
44.84 ಲಕ್ಷ ಮತದಾರರ ಹಕ್ಕಿಗೆ ಕುತ್ತು?: ನಿಮ್ಮ ಹೆಸರೂ ಪಟ್ಟಿಯಲ್ಲಿ ಸುರಕ್ಷಿತವಾಗಿದೆಯೇ? ಪರಿಶೀಲಿಸಿ
ಮತದಾರರ ಪಟ್ಟಿಯಲ್ಲಿ ಹೆಸರುಗಳಿದ್ದರೂ, ವಾಸ್ತವದಲ್ಲಿ ಆ ಮತದಾರರು ಅಲ್ಲಿ ಇಲ್ಲದಿರುವುದು ಪ್ರಜಾಪ್ರಭುತ್ವದ ಹಕ್ಕಿನ ಮೌಲ್ಯವನ್ನು ಕುಂದಿಸುತ್ತದೆ. ಈ ಹಿನ್ನೆಲೆಯಲ್ಲಿ 44.84 ಲಕ್ಷ ಮತದಾರರನ್ನು ಎಎಸ್‌ಡಿಡಿಒ ವರ್ಗದಡಿ ಗುರುತಿಸಿದೆ.
ರಾಜ್ಯದ ಮತದಾರರ ಪಟ್ಟಿಯನ್ನು ಅತ್ಯಂತ ನಿಖರ, ಪಾರದರ್ಶಕ ಮತ್ತು ದೋಷರಹಿತವಾಗಿಸಲು ಕೈಗೊಂಡಿರುವ ಅಭಿಯಾನವು ಮುಂದುವರಿದಿದ್ದು, ಮನೆ ಬದಲಿಸಿದ್ದರೂ ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಿಸದೇ ಇರುವ ಸುಮಾರು 44.84 ಲಕ್ಷ ಮತದಾರರ ಗಣತಿ ನಮೂನೆಗಳನ್ನು 'ಪತ್ತೆಯಾಗದ ಮತದಾರ' ಅಥವಾ 'ಶಾಶ್ವತವಾಗಿ ಸ್ಥಳಾಂತರವಾದ ಮತದಾರ', ನಕಲು, ಸತ್ತವರು ಮತ್ತು ಇತರರು (ASDDO) ವರ್ಗದಡಿಯಲ್ಲಿ ಬರುವಂತೆ ಗುರುತಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ತೀರ್ಮಾನಿಸಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಈ ಕ್ರಮ ಕೈಗೊಂಡಿದೆ. ಈ ಕುರಿತು ಮಾಹಿತಿ ನೀಡಿದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ಮತದಾರರ ಪಟ್ಟಿಯಲ್ಲಿ ಹೆಸರುಗಳಿದ್ದರೂ, ವಾಸ್ತವದಲ್ಲಿ ಆ ಮತದಾರರು ಅಲ್ಲಿಲ್ಲದಿರುವುದು ಪ್ರಜಾಪ್ರಭುತ್ವದ ಹಕ್ಕಿನ ಮೌಲ್ಯವನ್ನು ಕುಂದಿಸುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು 44,84,331 ಮತದಾರರನ್ನು ಎಎಸ್‌ಡಿಡಿಒ ವರ್ಗದಡಿ ಗುರುತಿಸಿದೆ. ಶಾಶ್ವತವಾಗಿ ಸ್ಥಳಾಂತರಗೊಂಡವರು 26,32,229 (ಅತಿ ಹೆಚ್ಚು ಸಂಖ್ಯೆಯ ಮತದಾರರು ಬೇರೆ ಊರುಗಳಿಗೆ ಸ್ಥಳಾಂತರಗೊಂಡಿದ್ದಾರೆ) ಮಂದಿ ಇದ್ದು, 9,81,642 ಮೃತಪಟ್ಟವರಿದ್ದಾರೆ. ಇವರನ್ನು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗುತ್ತದೆ. 5,87,457 ಗೈರು ಹಾಜರಿರಾಗಿದ್ದು, 2,70,659 ನಕಲು ಮತದಾರರು ಎಂದು ಗುರುತಿಸಲಾಗಿದೆ. ಮಾಹಿತಿ ನೀಡಲು ನಿರಾಕರಿಸಿದವರು ಅಥವಾ ದಾಖಲಾತಿ ತೊಂದರೆ ಇರುವವರು 12,344 ಇದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಸಹಭಾಗಿತ್ವ
ಚುನಾವಣಾ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಬಹಳ ದೊಡ್ಡದು. ಆಯೋಗವು ಈ ಎಎಸ್‌ಡಿಡಿಒ ಪಟ್ಟಿಯನ್ನು ಕೇವಲ ತನ್ನ ಕಚೇರಿಯಲ್ಲೇ ಇಟ್ಟುಕೊಳ್ಳದೆ, ರಾಜ್ಯದ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಂಡಿದೆ. ಬೂತ್ ಮಟ್ಟದ ಏಜೆಂಟ್‌ಗಳು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಕ್ಷೇತ್ರವಾರು ಚುನಾವಣಾ ನೋಂದಣಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ದತ್ತಾಂಶವನ್ನು ಪಕ್ಷಗಳಿಗೆ ಒದಗಿಸಿದ್ದಾರೆ. ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ಅದನ್ನು ತಕ್ಷಣವೇ ಆಯೋಗದ ಗಮನಕ್ಕೆ ತರಲು ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಪ್ರಜಾಪ್ರಭುತ್ವದ ಪಾರದರ್ಶಕತೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ತೆಗೆದುಕೊಂಡ ಉತ್ತಮ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸವಾಲುಗಳು
ಬೆಂಗಳೂರು ಮಹಾನಗರವು ರಾಜ್ಯದ ಒಟ್ಟು ಮತದಾರರ ಪಟ್ಟಿಯ ಗೊಂದಲದಲ್ಲಿ ಸಿಂಹಪಾಲು ಹೊಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರದೇಶಗಳಲ್ಲಿ ಮಾತ್ರವೇ 23,86,132 ಮತದಾರರನ್ನು ಎಎಸ್‌ಡಿಡಿಒ ವರ್ಗದಡಿ ಗುರುತಿಸಲಾಗಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಜನರು ಉದ್ಯೋಗ ಮತ್ತು ಇತರೆ ಕಾರಣಗಳಿಗಾಗಿ ಪದೇ ಪದೇ ಮನೆ ಬದಲಾಯಿಸುತ್ತಾರೆ. ಇದರಿಂದಾಗಿ ಹಳೆಯ ವಿಳಾಸದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಉಳಿದುಕೊಳ್ಳುತ್ತದೆ. ಬೆಂಗಳೂರಿನಲ್ಲಿ ಡಿಜಿಟಲೀಕರಣದ ಪ್ರಮಾಣ ಶೇ. 30ರಷ್ಟಿದೆ ಎಂಬುದು ಗಮನಾರ್ಹವಾಗಿದ್ದು, ಮುಂಬರುವ ದಿನಗಳಲ್ಲಿ ಇದನ್ನು ವೇಗಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.
ಡಿಜಿಟಲೀಕರಣದ ಪ್ರಗತಿ
ರಾಜ್ಯದ ಡಿಜಿಟಲೀಕರಣದ ಒಟ್ಟಾರೆ ಸಾಧನೆ ಶೇ. 66.35 ರಷ್ಟಿದೆ. ಹಾವೇರಿ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳು ಡಿಜಿಟಲೀಕರಣದಲ್ಲಿ ಶೇ. 80ರ ಮೈಲಿಗಲ್ಲನ್ನು ದಾಟಿವೆ. ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ಡಿಜಿಟಲೀಕರಣದ ವೇಗವನ್ನು ಹೆಚ್ಚಿಸಬೇಕಿದೆ. ಕಳೆದ 23 ದಿನಗಳಲ್ಲಿ 5.5 ಕೋಟಿ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 3.5 ಕೋಟಿ ನಮೂನೆಗಳು ಈಗಾಗಲೇ ಡಿಜಿಟಲೀಕರಣಗೊಂಡಿವೆ. ಮುಂದಿನ 17 ದಿನಗಳಲ್ಲಿ ಉಳಿದಿರುವ 1.5 ಕೋಟಿ ನಮೂನೆಗಳನ್ನು ಪೂರ್ಣಗೊಳಿಸಬೇಕಾದ ಸವಾಲು ಆಯೋಗದ ಮುಂದಿದೆ. ಆಗಸ್ಟ್ 8 ಗಡುವು ಆಗಿದ್ದು, ಎಲ್ಲಾ ಮತದಾರರು ತಮ್ಮ ನಮೂನೆಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು. ಮತದಾರರು ಮನೆಯಲ್ಲಿ ಇಲ್ಲದಿದ್ದರೆ, ಕುಟುಂಬದ ಯಾವುದೇ ವಯಸ್ಕ ಸದಸ್ಯರು ಅವರ ಪರವಾಗಿ ನಮೂನೆಗೆ ಸಹಿ ಹಾಕಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಚುನಾವಣಾ ಆಯೋಗವು ಕೈಗೊಂಡಿರುವ ಈ ಕಾರ್ಯವು ಕೇವಲ ಆಡಳಿತಾತ್ಮಕ ಕೆಲಸವಲ್ಲ, ಇದು ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವ ಪ್ರಯತ್ನವಾಗಿದೆ. ಮತದಾರರ ಪಟ್ಟಿಯಲ್ಲಿರುವ 'ನಕಲಿ' ಅಥವಾ 'ಮೃತಪಟ್ಟ' ವ್ಯಕ್ತಿಗಳ ಹೆಸರನ್ನು ತೆಗೆದುಹಾಕುವುದರಿಂದ ಮತದಾನದ ಪ್ರಮಾಣ ಮತ್ತು ನೈಜತೆ ಹೆಚ್ಚಾಗುತ್ತದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಶೇ. 30ರಷ್ಟು ಡಿಜಿಟಲೀಕರಣವಾಗಿರುವುದು ಆಯೋಗದ ಮುಂದಿರುವ ದೊಡ್ಡ ಸವಾಲು ಆಗಿದೆ. ಆದರೆ, ಹಾವೇರಿ ಮತ್ತು ಹಾಸನದಂತಹ ಜಿಲ್ಲೆಗಳು ತೋರಿಸಿರುವ ಉತ್ಸಾಹವನ್ನು ರಾಜ್ಯಾದ್ಯಂತ ಅನುಸರಿಸಿದರೆ, ನಿಗದಿತ ಸಮಯದೊಳಗೆ ಗುರಿ ತಲುಪುವುದು ಕಷ್ಟವೇನಲ್ಲ.

