ಕೊಪ್ಪಳಕ್ಕೆ 2 ಸಚಿವ ಸ್ಥಾನ; ಒಂದು ಜಿಲ್ಲೆಯ ಕೋಟಾ, ಇನ್ನೊಂದು ಪೇಮೆಂಟ್ ಕೋಟಾ- ಬಿಜೆಪಿ ಶಾಸಕ ಆರೋಪ
x

ಕೊಪ್ಪಳಕ್ಕೆ 2 ಸಚಿವ ಸ್ಥಾನ; ಒಂದು ಜಿಲ್ಲೆಯ ಕೋಟಾ, ಇನ್ನೊಂದು ಪೇಮೆಂಟ್ ಕೋಟಾ- ಬಿಜೆಪಿ ಶಾಸಕ ಆರೋಪ

ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು 100 ರಿಂದ 150ಕೋಟಿ ರೂ.ನೀಡಲಾಗಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆ ಹೇಳಿಕೆಗೆ ಈಗಲೂ ಸಂಪೂರ್ಣ ಬದ್ಧನಾಗಿದ್ದೇನೆ ಎಂದು ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್‌ ಆರೋಪಿಸಿದ್ದಾರೆ.


ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಕೊಪ್ಪಳದಂತಹ ಸಣ್ಣ ಜಿಲ್ಲೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಿರುವುದು ಸ್ವಾಗತ. ಆದರೆ, ಇದರಲ್ಲಿ ಒಂದು ಸ್ಥಾನ ಜಿಲ್ಲೆಯ ಕೋಟಾವಾದರೆ, ಮತ್ತೊಂದು ಪೇಮೆಂಟ್ ಕೋಟಾ’ ಎಂದು ಟೀಕಿಸಿದ್ದಾರೆ. ಹಣಕ್ಕಾಗಿ ಸಂಪುಟ ವಿಸ್ತರಣೆಯಾಗುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದರು. ಆದರೆ, ಈಗ ಹಣದ ಡೀಲ್ ಮತ್ತು ಸೆಟ್ಲ್ಮೆಂಟ್ ಪೂರ್ಣಗೊಂಡಿರಬೇಕು. ನಿಗದಿತ ಟಾರ್ಗೆಟ್ ರೀಚ್ ಆಗಿರಬೇಕು. ಅದಕ್ಕಾಗಿಯೇ ಇಂದು ಸಂಪುಟ ವಿಸ್ತರಣೆ ಮಾಡಲಾಗಿದೆ ಎಂದು ದೊಡ್ಡನಗೌಡ ಪಾಟೀಲ್‌ ಆರೋಪಿಸಿದ್ದಾರೆ.

150 ಕೋಟಿ ರೂ. ಬೇಡಿಕೆ ಹೇಳಿಕೆಗೆ ಬದ್ಧ

ಸಚಿವ ಸ್ಥಾನಕ್ಕಾಗಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ ಎಂಬ ತಮ್ಮ ಹೇಳಿಕೆಯನ್ನು ಶಾಸಕರು ಪುನರುಚ್ಚರಿಸಿದ್ದಾರೆ. ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು 100 ರಿಂದ 150ಕೋಟಿ ರೂ.ಬೇಡಿಕೆ ಇದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆ ಹೇಳಿಕೆಗೆ ಈಗಲೂ ಸಂಪೂರ್ಣ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಕೊಪ್ಪಳಕ್ಕೆ ಎರಡು ಸಚಿವ ಸ್ಥಾನಗಳು ಸಿಕ್ಕಿವೆ. ಇವುಗಳಲ್ಲಿ ಯಾರಿಗೆ ಪೇಮೆಂಟ್ ಕೋಟಾ ಅಡಿಯಲ್ಲಿ ಸಚಿವ ಸ್ಥಾನ ಲಭಿಸಿದೆ ಎಂಬ ಸತ್ಯ ಮುಂಬರುವ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಹೇಳಿದ್ಧಾರೆ. ತಮ್ಮ ಆರೋಪದ ನಡುವೆಯೂ ಕೊಪ್ಪಳ ಜಿಲ್ಲೆಯಿಂದ ನೂತನವಾಗಿ ಸಂಪುಟ ಸೇರಿದ ಶಿವರಾಜ ತಂಗಡಗಿ ಹಾಗೂ ಬಸವರಾಜ ರಾಯರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಜಕೀಯ ಆರೋಪ ಏನೇ ಇರಲಿ, ಇಬ್ಬರೂ ನೂತನ ಸಚಿವರು ತಕ್ಷಣವೇ ಕೊಪ್ಪಳ ಜಿಲ್ಲೆಯ ತ್ವರಿತಗತಿಯ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಬೇಕು. ಹಿಂದುಳಿದ ಜಿಲ್ಲೆಯ ಯೋಜನೆಗಳಿಗೆ ವೇಗ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Read More
Next Story