
ಹೈಕಮಾಂಡ್ ಹಸ್ತಕ್ಷೇಪಕ್ಕೆ ‘ಕುರ್ಚಿ’ ಕಳೆದುಕೊಂಡ ಕರುನಾಡ ಮುಖ್ಯಮಂತ್ರಿಗಳು
ಹೈಕಮಾಂಡ್ ಆದೇಶದಿಂದ ಅವಧಿ ಪೂರ್ವದಲ್ಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಾಯಕರ ಇತಿಹಾಸ ರಾಜ್ಯಕ್ಕೆ ಹೊಸದೇನಲ್ಲ. ಈ ಹಿಂದೆ ಹಲವರು ದೆಹಲಿ ನಾಯಕರ ಒತ್ತಡಕ್ಕೆ ಸಿಲುಕಿ ಕುರ್ಚಿ ಬಿಟ್ಟುಕೊಟ್ಟಿರುವ ನಿದರ್ಶನಗಳಿವೆ.
ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಹೈಕಮಾಂಡ್ ಸಂಸ್ಕೃತಿಯ ಪ್ರಭಾವ ಎದ್ದು ಕಾಣುತ್ತಿದೆ. ದೆಹಲಿ ನಾಯಕರ ಆದೇಶಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬೆನ್ನಲ್ಲೇ ರಾಜಕೀಯ ಇತಿಹಾಸದ ಹಳೇ ಪುಟಗಳನ್ನೇ ಹೈಕಮಾಂಡ್ ʼಹುಕುಂʼಗೆ ಕುರ್ಚಿ ಕಳೆದುಕೊಂಡವರ ಕುರಿತು ಚರ್ಚೆ ನಡೆಯುತ್ತಿದೆ.
ಹೈಕಮಾಂಡ್ ಆದೇಶದಿಂದ ಅವಧಿ ಪೂರ್ವದಲ್ಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಾಯಕರ ಇತಿಹಾಸ ರಾಜ್ಯಕ್ಕೆ ಹೊಸದೇನಲ್ಲ. ಈ ಹಿಂದೆ ಹಲವು ಪ್ರಭಾವಿ ನಾಯಕರು ದೆಹಲಿ ನಾಯಕರ ಒತ್ತಡಕ್ಕೆ ಸಿಲುಕಿ ಕುರ್ಚಿ ಬಿಟ್ಟುಕೊಟ್ಟಿರುವ ನಿದರ್ಶನಗಳಿವೆ. ಅವರಲ್ಲಿ ಪ್ರಮುಖರ ವಿವರ ಇಲ್ಲಿದೆ.
ವಿಮಾನ ನಿಲ್ದಾಣದಲ್ಲೇ ಪದಚ್ಯುತ ಆದೇಶ
ಕಾಂಗ್ರೆಸ್ ಪಕ್ಷದ ಪ್ರಭಾವಿ ಲಿಂಗಾಯತ ನಾಯಕರಾಗಿದ್ದ ವೀರೇಂದ್ರ ಪಾಟೀಲ್ ಅವರು 1968-1971 ಮತ್ತು 1989-1990ರಲ್ಲಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೆ, 1990ರಲ್ಲಿ ಅವರ ಎರಡನೇ ಅವಧಿಯ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ವೀರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರ ಪ್ರಕಟಿಸಿದ್ದರು.
ಅನಾರೋಗ್ಯದ ನೆಪ ಹಾಗೂ ಹಳೇ ಮೈಸೂರು ಭಾಗದ ಕೋಮು ಗಲಭೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಹೊರಿಸಿ ಅವರನ್ನು ಹೈಕಮಾಂಡ್ ಕಿತ್ತೊಗೆದಿತ್ತು. ಅವರ ರಾಜೀನಾಮೆಯ ನಂತರ ಒಬಿಸಿ ನಾಯಕ, ಸಮಾಜವಾದಿ ಹಿನ್ನೆಲೆಯ ಸಾರೆಕೊಪ್ಪ ಬಂಗಾರಪ್ಪ ಅವರು ಸಿಎಂ ಆದರು.
ಸಮಿತಿಯ ಶಿಫಾರಸಿಗೆ ಬಂಗಾರಪ್ಪ ಕುರ್ಚಿ ತ್ಯಾಗ
ವೀರೇಂದ್ರ ಪಾಟೀಲರ ಬಳಿಕ ಅಧಿಕಾರಕ್ಕೇರಿದ ಎಸ್. ಬಂಗಾರಪ್ಪ ಅವರಿಗೂ ಹೈಕಮಾಂಡ್ ಕಂಟಕ ತಪ್ಪಲಿಲ್ಲ. ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ಕೇಳಿಬಂದ ‘ಕ್ಲಾಸಿಕ್ ಕಂಪ್ಯೂಟರ್ ಹಗರಣ’ ಮತ್ತು ಕಾವೇರಿ ನದಿ ನೀರು ವಿವಾದದ ಸಂದರ್ಭದಲ್ಲಿ ತಮಿಳು ವಿರೋಧಿ ಹಿಂಸಾಚಾರವನ್ನು ಸೂಕ್ತವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಎ.ಕೆ. ಆ್ಯಂಟನಿ ಅವರನ್ನೊಳಗೊಂಡ ಕಾಂಗ್ರೆಸ್ ಹೈಕಮಾಂಡ್ ಸಮಿತಿಯು ಬಂಗಾರಪ್ಪನವರ ಪದಚ್ಯುತಿಗೆ ಶಿಫಾರಸು ಮಾಡಿತ್ತು. ಪರಿಣಾಮ ಅವರು ಕುರ್ಚಿ ಬಿಡಬೇಕಾಯಿತು.
ಸ್ವಪಕ್ಷಿಯರಿಂದಲೇ ಸ್ಥಾನ ಕಳಕೊಂಡ ಬಿ.ಎಸ್.ವೈ
ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕ ಬಿ.ಎಸ್. ಯಡಿಯೂರಪ್ಪನವರು ಕೂಡ ಹೈಕಮಾಂಡ್ ಒತ್ತಡಕ್ಕೆ ಸಿಲುಕಿ ಎರಡು ಬಾರಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2010ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದ ವರದಿಯಲ್ಲಿ ಹೆಸರು ಕೇಳಿಬಂದಿದ್ದರಿಂದ ಹೈಕಮಾಂಡ್ ಆದೇಶದಂತೆ ಅವರು ಮೊದಲ ಬಾರಿ ಅಧಿಕಾರದಿಂದ ಕೆಳಗಿಳಿದರು. ನಂತರ 2021ರಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಮತ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ಮಣಿದು ಮತ್ತೊಮ್ಮೆ ರಾಜೀನಾಮೆ ನೀಡಬೇಕಾಯಿತು. ತದನಂತರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರು.
ಆಂತರಿಕ ಕಲಹದಿಂದ ಕೆಳಗಿಳಿದ ಡಿ.ವಿ. ಸದಾನಂದ ಗೌಡ
ಯಡಿಯೂರಪ್ಪನವರು ಮೊದಲ ಬಾರಿಗೆ ರಾಜೀನಾಮೆ ನೀಡಿದಾಗ ಅವರದೇ ಶಿಫಾರಸಿನ ಮೇರೆಗೆ ಡಿ.ವಿ. ಸದಾನಂದ ಗೌಡ (ಡಿವಿಎಸ್) ಸಿಎಂ ಗಾದಿ ಏರಿದ್ದರು. ಆದರೆ, ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಯಿತು. ತಾವೇ ಸಿಎಂ ಮಾಡಿದ್ದ ಸದಾನಂದಗೌಡರನ್ನು ಕೆಳಗಿಳಿಸುವಂತೆ ಯಡಿಯೂರಪ್ಪನವರೇ ಹೈಕಮಾಂಡ್ಗೆ ಒತ್ತಡ ಹೇರಿದರು. ಅಂತಿಮವಾಗಿ 2012ರಲ್ಲಿ ಹೈಕಮಾಂಡ್ ಸೂಚನೆಯಂತೆ ಸದಾನಂದ ಗೌಡರು ರಾಜೀನಾಮೆ ನೀಡಿದರು, ಅವರ ಜಾಗಕ್ಕೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಧಿಕಾರ ಹಂಚಿಕೆ ಒಪ್ಪಂದಕ್ಕೆ ತಲೆಬಾಗಿದ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ನಂತರ ಕರ್ನಾಟಕದಲ್ಲಿ ಐದು ವರ್ಷಗಳ ಪೂರ್ಣಾವಧಿ (2013-18) ಆಡಳಿತ ಮುಗಿಸಿದ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಅವರ ಎರಡನೇ ಅವಧಿಯ ಆಡಳಿತಕ್ಕೆ ಮೂರು ವರ್ಷ ತುಂಬುತ್ತಿದ್ದಂತೆ ಹೈಕಮಾಂಡ್ ರಾಜೀನಾಮೆಯ ಕೊಕ್ಕೆ ಹಾಕಿದೆ. ಸದ್ಯ ಅವರ ಮೇಲೆ ಯಾವುದೇ ಗಂಭೀರ ಆರೋಪಗಳಿಲ್ಲದಿದ್ದರೂ ಮತ್ತು ಅತ್ಯಂತ ಪ್ರಭಾವಿ ನಾಯಕರಾಗಿದ್ದರೂ ಸಹ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ‘ಅಧಿಕಾರ ಹಸ್ತಾಂತರ’ದ ಮುಂಚಿನ ಒಪ್ಪಂದಕ್ಕೆ ಬದ್ಧರಾಗಿ ಅವರು ಕುರ್ಚಿ ಬಿಟ್ಟುಕೊಟ್ಟಿದ್ದಾರೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ "ನಾನು ಹೈಕಮಾಂಡ್ ಆದೇಶಕ್ಕೆ ಮಣಿದು ರಾಜೀನಾಮೆ ನೀಡುತ್ತಿದ್ದೇನೆ" ಎಂದು ಬಹಿರಂಗವಾಗಿ ಒಪ್ಪಿಕೊಂಡು, ಘನತೆಯಿಂದಲೇ ಕುರ್ಚಿಯಿಂದ ಕೆಳಗಿಳಿದ ಏಕೈಕ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ ಮಾತ್ರ. ಭಿನ್ನಮತ ಅಥವಾ ಹಗರಣಗಳಿಗಿಂತ ಹೆಚ್ಚಾಗಿ, ಪಕ್ಷದ ಆಂತರಿಕ ಒಪ್ಪಂದಕ್ಕೆ ಬೆಲೆ ಕೊಟ್ಟು ಸಿಎಂ ಸ್ಥಾನ ತ್ಯಾಗ ಮಾಡಿರುವುದು ಈ ಬಾರಿಯ ವಿಶೇಷ ಎಂಬುದು ರಾಜಕೀಯ ವಿಶ್ಲೇಷಕರ ಮಾತು.

