ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ: ಅಂತಿಮ ನಿರ್ಧಾರ ಸಿಎಂ ವಿವೇಚನೆಗೆ
x

ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ: ಅಂತಿಮ ನಿರ್ಧಾರ ಸಿಎಂ ವಿವೇಚನೆಗೆ

ಪ್ರಕರಣದ ಕಾನೂನು ಸವಾಲುಗಳು ಮತ್ತು ರಾಜಕೀಯ ಪರಿಣಾಮಗಳ ಸಮಾಲೋಚನೆ ನಡೆಸಲಾಗಿದೆ. ಸಿಸಿಬಿ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಅಭಿಪ್ರಾಯ ಪಡೆದುಕೊಳ್ಳಲಾಗಿದೆ.


Click the Play button to hear this message in audio format

ರಾಜ್ಯ ರಾಜಕಾರಣದ ಅಂಗಳದಲ್ಲಿ ಭಾರಿ ಸಂಚಲನ ಹಾಗೂ ಪರ-ವಿರೋಧದ ಚರ್ಚೆಗಳಿಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಸಚಿವ ಸಂಪುಟ ಸಭೆಯಲ್ಲಿ ಪ್ರತಿಧ್ವನಿಸಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಕುರಿತು ಗಂಭೀರವಾಗಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಪಾರದರ್ಶಕತೆ, ಕಾನೂನು ಸವಾಲುಗಳು ಮತ್ತು ರಾಜಕೀಯ ಪರಿಣಾಮಗಳ ಸಮಾಲೋಚನೆ ನಡೆಸಲಾಗಿದೆ. ಪ್ರಸ್ತುತ ಬೆಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಸುಪರ್ದಿಯಲ್ಲಿರುವ ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಅಲ್ಲಿಯೇ ಮುಂದುವರಿಸಬೇಕೇ ಅಥವಾ ಸಿಐಡಿ ಇಲ್ಲವೇ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಬೇಕೇ ಎಂಬ ಕುರಿತು ಸಂಪುಟ ಸಹೋದ್ಯೋಗಿಗಳಿಂದ ಮುಖ್ಯಮಂತ್ರಿಗಳು ಸಮಗ್ರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಈ ತನಿಖಾ ಸಂಸ್ಥೆಯ ಆಯ್ಕೆಯ ಅಂತಿಮ ಅಧಿಕಾರವನ್ನು ಸಂಪುಟವು ಸರ್ವಾನುಮತದಿಂದ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ ಸ್ಪೋಟಗೊಂಡ ಸ್ಟಿಂಗ್ ಆಪರೇಷನ್ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಅಥವಾ ರಾಜಕೀಯ ಷಡ್ಯಂತ್ರದ ಆರೋಪಗಳು ಕೇಳಿಬರುತ್ತಿವೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬೆಂಗಳೂರಿನ ಸಿಸಿಬಿ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿ, ಎಫ್‌ಐಆರ್ ದಾಖಲಿಸಿಕೊಂಡು ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಕಲೆಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಆದರೆ, ಪ್ರಕರಣದ ವ್ಯಾಪ್ತಿ ಕೇವಲ ರಾಜಧಾನಿಗೆ ಮಾತ್ರ ಸೀಮಿತವಾಗಿರದೆ, ರಾಜ್ಯವ್ಯಾಪಿ ಹರಡಿರುವುದರಿಂದ ತನಿಖಾ ಸಂಸ್ಥೆಯ ಬದಲಾವಣೆ ಕುರಿತು ಸರ್ಕಾರದ ಮಟ್ಟದಲ್ಲಿ ಒತ್ತಡಗಳು ಕೇಳಿಬಂದಿದ್ದವು. ಸಚಿವ ಸಂಪುಟ ಸಭೆಯಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಹೇಳಲಾಗಿದೆ. ಕೆಲವು ಸಚಿವರು, ಪ್ರಕರಣ ಈಗಾಗಲೇ ಸಿಸಿಬಿ ವ್ಯಾಪ್ತಿಯಲ್ಲಿದ್ದು, ಅಧಿಕಾರಿಗಳು ತನಿಖೆಯನ್ನು ಸರಿಯಾದ ದಿಕ್ಕಿನಲ್ಲೇ ಆರಂಭಿಸಿದ್ದಾರೆ. ಈ ಹಂತದಲ್ಲಿ ತನಿಖಾ ಸಂಸ್ಥೆಯನ್ನು ಬದಲಾಯಿಸಿದರೆ ಸರ್ಕಾರಕ್ಕೆ ಯಾವುದೋ ಆತಂಕವಿದೆ ಅಥವಾ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಲಾಗುತ್ತಿದೆ ಎಂಬ ತಪ್ಪು ಸಂದೇಶ ಸಾರ್ವಜನಿಕರಿಗೆ ರವಾನೆಯಾಗಬಹುದು. ಆದ್ದರಿಂದ ಸಿಸಿಬಿಗೇ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಿ ತನಿಖೆ ಮುಂದುವರಿಸುವುದು ಸೂಕ್ತ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಇನ್ನು ಕೆಲವರು ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು, ರಾಜಕೀಯ ಮುಖಂಡರು ಭಾಗಿಯಾಗಿರುವ ಶಂಕೆ ಇರುವುದರಿಂದ ಸಿಸಿಬಿಗಿಂತಲೂ ವಿಸ್ತಾರವಾದ ವ್ಯಾಪ್ತಿಯಿರುವ ಸಿಐಡಿಗೆ ವಹಿಸುವುದು ಉತ್ತಮ ಎಂಬ ಮಾತುಗಳು ಕೇಳಿ ಬಂದಿವೆ ಎಂದು ತಿಳಿದುಬಂದಿದೆ.

ವಿರೋಧ ಪಕ್ಷಗಳ ಟೀಕೆ

ಮತ್ತೊಂದೆಡೆ, ಸರ್ಕಾರದ ಮೇಲೆ ವಿರೋಧ ಪಕ್ಷಗಳು ತೀವ್ರ ಮುಗಿಬಿದ್ದಿವೆ. ಸಿಸಿಬಿ ರಾಜ್ಯ ಸರ್ಕಾರದ ಕಪಿಮುಷ್ಠಿಯಲ್ಲಿದೆ. ಸ್ವತಂತ್ರ ಮತ್ತು ಮುಕ್ತ ತನಿಖೆ ನಡೆಯಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕರು ಒತ್ತಾಯಿಸಿದ್ದಾರೆ. ವಿಪಕ್ಷಗಳ ಈ ರಾಜಕೀಯ ದಾಳಿಗೆ ಪ್ರತ್ಯುತ್ತರ ನೀಡಲು ಮತ್ತು ತನಿಖೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ ಎಂಬುದನ್ನು ನಿರೂಪಿಸಲು ತನಿಖಾ ಸಂಸ್ಥೆಯ ಆಯ್ಕೆ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿದೆ. ಸಚಿವರ ಅಭಿಪ್ರಾಯಗಳನ್ನು ಕೇಳಿದ ಮುಖ್ಯಮಂತ್ರಿಗಳು, ಕಾನೂನು ತಜ್ಞರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಂಡಿದ್ದಾರೆ. ಅಂತಿಮವಾಗಿ, ಸಂಪುಟ ಸಭೆಯು ಯಾವುದೇ ನಿರ್ದಿಷ್ಟ ನಿರ್ಣಯಕ್ಕೆ ಬರದೇ, ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ತೀರ್ಮಾನಿಸಿದೆ.

Read More
Next Story