ನೀಟ್‌-ಯುಜಿ ಪರೀಕ್ಷೆ ರದ್ದು| ಕೇಂದ್ರದ ವೈಫಲ್ಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?
x
ಸಿಎಂ ಸಿದ್ದರಾಮಯ್ಯ

ನೀಟ್‌-ಯುಜಿ ಪರೀಕ್ಷೆ ರದ್ದು| ಕೇಂದ್ರದ ವೈಫಲ್ಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ನೇಮಕಾತಿ ಪರೀಕ್ಷೆಗಳಿಂದ ಹಿಡಿದು ರಾಷ್ಟ್ರೀಯ ಪ್ರವೇಶ ಪರೀಕ್ಷೆಯವರೆಗೆ ಪೇಪರ್ ಸೋರಿಕೆ ಪ್ರಕರಣಗಳು ಪ್ರತಿಭಾವಂತ ವಿದ್ಯಾರ್ಥಿಗಳ ಹಿತರಕ್ಷಣೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಿಎಂ ದೂರಿದ್ದಾರೆ.


ನೀಟ್‌-ಯುಜಿ ಪರೀಕ್ಷೆ ರದ್ದುಪಡಿಸಿದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ನಿರ್ಧಾರಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ‘ನೀಟ್-ಯುಜಿ 2026’ ಪರೀಕ್ಷೆ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲದೇ, ಯುವಜನತೆಗೆ ಬಗೆದಿರುವ ದ್ರೋಹ ಎಂದು ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕದ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿ ದೇಶದ 22 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ನೀಟ್‌-ಯುಜಿ ಪರೀಕ್ಷೆ ಬರೆದಿದ್ದರು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ, ಪ್ರಯಾಣ ಸೇರಿದಂತೆ ಸಾಕಷ್ಟು ಖರ್ಚು ಮಾಡಿದ್ದರು. ಆದರೆ, ಕೇಂದ್ರದ ಒಂದು ನಿರ್ಧಾರ ಇಡೀ ವಿದ್ಯಾರ್ಥಿ ಸಮುದಾಯವನ್ನು ಅನಿಶ್ಚಿತತೆ ಮತ್ತು ಸಂಕಷ್ಟಕ್ಕೆ ತಳ್ಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನೀಟ್ ಪರೀಕ್ಷೆಯಿಂದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಶಾಲಾ ಶಿಕ್ಷಣ ವ್ಯವಸ್ಥೆ ದುರ್ಬಲವಾಗಲಿದೆ, ದಾಖಲಾತಿ ವಿಚಾರದಲ್ಲಿ ರಾಜ್ಯಗಳ ಅಧಿಕಾರ ಕಸಿದುಕೊಳ್ಳುತ್ತದೆ ಎಂದು 2024ರಲ್ಲೇ ಕಾಂಗ್ರೆಸ್‌ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ಸದನದಲ್ಲಿ ನಿರ್ಣಯ ಕೈಗೊಂಡಿದ್ದೆವು. ಅಂದಿನ ನಮ್ಮ ಕಾಳಜಿ ಎಷ್ಟು ಸತ್ಯ ಮತ್ತು ಅನಿವಾರ್ಯವಾಗಿತ್ತು ಎನ್ನುವುದನ್ನು ಇಂದಿನ ಪರೀಕ್ಷಾ ರದ್ದತಿಯು ಸಾಬೀತುಪಡಿಸಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ನೇಮಕಾತಿ ಪರೀಕ್ಷೆಗಳಿಂದ ಹಿಡಿದು ರಾಷ್ಟ್ರೀಯ ಪ್ರವೇಶ ಪರೀಕ್ಷೆಯವರೆಗೆ ಪೇಪರ್ ಸೋರಿಕೆ ಪ್ರಕರಣಗಳು ಪ್ರತಿಭಾವಂತ ವಿದ್ಯಾರ್ಥಿಗಳ ಹಿತರಕ್ಷಣೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹೊಣೆ ಹೊರಬೇಕಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಯುವಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಪಾರದರ್ಶಕ, ಕಾಲಮಿತಿಯ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಹೊಸ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು ಮತ್ತು ಅಂತಹ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಜ್ಯಗಳ ಅಧಿಕಾರವನ್ನು ಪುನಃಸ್ಥಾಪಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಪೇಪರ್ ಲೀಕ್‌ನಿಂದ ತೊಂದರೆಗೀಡಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪೋಷಕರ ಜೊತೆ ನಾವಿದ್ದೇವೆ. ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗುವಂತೆ ಮಾಡುವುದು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

Read More
Next Story