ಸಂಪುಟ ವಿಸ್ತರಣೆ ಸರ್ಕಸ್: ʼಹೈʼ ಅಂಗಳದಲ್ಲಿ ಯಾರ ʼಕೈʼ ಮೇಲು?
ಖಾಲಿ ಇರುವ 20 ಸಚಿವ ಸ್ಥಾನಗಳಿಗೆ ಈಗಾಗಲೇ 70 ಕ್ಕೂ ಹೆಚ್ಚು ಮಂದಿ ಬೇಡಿಕೆ ಮುಂದಿರಿಸಿದ್ದು, ಕೈ ನಾಯಕರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದೆ.
ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯ ಕಗ್ಗಂಟು ಮತ್ತೊಮ್ಮೆ ಸದ್ದು ಮಾಡ್ತಾ ಇದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಖಾಲಿಯಿರುವ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಸಂಬಂಧ ದೆಹಲಿಯ ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ಚರ್ಚೆಗಳು ಆರಂಭವಾಗಿವೆ.
ನಿನ್ನೆಯಷ್ಟೇ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೊತೆಯಲ್ಲೇ ದೆಹಲಿಗೆ ತೆರಳಿದ್ದಾರೆ. ಅಚ್ಚರಿಯೆಂದರೆ ಈ ಇಬ್ಬರೂ ನಾಯಕರು ಸಚಿವ ಸ್ಥಾನದ ಆಕಾಂಕ್ಷಿಗಳ ಪ್ರತ್ಯೇಕ ಪಟ್ಟಿಯೊಂದಿಗೆ ತೆರಳಿದ್ದಾರೆ. ಜೊತೆಗೆ ದೆಹಲಿಗೆ ಪ್ರಯಾಣಿಸಿರುವ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕೂಡ ಸಂಘಟನೆ, ಆಡಳಿತದಲ್ಲಿ ದಕ್ಷತೆ ಕಾಯ್ದುಕೊಳ್ಳುವವರ ಪಟ್ಟಿಯೊಂದಿಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.
ಈ ಮೂರು ಪಟ್ಟಿಗಳನ್ನು ಹೈಕಮಾಂಡ್ ನಾಯಕರ ಮುಂದಿರಿಸಿ ಚರ್ಚಿಸಲಿದ್ದಾರೆ. ಖಾಲಿ ಇರುವ 20 ಸಚಿವ ಸ್ಥಾನಗಳಿಗೆ ಈಗಾಗಲೇ 70 ಕ್ಕೂ ಹೆಚ್ಚು ಮಂದಿ ಬೇಡಿಕೆ ಮುಂದಿರಿಸಿದ್ದು, ಕೈ ನಾಯಕರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದೆ. ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೊಂದಿಗೆ ಈ ಮೂವರು ನಾಯಕರು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಜಾತಿ, ಸಮುದಾಯ ಹಾಗೂ ಪ್ರಾದೇಶಿಕವಾರು ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಹರಿಪ್ರಸಾದ್ ಈಗಾಗಲೇ ಜಾತಿ, ಸಮುದಾಯ, ಪ್ರಾದೇಶಿಕ ಸಮತೋಲನ ಹಾಗೂ ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿಕೊಂಡು ದೆಹಲಿಗೆ ತೆರಳಿದ್ದಾರೆ. ತಮ್ಮವರಿಗೆ ಸಚಿವ ಸ್ಥಾನ ಕೊಡಿಸಲು ದೊಡ್ಡ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಜಮೀರ್ ಅಹಮದ್, ಕೆ. ವೆಂಕಟೇಶ್, ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ಕೊಡಿಸಲು ಸರ್ಕಸ್ ನಡೆಸುತ್ತಿದ್ದಾರೆ. ಜೊತೆಗೆ ಮುಸ್ಲಿಂ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.
ಇಂದು ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಿದ ಬಳಿಕ ನಾಳೆ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ. ರಾಹುಲ್ ಗಾಂಧಿ ಅವರು ಡಾರ್ಜಿಲಿಂಗ್‌ಗೆ ತೆರಳಿದ್ದು, ನಾಳೆ ದೆಹಲಿಗೆ ವಾಪಸಾಗಲಿದ್ದಾರೆ. ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮೊದಲ ಹಂತದಲ್ಲಿ 13 ಮಂದಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇವರಲ್ಲಿ ಯು.ಟಿ. ಖಾದರ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಹೊಸ ಮುಖಗಳಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಆದರೆ ಇನ್ನೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿಲ್ಲ.
ಇದೇ ವೇಳೆ ಸ್ಪೀಕರ್ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂಬ ಚರ್ಚೆಯೂ ನಡೆಯಲಿದೆ. ಸರ್ಕಾರಕ್ಕೆ ಕೇವಲ 1ವರ್ಷ ಹತ್ತು ತಿಂಗಳಷ್ಟೇ ಬಾಕಿ ಇದೆ. ಈ ಅವಧಿಯಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯ ಹಾಗೂ ಆಂತರಿಕ ಕಲಹಗಳಿಗೆ ಆಸ್ಪದ ನೀಡದಂತೆ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಮುಂದಿರುವ ದೊಡ್ಡ ಟಾಸ್ಕ್ ಆಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣದ ಸಂಪುಟ ವಿಸ್ತರಣೆಗೆ ಹೆಚ್ಚು ಆಸಕ್ತಿ ತೋರಿಲ್ಲ ಎನ್ನಲಾಗುತ್ತಿದೆ. ಆಷಾಢ ಮಾಸದ ಹಿನ್ನೆಲೆ ವಿಸ್ತರಣೆ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ. ಜೊತೆಗೆ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಿದರೆ ಆಡಳಿತಾತ್ಮಕ ಹಿಡಿತ ತಪ್ಪಲಿದೆ, ಜೊತೆಗೆ ಸರ್ಕಾರದಲ್ಲಿ ಪ್ರಭಾವ ಕಡಿಮೆಯಾಗುವ ಸಾಧ್ಯತೆಯನ್ನೂ ಪರಿಗಣಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಆಗಸ್ಟ್ 6 ರಿಂದ ಅಧಿವೇಶನ ಆರಂಭವಾಗಲಿದ್ದು, ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳು ಸಜ್ಜಾಗಿವೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡುವವರಿಗೆ ಉತ್ತರ ನೀಡಲು ಸಚಿವರು ಅಗತ್ಯವಾಗಿದೆ. ಒಂದು ವೇಳೆ ಸಂಪುಟ ವಿಸ್ತರಣೆ ವಿಳಂಬವಾದರೆ ಅಧಿವೇಶನವನ್ನು ಮುಂದೂಡುವ ಸಾಧ್ಯತೆಯೂ ಇರಲಿದೆ. ಆಗ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುವ ಅಪಾಯ ಎದುರಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಒಟ್ಟಾರೆ, ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್ ಸರ್ಕಾರದ ಒಳರಾಜಕೀಯ ಸಮತೋಲನ ನಿರ್ಧರಿಸುವ ಪ್ರಮುಖ ಬೆಳವಣಿಗೆಯಾಗಿದೆ. ಪ್ರಾದೇಶಿಕ ಹಾಗೂ ಸಾಮಾಜಿಕ ಸಮೀಕರಣಗಳ ಜೊತೆಗೆ ವಿವಿಧ ಬಣಗಳ ಬೇಡಿಕೆಗಳನ್ನು ಈಡೇರಿಸುವ ಸವಾಲು ಹೈಕಮಾಂಡ್ ಎದುರಿದೆ.
ದೆಹಲಿಯಲ್ಲಿ ನಡೆಯಲಿರುವ ಸರಣಿ ಸಭೆಗಳ ಬಳಿಕ ಸಚಿವ ಸಂಪುಟ ವಿಸ್ತರಣೆ ಕುರಿತು ಸ್ಪಷ್ಟ ಚಿತ್ರಣ ಹೊರಬರುವ ನಿರೀಕ್ಷೆ ಇದ್ದು, ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ಅಂತಿಮ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.

