Delay in implementation of caste census: Former CM Siddaramaiah vs. Prof. C.S. Dwarkanath is very upset!
x

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಡಾ. ಸಿ.ಎಸ್. ದ್ವಾರಕನಾಥ್

ಜಾತಿ ಗಣತಿ ಜಾರಿ ವಿಳಂಬ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೊ. ಸಿ.ಎಸ್. ದ್ವಾರಕನಾಥ್ ತೀವ್ರ ಅಸಮಾಧಾನ!

ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವಾಗ ಇವತ್ತು ವರದಿ ತಂದುಕೊಡುತ್ತಾರೆ ಎಂದರೆ ಏನರ್ಥ? ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಡಾ. ಸಿ.ಎಸ್. ದ್ವಾರಕನಾಥ್ ಪ್ರಶ್ನಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ತೀವ್ರ ರಾಜಕೀಯ ಜಟಾಪಟಿ ಮತ್ತು ಸಾರ್ವಜನಿಕ ಚರ್ಚೆಗೆ ಕಾರಣವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಅನುಷ್ಠಾನದ ಕುರಿತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಡಾ. ಸಿ.ಎಸ್. ದ್ವಾರಕನಾಥ್ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವರದಿಯನ್ನು ತರಾತುರಿಯಲ್ಲಿ ಸ್ವೀಕರಿಸಿದೆಯೇ ಹೊರತು ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅವರು ನೇರವಾಗಿ ಆಪಾದಿಸಿದ್ದಾರೆ.

ದ ಫೆಡರಲ್‌ ಕರ್ನಾಟಕದ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, ಜಾತಿ ಗಣತಿಯ ಇತಿಹಾಸ, ಅನುದಾನದ ಬಳಕೆ ಹಾಗೂ ಪ್ರಸ್ತುತ ವರದಿಯ ಸುತ್ತಲಿರುವ ಗೊಂದಲಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

'ವರದಿ ಸಲ್ಲಿಕೆ ಮಿಠಾಯಿ ಅಂಗಡಿಯಲ್ಲ'

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯುವ ಭೀತಿ ಎದುರಾದಾಗ ದಿಢೀರನೆ ವರದಿ ಸಲ್ಲಿಕೆಯಾಗಿರುವುದನ್ನು ದ್ವಾರಕನಾಥ್ ಪ್ರಶ್ನಿಸಿದ್ದಾರೆ. "ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವಾಗ ಇವತ್ತು ವರದಿ ತಂದುಕೊಡುತ್ತಾರೆ ಎಂದರೆ ಏನರ್ಥ? ವರದಿ ಸಿದ್ಧಪಡಿಸುವುದು ಎಂದರೆ ಮಿಠಾಯಿ ಅಂಗಡಿಯಲ್ಲಿ ಒಂದು ಕೆಜಿ ಮೈಸೂರು ಪಾಕ್ ಅಥವಾ ಜಿಲೇಬಿ ಕಟ್ಟಿ ಕೊಟ್ಟಷ್ಟೇ ಸುಲಭವೇ? ಆಯೋಗದ ವರದಿಗೆ ತನ್ನದೇ ಆದ ಪಾವಿತ್ರ್ಯತೆ ಇರುತ್ತದೆ. ಇಂತಹ ದಿಢೀರ್ ನಡೆಗಳು ಆಯೋಗದ ಗೌರವಕ್ಕೆ ಧಕ್ಕೆ ತರುತ್ತವೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ ಹೆಚ್ಚಳ ಮತ್ತು ಕಾನೂನು ಸವಾಲುಗಳು

ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಪ್ರಸ್ತುತ ಇರುವ ಶೇ. 32 ರಿಂದ ಶೇ. 42 ಗೆ ಏರಿಸಲು ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್‌ನ ಇಂದಿರಾ ಸಾಹ್ನಿ ತೀರ್ಪಿನ ಪ್ರಕಾರ ಒಟ್ಟು ಮೀಸಲಾತಿ ಶೇ. 50 ಮೀರಬಾರದು ಎಂಬ ಸ್ಪಷ್ಟ ನಿಯಮವಿದೆ. ಈಗಾಗಲೇ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಶೇ. 50 ಮೀರಿದ ಮೀಸಲಾತಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನಾಗಮೋಹನ್ ದಾಸ್ ಸಮಿತಿಯ ವರದಿಯಂತೆ ಮೀಸಲಾತಿಯನ್ನು ಶೇ. 56 ಗೆ ಹೆಚ್ಚಿಸಲು ಹೋದಾಗಲೂ ಇದೇ ಕಾನೂನು ತೊಡಕು ಎದುರಾಗಿತ್ತು. ಹೀಗಿರುವಾಗ ಶೇ. 42 ಗೆ ಮೀಸಲಾತಿ ಏರಿಸಿದರೆ ಅದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುತ್ತದೆಯೇ? ಇದು ಕೇವಲ ಮತ್ತಷ್ಟು ಗೊಂದಲಗಳಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

'ವರದಿ ಬಹಿರಂಗಪಡಿಸಿ, ಚರ್ಚೆಗೆ ಬಿಡಿ'

"ನಾನು ಆಯೋಗದ ಅಧ್ಯಕ್ಷನಾಗಿದ್ದಾಗ ಇತಿಹಾಸದಲ್ಲೇ ಮೊದಲ ಬಾರಿಗೆ ವರದಿಯನ್ನು ಕನ್ನಡದಲ್ಲಿ ಸಿದ್ಧಪಡಿಸಿ, ಸಾರ್ವಜನಿಕರ ಅವಗಾಹನೆಗಾಗಿ ಸಿಡಿಗಳ ಮೂಲಕ ಬಹಿರಂಗಪಡಿಸಿದ್ದೆ. ಸಾರ್ವಜನಿಕರ ತೆರಿಗೆ ಹಣದಿಂದ ಸಿದ್ಧವಾದ ವರದಿಯನ್ನು ರಹಸ್ಯವಾಗಿಡುವುದು ಸರಿಯಲ್ಲ. ಈಗಿನ ಸರ್ಕಾರ ತಕ್ಷಣವೇ ಈ ವರದಿಯನ್ನು ಪಬ್ಲಿಕ್ ಡೊಮೈನ್‌ನಲ್ಲಿ ಬಿಡಬೇಕು. ಅಸೆಂಬ್ಲಿಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತಜ್ಞರು, ಎಥ್ನೋಗ್ರಾಫರ್ಸ್ ಹಾಗೂ ಸಾಮಾನ್ಯ ಜನ ಇದರ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು. ಆ ನಂತರವಷ್ಟೇ ಇದರ ಜಾರಿಯ ಅರ್ಹತೆ ನಿರ್ಧಾರವಾಗಬೇಕು." ಎಂದು ತಿಳಿಸಿದರು.

900 ಕೋಟಿ ರೂ. ಸಾರ್ವಜನಿಕ ಹಣ ವ್ಯರ್ಥ?

ಕಾಂತರಾಜ್ ಸಮಿತಿ, ಜಯಪ್ರಕಾಶ್ ಹೆಗಡೆ ಸಮಿತಿ ಹಾಗೂ ಮಧುಸೂದನ್ ನಾಯಕ್ ಸಮಿತಿಗಳವರೆಗೆ ಈ ಪ್ರಕ್ರಿಯೆಗೆ ಒಟ್ಟು ಸುಮಾರು 800 ರಿಂದ 900 ಕೋಟಿ ರೂ. ಸಾರ್ವಜನಿಕರ ಹಣ ಖರ್ಚಾಗಿದೆ ಎಂದು ಉಲ್ಲೇಖಿಸಿದ ಅವರು, "ಸಾಮಾನ್ಯ ಜನ ಎರಡು ಇಡ್ಲಿ ತಿಂದರೂ ಶೇ. 18 ಜಿಎಸ್‌ಟಿ ಕಟ್ಟುತ್ತಾರೆ, ಚಪ್ಪಲಿ ಕೊಂಡರೂ ತೆರಿಗೆ ಕಟ್ಟುತ್ತಾರೆ. ಇಂತಹ ಕಷ್ಟದ ಹಣವನ್ನು ಬಳಸಿ, ಸುಮಾರು ಒಂದೂವರೆ ಲಕ್ಷ ಜನರ ಶ್ರಮದಿಂದ ಸಿದ್ಧವಾದ ವರದಿ ಜಾರಿಯಾಗದಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಮತ್ತು ಸಾರ್ವಜನಿಕರಿಗೆ ಮಾಡುವ ದ್ರೋಹ," ಎಂದರು.

ದೇವರಾಜ ಅರಸು ಅವರೊಂದಿಗಿನ ಹೋಲಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ದೇವರಾಜ ಅರಸು ಅವರೊಂದಿಗೆ ಹೋಲಿಸಿದ ದ್ವಾರಕನಾಥ್, "ದೇವರಾಜ ಅರಸು ಅವರು ಇಡೀ ಪ್ರಭಾವಿ ಸಮುದಾಯಗಳ ವಿರೋಧ ಕಟ್ಟಿಕೊಂಡು ಭೂ ಸುಧಾರಣೆ ತಂದರು. ಅರಸು ಅವರಿಗಿಂತ ಹೆಚ್ಚಿನ ಅಧಿಕಾರ ಮತ್ತು ಬಲ ಸಿದ್ದರಾಮಯ್ಯನವರಿಗಿತ್ತು. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಈ ವರದಿಯನ್ನು ಸುಲಭವಾಗಿ ಜಾರಿಗೊಳಿಸಿ ಮತ್ತೊಬ್ಬ ದೇವರಾಜ ಅರಸು ಆಗಬಹುದಿತ್ತು. ಆದರೆ ಅವರು ಆ ಸುವರ್ಣ ಅವಕಾಶವನ್ನು ಕಳೆದುಕೊಂಡಿದ್ದಾರೆ," ಎಂದು ವಿಷಾದಿಸಿದರು.

ಸ್ವಜಾತಿ ಪ್ರೇಮದ ಆರೋಪ ಹಾಗೂ ಅನುದಾನ ವಿವಾದ

ಇತ್ತೀಚೆಗೆ ವಿವಿಧ ಸಂಘ ಸಂಸ್ಥೆಗಳಿಗೆ ಬಿಡುಗಡೆಯಾದ 71 ಕೋಟಿ ರೂ. ಅನುದಾನದಲ್ಲಿ 55 ಕೋಟಿ ರೂ. ಕೇವಲ ಕುರುಬ ಸಮುದಾಯದ ಸಂಸ್ಥೆಗಳಿಗೆ ಸಿಕ್ಕಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಕುರುಬ ಸಮುದಾಯವೂ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಅದರಲ್ಲಿ ಇಂದಿಗೂ ಕುರಿಗಾಹಿಗಳು, ಕಂಬಳಿ ಮಾರುವವರು ಕಷ್ಟದಲ್ಲಿದ್ದಾರೆ. ಅವರಿಗೆ ನೀಡಿರುವುದನ್ನು ನಾನು ವಿರೋಧಿಸುವುದಿಲ್ಲ. ಆದರೆ, ಅವರ ಜೊತೆಯಲ್ಲೇ ಇರುವ ಕುಂಬಾರರು, ಕಮ್ಮಾರರು, ಮಡಿವಾಳರು, ಕ್ಷೌರಿಕರು ಹಾಗೂ ಅಲೆಮಾರಿ ಸಮುದಾಯಗಳಿಗೂ ಸಮಪಾಲು ನೀಡಬೇಕಿತ್ತು. ದೇವರಾಜ ಅರಸು ಅವರು ಇಡೀ ರಾಜ್ಯಕ್ಕೆ ಮೀಸಲಾತಿ ಕೊಟ್ಟರೂ, ತಮ್ಮನ್ನು ಜಾತಿವಾದಿ ಎನ್ನಬಾರದು ಎಂಬ ಸೂಕ್ಷ್ಮತೆಯಿಂದ ತಮ್ಮದೇ ಜಾತಿಗೆ ಮೀಸಲಾತಿ ಮುಟ್ಟಿಸಿರಲಿಲ್ಲ. ಇಂತಹ ಸೂಕ್ಷ್ಮತೆಯನ್ನು ಇಂದಿನ ನಾಯಕರು ಅಳವಡಿಸಿಕೊಳ್ಳಬೇಕು," ಎಂದರು.

ವಿಧಾನ ಪರಿಷತ್ ಆಕಾಂಕ್ಷೆ

ತಮ್ಮ ರಾಜಕೀಯ ನಡೆಯ ಕುರಿತು ಮಾತನಾಡುತ್ತಾ, ತಾವು ಕಾಂಗ್ರೆಸ್ ಸೇರಿರುವುದನ್ನು ಖಚಿತಪಡಿಸಿದ ಅವರು, ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ತಾವೂ ಒಬ್ಬ ಆಕಾಂಕ್ಷಿ ಎಂದು ಒಪ್ಪಿಕೊಂಡರು. "ರಾಜ್ಯದಲ್ಲಿರುವ 120 ಅಲೆಮಾರಿ ಸಮುದಾಯಗಳು, 196 ಅತಿ ಹಿಂದುಳಿದ ವರ್ಗಗಳು ಮತ್ತು 49 ಆದಿವಾಸಿ ಸಮುದಾಯಗಳಿಗೆ ಸದನದಲ್ಲಿ ಧ್ವನಿಯೇ ಇಲ್ಲ. ಹೊರಗೆ ನಾನು ಎಷ್ಟೇ ಮಾತನಾಡಿದರೂ ಅದಕ್ಕೆ ಮಾನ್ಯತೆ ಸಿಗುವುದಿಲ್ಲ. ಅದೇ ಸದನದ ಒಳಗಡೆ ಈ ತಬ್ಬಲಿ ಸಮುದಾಯಗಳ ಪರವಾಗಿ ಧ್ವನಿ ಎತ್ತಿದರೆ ನ್ಯಾಯ ಸಿಗುತ್ತದೆ. ಆ ಜವಾಬ್ದಾರಿಗಾಗಿ ನಾನು ಪರಿಷತ್ ಸದಸ್ಯನಾಗಲು ಬಯಸುತ್ತೇನೆ," ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

Read More
Next Story