ಸಂಪುಟ ಪುನಾರಚನೆ ಕಸರತ್ತು; ದೆಹಲಿಗೆ ತೆರಳಲು ಸಜ್ಜಾದ 12 ಶಾಸಕರು
x

ಸಂಪುಟ ಪುನಾರಚನೆ ಕಸರತ್ತು; ದೆಹಲಿಗೆ ತೆರಳಲು ಸಜ್ಜಾದ 12 ಶಾಸಕರು

"ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಬೇಸರ ಇತ್ತು, ಅದು ಈಗ ಮುಗಿದ ಅಧ್ಯಾಯ. ಗೌರವಯುತವಾದ ಸ್ಥಾನಮಾನವನ್ನಾದರೂ ಕೊಡಿ ಎಂದು ಕೇಳಲು ದೆಹಲಿಗೆ ತೆರಳುತ್ತಿದ್ದೇವೆ" ಎಂದು ಶಾಸಕ ಅಶೋಕ್‌ ಪಟ್ಟಣ್‌ ಹೇಳಿದ್ದಾರೆ.


ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಪುನಾರಚನೆ ಕಾವು ಏರತೊಡಗಿದೆ. ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರ, ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಬೇಡಿಕೆ ಹಾಗೂ ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ 12ಮಂದಿ ಶಾಸಕರು ದೆಹಲಿಗೆ ದೌಡಾಯಿಸಲು ಸಜ್ಜಾಗಿರುವುದು ಕುತೂಹಲ ಮೂಡಿಸಿದೆ.

ಸಂಪುಟದಲ್ಲಿ ಸ್ಥಾನ ಹಾಗೂ ಪ್ರಬಲ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಬೇಡಿಕೆಯೊಂದಿಗೆ ಕಾಂಗ್ರೆಸ್ನ 12ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕರಾದ ಅಶೋಕ್ ಪಟ್ಟಣ್, ಡಿ.ಜಿ. ಶಾಂತನಗೌಡ, ಬಸನಗೌಡ ದದ್ದಲ್ ಸೇರಿದಂತೆ ಹಲವು ಹಿರಿಯ ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಯೋಜನೆ ಹಾಕಿಕೊಂಡಿದ್ದಾರೆ.

"ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಬೇಸರ ಇತ್ತು, ಅದು ಈಗ ಮುಗಿದ ಅಧ್ಯಾಯ. ಗೌರವಯುತವಾದ ಸ್ಥಾನಮಾನವನ್ನಾದರೂ ಕೊಡಿ ಎಂದು ಕೇಳಲು ದೆಹಲಿಗೆ ತೆರಳುತ್ತಿದ್ದೇವೆ. ನಾಗೇಂದ್ರ ರಾಜೀನಾಮೆ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು." ಎಂದು ಶಾಸಕ ಅಶೋಕ್ ಪಟ್ಟಣ್ ಹೇಳಿದ್ಧಾರೆ.

ಬದಲಾವಣೆ ಇದ್ದರೆ ತಿಳಿಸುವೆ; ಖರ್ಗೆ

ಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಕುರಿತಂತೆ ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಅವರು, "ನಾನು ಪ್ರಸ್ತುತ ಕಲಬುರಗಿಯಲ್ಲಿದ್ದೇನೆ, ದೆಹಲಿ ಭೇಟಿಯ ಮಾಹಿತಿ ಇಲ್ಲ. ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ಬದಲಾವಣೆಗಳಿದ್ದರೂ ಅದು ನನ್ನ ಗಮನಕ್ಕೆ ಬರಲೇಬೇಕು. ಶಿವಕುಮಾರ್ ಅವರು ದೆಹಲಿಯಲ್ಲಿ ನನ್ನನ್ನು ಭೇಟಿಯಾದ ನಂತರ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಬಹುದು" ಎಂದು ಹೇಳಿದ್ದಾರೆ.

ಮಹಿಳೆಯರಿಲ್ಲದ ಸಂಪುಟ ಅಪೂರ್ಣ: ಲಕ್ಷ್ಮೀ

ಸಚಿವ ಸ್ಥಾನ ಕೈತಪ್ಪಿರುವ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

"ಮಹಿಳೆಯರಿಲ್ಲದ ಸಂಪುಟ ನಿಜಕ್ಕೂ ಅಪೂರ್ಣ. ಕಾಂಗ್ರೆಸ್ ಆಡಳಿತವಿರುವ ಇತರ ರಾಜ್ಯಗಳಲ್ಲಿ ಕನಿಷ್ಠ ಮೂವರು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲೂ ಶೀಘ್ರವೇ ಮಹಿಳೆಯರಿಗೆ ಅವಕಾಶ ಸಿಗುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ” ಎಂದು ಹೇಳಿದ್ದಾರೆ.

"ನನಗೆ ಸಚಿವ ಸ್ಥಾನ ತಪ್ಪಲು ಯಾವುದೇ ಆಂತರಿಕ ಷಡ್ಯಂತ್ರ ಕಾರಣವಲ್ಲ, ಅನಿವಾರ್ಯ ಕಾರಣಗಳಿಂದ ತಪ್ಪಿದೆ. ಹೈಕಮಾಂಡ್ ಮತ್ತೆ ಅವಕಾಶ ನೀಡಿದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ಇಲ್ಲವಾದರೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ."ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story