
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ 'ಎಸ್ಐಆರ್' ಪ್ರಕ್ರಿಯೆ ಆರಂಭವಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ: ಇಸಿ ‘ಎಸ್ಐಆರ್’ ಸವಾಲಿಗೆ ಸಜ್ಜಾದ ಕಾಂಗೆಸ್ ಸರ್ಕಾರ
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ 'ಎಸ್ಐಆರ್' ಪ್ರಕ್ರಿಯೆ ಆರಂಭವಾಗಿದ್ದು, ಅರ್ಹರ ಹೆಸರುಗಳು ಕೈಬಿಟ್ಟು ಹೋಗದಂತೆ ತಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಗಿ ರಣತಂತ್ರ ರೂಪಿಸಿದೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಪ್ರಮುಖ ಭಾಗವಾಗಿ 'ಎಸ್ಐಆರ್' (SIR) ಪ್ರಕ್ರಿಯೆ ಆರಂಭಗೊಂಡಿದ್ದು, ರಾಜ್ಯಾದ್ಯಂತ ಬಿಎಲ್ಓಗಳು ಮನೆಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಈ ಮಹತ್ವದ ಯೋಜನೆಯು ದೇಶದ ಇತರ ರಾಜ್ಯಗಳಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷಗಳ ಮತದಾರರನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಈ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನ್ನ ಮತದಾರರ ಹೆಸರುಗಳು ಅಳಿಸಿಹೋಗದಂತೆ ತಡೆಯಲು ರಣತಂತ್ರಗಳನ್ನು ಹೂಡಿದೆ.
ಬಂಗಾಳ ಮಾದರಿ ವಿಫಲಗೊಳಿಸಲು ಕಾಂಗ್ರೆಸ್ ತಂತ್ರ
ಈ ಹಿಂದೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಸೂಕ್ತ ದಾಖಲೆಗಳ ಕೊರತೆಯಿಂದಾಗಿ ಲಕ್ಷಾಂತರ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದರು ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರವು ಕೇವಲ ವಾಗ್ಯುದ್ಧಕ್ಕೆ ಸೀಮಿತವಾಗಿ ಸ್ಥಳೀಯ ಮಟ್ಟದಲ್ಲಿ ಮುನ್ನೆಚ್ಚರಿಕೆ ವಹಿಸದ ಕಾರಣ ಆಡಳಿತ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ನಾಯಕ ನಿತಿನ್ ನಬಿ ಅವರು ಕರ್ನಾಟಕದಲ್ಲೂ 'ಬಂಗಾಳ ಮಾದರಿ'ಯ ಚುನಾವಣೆ ನಡೆಯಲಿ ಎಂದಿರುವುದು ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ, ಬಂಗಾಳದ ಮಾದರಿಯನ್ನು ಕರ್ನಾಟಕದಲ್ಲಿ ವಿಫಲಗೊಳಿಸಲು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಈಗಿನಿಂದಲೇ ಸನ್ನದ್ಧವಾಗಿದೆ.
ದಾಖಲೆ ಕೊರತೆ ನೀಗಿಸಲು ಸಿಎಂ ಮಾಸ್ಟರ್ ಪ್ಲಾನ್
ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುರ್ತು ಪತ್ರಿಕಾಗೋಷ್ಠಿ ನಡೆಸಿ, ವಿಳಾಸದ ಸಮಸ್ಯೆ ಎದುರಿಸುತ್ತಿರುವ ಮತದಾರರಿಗೆ ಕಂದಾಯ ಇಲಾಖೆಯ ಮೂಲಕ ಕೇವಲ ಏಳು ದಿನಗಳಲ್ಲಿ 'ಶಾಶ್ವತ ನಿವಾಸ ಪ್ರಮಾಣಪತ್ರ'ವನ್ನು ಒದಗಿಸುವ ಮಹತ್ವದ ಆದೇಶವನ್ನು ಪ್ರಕಟಿಸಿದ್ದಾರೆ. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಸಹಾಯವಾಣಿ ಹಾಗೂ ಫೆಸಿಲಿಟೇಶನ್ ಕೇಂದ್ರಗಳನ್ನು ತೆರೆಯಲಾಗಿದೆ. ಇದರೊಂದಿಗೆ, ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಡ್ಡಾಯವಾಗಿ ಸ್ಥಳೀಯ ಮತದಾರರ ಪಟ್ಟಿಯಲ್ಲಿ ಸರಿಯಾದ ವಿವರಗಳನ್ನು ಹೊಂದಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಆ ಮೂಲಕ ಅರ್ಹ ಸ್ಥಳೀಯರಿಗೆ ಮಾತ್ರ ಯೋಜನೆ ತಲುಪುವಂತೆ ನೋಡಿಕೊಳ್ಳುವ ಜೊತೆಗೆ, ಮತದಾರರ ಪಟ್ಟಿಯನ್ನೂ ದೋಷಮುಕ್ತಗೊಳಿಸುವ ಇರಾದೆ ಸರ್ಕಾರದಾಗಿದೆ.
ಇದು ಎರಡನೇ ಸ್ವಾತಂತ್ರ್ಯ ಹೋರಾಟ ಎಂದ ಹರಿಪ್ರಸಾದ್
ಇನ್ನೊಂದೆಡೆ, ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷವು ಬೃಹತ್ ಜಾಗೃತಿ ಸಮಾವೇಶವನ್ನು ಆಯೋಜಿಸಿದ್ದು, ಇದರಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2014ರಿಂದಲೂ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಇದನ್ನು 'ಎರಡನೇ ಸ್ವಾತಂತ್ರ್ಯ ಹೋರಾಟ' ಎಂದು ಬಣ್ಣಿಸಿ, ಕಾರ್ಯಕರ್ತರು ಜಾಗೃತರಾಗಿರಬೇಕು ಎಂದು ಕರೆ ನೀಡಿದರು. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಕಾಂಗ್ರೆಸ್ ಗೆದ್ದಿರುವ 15 ರಿಂದ 20 ಕ್ಷೇತ್ರಗಳಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಿಕೊಂಡು ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಹುನ್ನಾರ ನಡೆದಿದೆ ಎಂಬ ಆತಂಕವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.
ರಾಜಕೀಯ ಮತ್ತು ಆಡಳಿತಾತ್ಮಕ 'ಡಬಲ್ ಗೇಮ್ ಪ್ಲಾನ್'
ರಾಜ್ಯ ಸರ್ಕಾರವು ಈ ಸವಾಲನ್ನು ಎದುರಿಸಲು ಮೂರು ಪ್ರಮುಖ ತಂತ್ರಗಳನ್ನು ಬಳಸುತ್ತಿದೆ. ರಾಜಕೀಯವಾಗಿ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಅವರಂತಹ ನಾಯಕರು ಚುನಾವಣಾ ಆಯೋಗದ ನಡೆಗಳ ವಿರುದ್ಧ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಿ ನೇರ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇನ್ನು ಆಡಳಿತಾತ್ಮಕವಾಗಿ ಜನರಿಗೆ ಅಗತ್ಯ ದಾಖಲೆಗಳನ್ನು ತಕ್ಷಣವೇ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮೂರನೆಯದಾಗಿ, ತಳಮಟ್ಟದಲ್ಲಿ ಬಿಎಲ್ಓಗಳ ಕಾರ್ಯವೈಖರಿಯನ್ನು ಗಮನಿಸಲು ಕಾಂಗ್ರೆಸ್ ಪಕ್ಷದ ವತಿಯಿಂದಲೂ ಸಮಾನ ಸಂಖ್ಯೆಯ ಬೂತ್ ಮಟ್ಟದ ಏಜೆಂಟ್‌ಗಳನ್ನು (BLA) ನಿಯೋಜಿಸಲಾಗಿದೆ. ಮುಂಬರುವ ಆಗಸ್ಟ್ 5ರಂದು ಅಂತಿಮ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅಲ್ಲಿಯವರೆಗಿನ ಅವಧಿಯನ್ನು ಅತ್ಯಂತ ಚತುರತೆಯಿಂದ ಬಳಸಿಕೊಂಡು ತನ್ನ ಮೂಲ ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ಕರ್ನಾಟಕ ಕಾಂಗ್ರೆಸ್ ಈಗ 'ಡಬಲ್ ಗೇಮ್ ಪ್ಲಾನ್' ಮೂಲಕ ಕಾರ್ಯಪ್ರವೃತ್ತವಾಗಿದೆ.

