ಕರ್ನಾಟಕದಲ್ಲಿ ಚಳಿ ಹೆಚ್ಚಳ: ಡಿಸೆಂಬರ್‌ನಲ್ಲಿ 8 ಡಿಗ್ರಿಗೆ ಕುಸಿಯುತ್ತಾ ತಾಪಮಾನ? ಹವಾಮಾನ ತಜ್ಞರ ವಿಶ್ಲೇಷಣೆ
ಅಕ್ವಾಂ ಚಂಡಮಾರುತದ ಪ್ರಭಾವದಿಂದ ಕರ್ನಾಟಕದಲ್ಲಿ ಚಳಿ ಹೆಚ್ಚಳವಾಗಿದೆ. ಡಿಸೆಂಬರ್‌ನಲ್ಲಿ ಉತ್ತರ ಕರ್ನಾಟಕದಲ್ಲಿ ತಾಪಮಾನ 8ರಿಂದ 10 ಡಿಗ್ರಿಗೆ ಕುಸಿಯುವ ಸಾಧ್ಯತೆ. 2027ರಲ್ಲಿ ಎಲ್‌ನಿನೋ ತಟಸ್ಥವಾಗುವ ನಿರೀಕ್ಷೆ ಕುರಿತು ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ವಿಶ್ಲೇಷಣೆ.
ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಚಳಿಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10ರಿಂದ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಅಕ್ವಾಂ ಚಂಡಮಾರುತದ ಪ್ರಭಾವದಿಂದ ಗಾಳಿಯ ದಿಕ್ಕು ಬದಲಾಗಿರುವುದೇ ದಿಢೀರ್ ಚಳಿಗೆ ಪ್ರಮುಖ ಕಾರಣ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಹಾಗೂ ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ದ ಫೆಡರಲ್ ಕರ್ನಾಟಕದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಅಕ್ವಾಂ ಚಂಡಮಾರುತದಿಂದಾಗಿ ರಾಜ್ಯದ ಮೇಲೆ ಉತ್ತರ ದಿಕ್ಕಿನಿಂದ ತಂಪು ಮತ್ತು ಒಣ ಗಾಳಿ ಬೀಸುತ್ತಿದೆ. ಇದರಿಂದ ಬೆಳಗಾವಿಯಲ್ಲಿ ಕನಿಷ್ಠ 10 ಡಿಗ್ರಿ, ಬೆಂಗಳೂರಿನಲ್ಲಿ 15ರಿಂದ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಆದರೆ ಈ ಚಂಡಮಾರುತದಿಂದ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಮುಂದಿನ ಐದು ದಿನಗಳಲ್ಲೂ ಒಣ ಹವೆ ಮುಂದುವರಿಯಲಿದೆ. ನವೆಂಬರ್ 21 ಮತ್ತು 22ರ ಬಳಿಕ ತಾಪಮಾನದಲ್ಲಿ ತಾತ್ಕಾಲಿಕ ಏರಿಕೆಯಾಗಬಹುದು ಎಂದು ಹೇಳಿದ್ದಾರೆ.
ಡಿಸೆಂಬರ್ 15ರಿಂದ ಜನವರಿ 14ರವರೆಗೆ ಚಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದ್ದು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ 8ರಿಂದ 10 ಡಿಗ್ರಿಗೆ ಕುಸಿಯಬಹುದು. ಬೆಂಗಳೂರಿನಲ್ಲಿ 12ರಿಂದ 14 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಸಮುದ್ರದ ಪ್ರಭಾವದಿಂದ ಚಳಿ ಅಷ್ಟೊಂದು ತೀವ್ರವಾಗಿರುವುದಿಲ್ಲ.
ಇದೇ ವೇಳೆ, ಈ ವರ್ಷದ ಮುಂಗಾರು ಮಳೆಯಲ್ಲಿ ರಾಜ್ಯಕ್ಕೆ ಶೇ.30ರಷ್ಟು ಕೊರತೆಯಾಗಿದ್ದು, ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲೂ ಶೇ.50ರಿಂದ 60ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಕೃಷಿ ಮತ್ತು ಅಂತರ್ಜಲದ ಮೇಲೆ ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಆದರೆ 2027ರ ವೇಳೆಗೆ ಎಲ್‌ನಿನೋ ತಟಸ್ಥ ಸ್ಥಿತಿಗೆ ಮರಳುವ ಸಾಧ್ಯತೆಯಿದ್ದು, ಮುಂದಿನ ವರ್ಷ ಮಳೆ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ ಎಂದು ಪಾಟೀಲ್ ಆಶಾವಾದ ವ್ಯಕ್ತಪಡಿಸಿದ್ದಾರೆ.

