ಸಾರ್ವಜನಿಕ ಆಸ್ತಿ ಬಳಕೆ ಮಸೂದೆಗೆ ಅಸ್ತು: ಆರ್‌ಎಸ್‌ಎಸ್‌ಗೆ ಕಡಿವಾಣ?
ಕರ್ನಾಟಕದಲ್ಲಿ ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ಮಸೂದೆಗೆ ಸಚಿವ ಸಂಪುಟ ಅಸ್ತು ನೀಡಿದೆ. ಸರ್ಕಾರಿ ಸ್ಥಳಗಳಲ್ಲಿ ಸಂಘಟನೆಗಳ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯವಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರವು ಸಾರ್ವಜನಿಕ ಹಾಗೂ ಸರ್ಕಾರಿ ಆವರಣಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ಮಸೂದೆ, 2026’ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಈ ಮಸೂದೆಗೆ ಸರ್ಕಾರದ ಒಪ್ಪಿಗೆ ದೊರೆತಿರುವ ಬೆನ್ನಲ್ಲೇ, ಇದರ ರಾಜಕೀಯ ಪರಿಣಾಮಗಳ ಕುರಿತು ಚರ್ಚೆ ಆರಂಭವಾಗಿದೆ.
ಮಸೂದೆಯಲ್ಲಿ ಆರ್‌ಎಸ್‌ಎಸ್ ಅಥವಾ ಯಾವುದೇ ನಿರ್ದಿಷ್ಟ ಸಂಘಟನೆಯ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೆ ಸಾರ್ವಜನಿಕ ರಸ್ತೆಗಳು, ಸರ್ಕಾರಿ ಶಾಲಾ ಆವರಣಗಳು ಸೇರಿದಂತೆ ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳು ಕಾರ್ಯಕ್ರಮ, ಮೆರವಣಿಗೆ ಅಥವಾ ಇತರ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗುವ ರೀತಿಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ ಎನ್ನಲಾಗಿದೆ. ಹೀಗಾಗಿ, ಈ ಮಸೂದೆ ಆರ್‌ಎಸ್‌ಎಸ್‌ನ ಪಥಸಂಚಲನ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆ ನಡೆದಿದೆ.
2025ರ ಮಾರ್ಗಸೂಚಿಗೆ ಹೈಕೋರ್ಟ್ ತಡೆ
ಸಾರ್ವಜನಿಕ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯಗೊಳಿಸುವ ಸಂಬಂಧ ರಾಜ್ಯ ಸರ್ಕಾರ 2025ರಲ್ಲಿ ಮಾರ್ಗಸೂಚಿ ಹೊರಡಿಸಿತ್ತು. ಸರ್ಕಾರಿ ಶಾಲೆಗಳ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಘಟನೆಗಳ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪುನಚೇತನ ಸೇವಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ ಹೈಕೋರ್ಟ್ ಸರ್ಕಾರದ ಮಾರ್ಗಸೂಚಿಗೆ ತಡೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ಮಾರ್ಗಸೂಚಿಯ ಬದಲಿಗೆ ಕಾನೂನು ರೂಪದಲ್ಲಿ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಸದನದಲ್ಲಿ ಮಂಡನೆಗೆ ಸಿದ್ಧತೆ
ಸಚಿವ ಸಂಪುಟದ ಅನುಮೋದನೆಯ ನಂತರ ಮಸೂದೆ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಬೇಕಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಚರ್ಚೆ ಹಾಗೂ ಅಂಗೀಕಾರದ ಬಳಿಕವೇ ಅದು ಕಾನೂನಿನ ರೂಪ ಪಡೆಯಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಇರುವುದರಿಂದ ಮಸೂದೆ ಅಂಗೀಕಾರವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್-ಆರ್‌ಎಸ್‌ಎಸ್ ಸಂಘರ್ಷಕ್ಕೆ ಹೊಸ ತಿರುವು?
ಮಸೂದೆ ಜಾರಿಗೆ ಬಂದರೆ ಸಾರ್ವಜನಿಕ ರಸ್ತೆಗಳು, ಸರ್ಕಾರಿ ಶಾಲೆಗಳು ಹಾಗೂ ಇತರ ಸರ್ಕಾರಿ ಆವರಣಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಖಾಸಗಿ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎನ್ನಲಾಗಿದೆ.
ಈ ಹಿಂದೆ ಆರ್‌ಎಸ್‌ಎಸ್ ನೋಂದಣಿ ವಿಚಾರವಾಗಿ ಗೃಹ ಸಚಿವೆ ಜಿ. ಪರಮೇಶ್ವರ್ ನೀಡಿದ್ದ ಹೇಳಿಕೆ ಸೇರಿದಂತೆ ಹಲವು ಬೆಳವಣಿಗೆಗಳ ನಡುವೆ ಹೊಸ ಮಸೂದೆ ರಾಜಕೀಯವಾಗಿ ಮಹತ್ವ ಪಡೆದಿದೆ. ಮಸೂದೆ ಸದನದಲ್ಲಿ ಮಂಡನೆಯಾದ ಬಳಿಕ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯುವ ಸಾಧ್ಯತೆ ಇದೆ. ಅಲ್ಲದೆ, ಆರ್‌ಎಸ್‌ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಸಾರ್ವಜನಿಕ ಕಾರ್ಯಕ್ರಮಗಳ ಮೇಲಿನ ನಿಯಂತ್ರಣದ ವಿಚಾರ ರಾಜ್ಯದ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ನಿರೀಕ್ಷೆಯಿದೆ.

