ಡಿಕೆಶಿ ಸರ್ಕಾರದಲ್ಲಿ ʼಖಾತೆʼ ಕ್ಯಾತೆ| ರಾಮಲಿಂಗಾರೆಡ್ಡಿ ಬೆನ್ನಲ್ಲೇ ಮುನಿಯಪ್ಪ, ಭೈರತಿ ಸುರೇಶ್‌ ಆಕ್ರೋಶ
x

ಡಿಕೆಶಿ ಸರ್ಕಾರದಲ್ಲಿ ʼಖಾತೆʼ ಕ್ಯಾತೆ| ರಾಮಲಿಂಗಾರೆಡ್ಡಿ ಬೆನ್ನಲ್ಲೇ ಮುನಿಯಪ್ಪ, ಭೈರತಿ ಸುರೇಶ್‌ ಆಕ್ರೋಶ

ಪಕ್ಷದಲ್ಲಿ ಇದೇ ರೀತಿಯ ಗೊಂದಲಗಳು ಶುರುವಾದರೆ ಪಕ್ಷದ ಭವಿಷ್ಯಕ್ಕೆ ಒಳ್ಳೆಯದಲ್ಲ. ಇಲಾಖೆಗಳ ಹಂಚಿಕೆ ಸರಿಯಾಗಿ ನಡೆಯದಿದ್ದರೆ, ಇದರ ನೇರ ಪರಿಣಾಮ ಮುಂದಿನ 2028ರ ವಿಧಾನಸಭಾ ಚುನಾವಣೆಯ ಮೇಲೆ ಬೀಳಲಿದೆ ಎಂದು ಹಿರಿಯ ನಾಯಕರು ಎಚ್ಚರಿಸಿದ್ದಾರೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ.

ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕೆ ಶಾಕ್ ನೀಡಿದ ಬೆನ್ನಲ್ಲೇ ಮತ್ತೊಬ್ಬ ಹಿರಿಯ ಮುಖಂಡರಾದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೈಕಮಾಂಡ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಖಾತೆ ಹಂಚಿಕೆಯಲ್ಲಿ ಹಿರಿತನಕ್ಕೆ ಯಾವುದೇ ಬೆಲೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಹಿರಿತನಕ್ಕೆ ಸಿಗದ ಗೌರವ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾವು ಮೇಳಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ನೂತನ ಸರ್ಕಾರದ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

"ನಾನು ಈಗಾಗಲೇ 8 ಬಾರಿ ಸಂಸದನಾಗಿ, ಸಚಿವನಾಗಿ ಆಯ್ಕೆಯಾಗಿರುವ ಅತ್ಯಂತ ಹಿರಿಯ ರಾಜಕಾರಣಿ. ಆದರೆ, ಖಾತೆ ಹಂಚಿಕೆ ಮಾಡುವಾಗ ನಮ್ಮ ಹಿರಿತನವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಪಕ್ಷದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಬೇಕಾದ ಜವಾಬ್ದಾರಿ ನಾಯಕರ ಮೇಲಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ನಾಯಕರನ್ನೂ ಒಂದೇ ಕಣ್ಣಿನಿಂದ ನೋಡಬೇಕು" ಎಂದು ಮುನಿಯಪ್ಪ ಒತ್ತಾಯಿಸಿದರು.

ಪಕ್ಷದಲ್ಲಿ ಇದೇ ರೀತಿಯ ಗೊಂದಲಗಳು ಶುರುವಾದರೆ ಪಕ್ಷದ ಭವಿಷ್ಯಕ್ಕೆ ಒಳ್ಳೆಯದಲ್ಲ. ಇಲಾಖೆಗಳ ಹಂಚಿಕೆ ಸರಿಯಾಗಿ ನಡೆಯದಿದ್ದರೆ, ಇದರ ನೇರ ಪರಿಣಾಮ ಮುಂದಿನ 2028ರ ವಿಧಾನಸಭಾ ಚುನಾವಣೆಯ ಮೇಲೆ ಬೀಳಲಿದೆ. ಪಕ್ಷಕ್ಕೆ ಭಾರಿ ಹಿನ್ನಡೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆಗೆ ಬೇಡಿಕೆ

ಕಳೆದ ಸರ್ಕಾರದಲ್ಲೂ ಆಹಾರ ಇಲಾಖೆ ನಿಭಾಯಿಸಿದ್ದ ಮುನಿಯಪ್ಪ, ಈ ಬಾರಿ ತಮಗೆ ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದುವ ಹಾಗೂ ಸೇವೆ ಮಾಡಲು ಮುಕ್ತ ಅವಕಾಶವಿರುವ ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

"ನಾನು ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಹಿರಿಯರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನನ್ನ ಮನವಿಯನ್ನು ಪುರಸ್ಕರಿಸಿ, ಶೀಘ್ರದಲ್ಲೇ ನನ್ನ ಖಾತೆ ಬದಲಾವಣೆ ಮಾಡಿಕೊಡಲಿದ್ದಾರೆ ಎಂಬ ಗಟ್ಟಿಯಾದ ನಂಬಿಕೆ ನನಗಿದೆ" ಎಂದು ಮುನಿಯಪ್ಪ ಆಶಾವಾದ ವ್ಯಕ್ತಪಡಿಸಿದರು.

ಈ ಮಧ್ಯೆ ಸಾರಿಗೆ ಖಾತೆ ಪಡೆದಿರುವ ಭೈರತಿ ಸುರೇಶ್‌ ಕೂಡ ಅಸಮಾಧಾನ ಹೊರಹಾಕಿದ್ದು, ಬೇರೆ ಖಾತೆಗಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೈ ನಾಯಕರಿಗೆ ತಲೆನೋವಾದ ಬಂಡಾಯ

ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ಬೇಸತ್ತು ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ನೀರಾವರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಈಗಾಗಲೇ ಸರ್ಕಾರಕ್ಕೆ ದೊಡ್ಡ ಮುಜುಗರ ತಂದಿಟ್ಟಿದೆ. ಇದರ ಬೆನ್ನಲ್ಲೇ ಕೆ.ಎಚ್. ಮುನಿಯಪ್ಪ ಅವರೂ ಸಹ ಬಹಿರಂಗ ಬಂಡಾಯ ಸಾರಿರುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Read More
Next Story