
ಜಿ. ಪರಮೇಶ್ವರ ಅವರನ್ನು ನೇಮಿಸುವಂತೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದರು ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ.
ವಿವಾದಿತ ಉದ್ಯಾನ ಮಸೂದೆ ವಾಪಸ್; ಮುಂದಿನ ಅಧಿವೇಶನದಲ್ಲಿ ಪರಿಷ್ಕೃತ ಮಸೂದೆ ಮಂಡನೆ
ಸಾರ್ವಜನಿಕರ ಅಭಿಪ್ರಾಯ ಪಡೆದ ಬಳಿಕ ಮುಂದಿನ ಅಧಿವೇಶನದಲ್ಲಿ ಮರು ಮಂಡನೆ ಮಾಡಲಿದ್ದೇವೆ. ಮಾರಾಟ, ಲೀಸ್, ಗಿಫ್ಟ್ ಈ ಅಂಶಗಳನ್ನು ಪುನರ್ ಪರಿಶೀಲನೆ ಮಾಡಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಿದ್ದ ವಿವಾದಾತ್ಮಕ ʼಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ಮಸೂದೆ ಹಿಂಪಡೆಯಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಜಿ.ಪರಮೇಶ್ವರ್ ಅವರು, ಅಧಿವೇಶನದಲ್ಲಿ ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ಮಸೂದೆ ಬಗ್ಗೆ ಚರ್ಚೆ ನಡೆದಿರಲಿಲ್ಲ. ಇದೇ ವಿಚಾರವನ್ನು ವಿಪಕ್ಷಗಳು ರಾಜಕೀಯವಾಗಿ ಬಳಸಿಕೊಂಡು ತಪ್ಪು ಸಂದೇಶ ನೀಡಿದ್ದವು. ಈ ಹಿನ್ನೆಲೆ ಮಸೂದೆ ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಮಸೂದೆಯನ್ನು ಸಾರ್ವಜನಿಕರ ಚರ್ಚೆಗೆ ಇಡಲಾಗುವುದು. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆದ ಬಳಿಕ ಮುಂದಿನ ಅಧಿವೇಶನದಲ್ಲಿ ಮರು ಮಂಡನೆ ಮಾಡಲಿದ್ದೇವೆ. ಮಾರಾಟ, ಲೀಸ್, ಗಿಫ್ಟ್ ಈ ಅಂಶಗಳನ್ನು ಪುನರ್ ಪರಿಶೀಲನೆ ಮಾಡಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.
ವಿವಾದಿತ ಮಸೂದೆ ಬಗ್ಗೆ ಸಾರ್ವಜನಿಕ ವಲಯ, ಪರಿಸರ ಪ್ರೇಮಿಗಳು ಹಾಗೂ ವಿಪಕ್ಷ ಬಿಜೆಪಿಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಕಳೆದ ಭಾನುವಾರ ಲಾಲ್ ಬಾಗ್ ನಲ್ಲಿ ಪರಿಸರ ಪ್ರೇಮಿಗಳು, ನಾಗರಿಕರು ಮಸೂದೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೀಗ ಸಾರ್ವಜನಿಕರು, ಪ್ರತಿಪಕ್ಷಗಳು, ನಾಗರಿಕರ ಒತ್ತಡಕ್ಕೆ ಮಣಿದ ಸರ್ಕಾರ, ವಿವಾದಿತ ಮಸೂದೆಯನ್ನು ಹಿಂಪಡೆದಿದೆ. ಉದ್ಯಾನವನದ ಶೇ5 ರಷ್ಟು ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅವಕಾಶ ಮಸೂದೆಯಲ್ಲಿತ್ತು. ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಯಾವುದೇ ಚರ್ಚೆ ಇಲ್ಲದೇ ಮಸೂದೆ ಅಂಗೀಕಾರವಾಗಿತ್ತು.
ಇತ್ತೀಚೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಪರಿಸರವಾದಿ ಯಲ್ಲಪ್ಪರೆಡ್ಡಿ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ, ಉದ್ಯಾನದ ಮಸೂದೆಗೆ ಅಂಕಿತ ಹಾಕದಂತೆ ಒತ್ತಾಯಿಸಿತ್ತು. 712 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರದೇಶವಿದೆ. ಜಿಬಿಎ ದಾಖಲೆಗಳ ಪ್ರಕಾರ ಈ ಪ್ರದೇಶದಲ್ಲಿ 1,146 ಉದ್ಯಾನಗಳಿವೆ. ಇವುಗಳ ಒಟ್ಟು ವಿಸ್ತೀರ್ಣ 39.18 ಲಕ್ಷ ಚದರ ಮೀಟರ್ ಅಂದರೆ ಸುಮಾರು 968 ಎಕರೆ ಪ್ರದೇಶವಿದೆ.
ಜಿಬಿಎಯ 1,75,939 ಎಕರೆ ವ್ಯಾಪ್ತಿಯಲ್ಲಿ 1000 ಎಕರೆಯಷ್ಟೂ ಇಲ್ಲದ ಉದ್ಯಾನಗಳ ವಿಸ್ತೀರ್ಣದಲ್ಲಿ ಈಗ ಶೇ 5 ರಷ್ಟು ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿದರೆ ಪರಿಸರ ವ್ಯವಸ್ಥೆಯೇ ಹಾಳಾಗಲಿದೆ. ನಾಲ್ಕೈದು ಹೊಸ ಉದ್ಯಾನ ನಿರ್ಮಿಸುವುದಾಗಿ ಸರ್ಕಾರ ಹೇಳುತ್ತಿದ್ದರೂ ಇದು ಹೊಸ ಪ್ರಸ್ತಾಪವೇನಲ್ಲ. ದಶಕಗಳಿಂದಲೂ ಇದೇ ಮಾತನ್ನು ಬೇರೆ ಬೇರೆ ಸರ್ಕಾರಗಳು ಹೇಳುತ್ತಿವೆ. ಆದರೆ, ಈವರೆಗೂ ಯಾವುದೇ ಹೊಸ ಉದ್ಯಾನ ನಿರ್ಮಾಣವಾಗಿಲ್ಲ. ಹಾಗಾಗಿ, ಇರುವ ಉದ್ಯಾನವನ್ನು ಕಡಿಮೆಗೊಳಿಸದೆ, ಸಂರಕ್ಷಿಸಬೇಕು ಎಂಬ ಒತ್ತಾಯಗಳು ಬರುತ್ತಿವೆ.
ಸಂವಿಧಾನದ ಕಲಂ 21, 48A, 51A (g) ಯಡಿ ಉದ್ಯಾನ ರಕ್ಷಣೆಯ ಜವಾಬ್ದಾರಿ ಇದೆ. ನಗರ ಯೋಜನೆಯಲ್ಲೂ ಉದ್ಯಾನ, ಆಟದ ಮೈದಾನ, ಸಾರ್ವಜನಿಕ ಮುಕ್ತ ಪ್ರದೇಶ ಎಂದು ಮೀಸಲಾದ ಭೂಮಿಯನ್ನು ಬೇರೆ ಉದ್ದೇಶಕ್ಕೆ ಪರಿವರ್ತಿಸಬಾರದು ಎಂದು ಹೇಳಲಾಗಿದೆ. ಇದಲ್ಲದೇ, ಪರಿಸರ ಸಂರಕ್ಷಣಾ ಕಾಯ್ದೆ, 1986ರ ಪರಸರ (ಸಂರಕ್ಷಣೆ) ಕಾಯ್ದೆ, 2002 ರ ಜೈವಿಕ ವೈವಿಧ್ಯ ಕಾಯ್ದೆ ಪ್ರಕಾರ ಉದ್ಯಾನಗಳಲ್ಲಿ ಸ್ಥಳೀಯ ಸಸ್ಯಪ್ರಭೇದಗಳು, ಪಕ್ಷಿಗಳು, ಚಿಟ್ಟೆಗಳು ಮತ್ತು ಇತರ ಜೀವಿಗಳು ಇದ್ದಲ್ಲಿ ಅವು ನಗರ ಜೀವವೈವಿಧ್ಯದ ಭಾಗವಾಗಲಿವೆ. ಅವುಗಳನ್ನು ಸಂರಕ್ಷಿಸಬೇಕು ಎಂದು ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಪೀಠ ಕೂಡ ಹಲವು ಬಾರಿ ಉದ್ಯಾನ, ಕೆರೆ, ಜಲಮೂಲ, ಹಸಿರು ಪ್ರದೇಶ ಅಥವಾ ಪರಿಸರಕ್ಕೆ ಹಾನಿಯಾಗುವ ಯೋಜನೆಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೂ ಇದೆ. ಇಷ್ಟೆಲ್ಲಾ ಬೆಳವಣಿಗೆಗಳ ನಂತರವೂ ಲಾಲ್ಬಾಗ್ನಲ್ಲಿ ಸುರಂಗ ರಸ್ತೆ ನಿರ್ಮಾಣ, ಉದ್ಯಾನದ ಶೇ 5 ರಷ್ಟು ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಪ್ರಸ್ತಾಪವು ನಾಗರಿಕರ ಟೀಕೆಗೆ ಒಳಗಾಗಿದೆ.

