ವಿಧಾನಸೌಧದಲ್ಲಿ ‘ಅಜ್ಜಯ್ಯ’ ಮಂತ್ರಘೋಷ; ಸಿಎಂ ಕುರ್ಚಿಗೆ ಪೂಜೆ ನೆರವೇರಿಸಿದ ಡಿಕೆಶಿ
x

ವಿಧಾನಸೌಧದಲ್ಲಿ ‘ಅಜ್ಜಯ್ಯ’ ಮಂತ್ರಘೋಷ; ಸಿಎಂ ಕುರ್ಚಿಗೆ ಪೂಜೆ ನೆರವೇರಿಸಿದ ಡಿಕೆಶಿ

ಡಿ.ಕೆ.ಶಿವಕುಮಾರ್ ಅವರ ಆರಾಧ್ಯ ದೈವವಾದ ತುಮಕೂರು ಜಿಲ್ಲೆಯ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ (ಅಜ್ಜಯ್ಯ) ಅವರೇ ಖುದ್ದಾಗಿ ವಿಧಾನಸೌಧಕ್ಕೆ ಆಗಮಿಸಿ ವಿಧಿವಿಧಾನ ನೆರವೇರಿಸಿದರು.


ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ವಿಧಾನಸೌಧದ ಸಿಎಂ ಕಚೇರಿಗೆ ಅಜ್ಜಯ್ಯ ಅವರಿಂದ ಅಕ್ಷತೆ ಹಾಗೂ ತೀರ್ಥ ಪ್ರೋಕ್ಷಣೆ, ವಿಶೇಷ ಪೂಜೆ ಮಾಡುವ ನೆರವೇರಿಸುವ ಮೂಲಕ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಕಚೇರಿ ಪ್ರವೇಶಿಸಿದರು.

ಡಿ.ಕೆ.ಶಿವಕುಮಾರ್ ಅವರ ಆರಾಧ್ಯ ದೈವವಾದ ತುಮಕೂರು ಜಿಲ್ಲೆಯ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ (ಅಜ್ಜಯ್ಯ) ಅವರೇ ಖುದ್ದಾಗಿ ವಿಧಾನಸೌಧಕ್ಕೆ ಆಗಮಿಸಿ ಈ ಸಕಲ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.

ಕೆಂಗಲ್ ಗೇಟ್ ಮೂಲಕ ಅಜ್ಜಯ್ಯ ಪ್ರವೇಶ

ನೂತನ ಮುಖ್ಯಮಂತ್ರಿಗಳು ಆಗಮಿಸುವ ಕೆಲ ಕ್ಷಣಗಳ ಮುಂಚಿತವಾಗಿ ನೊಣವಿನಕೆರೆ ಸ್ವಾಮೀಜಿ ಅಜ್ಜಯ್ಯ ಅವರು ವಿಧಾನಸೌಧಕ್ಕೆ ಆಗಮಿಸಿದರು. ವಿಧಾನ ಸೌಧದ ಪಶ್ಚಿಮ ದ್ವಾರದ (ಕೆಂಗಲ್ ಗೇಟ್) ಮೂಲಕ ಒಳಪ್ರವೇಶಿಸಿದ ಶ್ರೀಗಳು, ಪ್ರವೇಶದ್ವಾರದ ಬಳಿಯೇ ಮಂತ್ರ ಘೋಷಗಳೊಂದಿಗೆ ಅಕ್ಷತೆ ಪ್ರೋಕ್ಷಣೆ ಮಾಡಿದರು. ಮಂಗಳ ಮುಹೂರ್ತದಲ್ಲಿ ಶಕ್ತಿ ಸೌಧದ ಒಳಗಡೆ ಹೆಜ್ಜೆ ಇಟ್ಟರು.

ಸಿಎಂ ಕುರ್ಚಿಗೆ ವಿಶೇಷ ಪೂಜೆ, ಶುದ್ಧೀಕರಣ

ಅಜ್ಜಯ್ಯನವರ ಆಗಮನದ ಬೆನ್ನಲ್ಲೇ ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ನೂತನ ಸಿಎಂ ಕುಳಿತುಕೊಳ್ಳುವ ಆಡಳಿತದ ಅತ್ಯುನ್ನತ ಕುರ್ಚಿಗೆ ಸ್ವಾಮೀಜಿಯವರು ವಿಶೇಷ ಪೂಜೆ, ಅರ್ಚನೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ವಿಧಿವಿಧಾನಗಳನ್ನು ಪೂರೈಸಿದರು. ಇಡೀ ಕಚೇರಿಯನ್ನು ಪವಿತ್ರ ಜಲದಿಂದ ಶುದ್ಧೀಕರಿಸಿ, ಧೂಪ-ದೀಪಗಳನ್ನು ಬೆಳಗಿ ಆಧ್ಯಾತ್ಮಿಕ ಕಳೆ ಹೆಚ್ಚಿಸಿದರು.

ಸುಗಮ ಆಡಳಿತಕ್ಕಾಗಿ ವಿಶೇಷ ಸಂಕಲ್ಪ

ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು, ಡಿ.ಕೆ. ಶಿವಕುಮಾರ್ ಅವರ ಮುಂದಿನ ಆಡಳಿತಾವಧಿ ಯಾವುದೇ ವಿಘ್ನಗಳಿಲ್ಲದೆ ಅತ್ಯಂತ ಸುಗಮವಾಗಿ ಸಾಗಲಿ, ರಾಜ್ಯದ ಜನತೆಗೆ ಒಳಿತಾಗಲಿ ಎಂದು ವಿಶೇಷ ಸಂಕಲ್ಪ ನೆರವೇರಿಸಿದರು.

ಇದಾದ ಕೆಲವೇ ಕ್ಷಣಗಳಲ್ಲಿ ವಿಧಾನಸೌಧಕ್ಕೆ ಆಗಮಿಸಿದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ದೈವ ಶ್ರೀ ಅಜ್ಜಯ್ಯನವರ ಪಾದಗಳಿಗೆ ನಮಸ್ಕರಿಸಿ ಭಾವುಕರಾಗಿ ಆಶೀರ್ವಾದ ಪಡೆದರು. ಗುರುಗಳ ಸಾನ್ನಿಧ್ಯದಲ್ಲಿಯೇ ಅತ್ಯಂತ ಸಡಗರ ಮತ್ತು ಭಕ್ತಿಯಿಂದ ಡಿ.ಕೆ. ಶಿವಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಜವಾಬ್ದಾರಿ ವಹಿಸಿಕೊಂಡರು.

Read More
Next Story