಸಾಗುತ್ತಿರುವಾಗ, ಹೊಸಬರಿಗೆ ಅವಕಾಶ ನೀಡುವುದು ಒಂದು ರೀತಿಯಲ್ಲಿ ಅನಿವಾರ್ಯವೂ ಆಗಿದೆ. ಆದರೆ ಇದು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ನಡುವಿನ ಹಗ್ಗಜಗ್ಗಾಟಕ್ಕೆ ತುಪ್ಪ ಸುರಿದಂತಾಗಬಹುದು.

ಸುರ್ಜೇವಾಲ ಅವರು ನೀಡಿದ ಭರವಸೆ ಕೇವಲ ಕಾಲಹರಣದ ತಂತ್ರವೋ ಅಥವಾ ನಿಜವಾಗಿಯೂ ಬದಲಾವಣೆ ಗಾಳಿ ಬೀಸಲಿದೆಯೋ ಎಂಬುದು ಶೀಘ್ರದಲ್ಲೇ ತಿಳಿಯಲಿದೆ. ಒಂದು ವೇಳೆ ಸಂಪುಟ ಪುನಾರಚನೆಯಾದರೆ ಸಿದ್ದರಾಮಯ್ಯ ಅವರ ಬಣ ಮತ್ತಷ್ಟು ಗಟ್ಟಿಯಾಗಬಹುದು. ಅತೃಪ್ತ ಶಾಸಕರಿಗೆ ಸಮಾಧಾನವಾಗಬಹುದು. ಆದರೆ, ಕೈಬಿಡಲ್ಪಟ್ಟ ಸಚಿವರಿಂದ ಹೊಸ ಬಂಡಾಯದ ಗುಂಪು ನಿರ್ಮಾಣವಾಗಬಹುದು ಎನ್ನಲಾಗಿದೆ.

Read More
Next Story