
KPSC ರದ್ದು ಮಾಡಲು ಸರ್ಕಾರ ಚಿಂತನೆ; ಕೆಇಎಗೆ ಸಂಪೂರ್ಣ ಪರೀಕ್ಷಾ ಹೊಣೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕವೇ ನೇಮಕಾತಿಗಳನ್ನು ಮುಂದುವರಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ಮುಚ್ಚುವ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣ ಮತ್ತು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು, ಕೆಪಿಎಸ್ಸಿ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಪಾರದರ್ಶಕ ಆಯ್ಕೆ ಪ್ರಕ್ರಿಯೆ ನಡೆಸುವಲ್ಲಿ ಆಯೋಗ ಎಡವಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಯನ್ನು ರದ್ದುಪಡಿಸಿ, ಯುಪಿಎಸ್‌ಸಿ ಮಾದರಿಯಲ್ಲಿ ಹೊಸ ಆಯೋಗ ಸ್ಥಾಪಿಸುವ ಅಥವಾ ಕೆಇಎಗೆ ಪರೀಕ್ಷಾ ಜಬಾವ್ದಾರಿ ವಹಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿರುವುದು ತಲ್ಲಣ ಮೂಡಿಸಿದೆ.
ಹಗರಣ ಮುಕ್ತ ನೇಮಕಾತಿ ನಡೆಸುವುದು ಸರ್ಕಾರದ ಮೊದಲ ಆದ್ಯತೆ. ಕೆಪಿಎಸ್ಸಿಯನ್ನು ರದ್ದುಪಡಿಸುವ ಕುರಿತು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಖಂಡ್ರೆ ಬಹಿರಂಗಪಡಿಸಿದ್ದಾರೆ.
ನೇಮಕಾತಿ ಹಗರಣಗಳಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಿರಲಿ ಅಥವಾ ಉನ್ನತ ಹುದ್ದೆಯಲ್ಲಿದ್ದವರಾಗಿರಲಿ, ಅವರನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುವುದು. ಕೆಪಿಎಸ್‌ಸಿಯನ್ನು ರದ್ದುಪಡಿಸಿ, ಕೇಂದ್ರದ ಯುಪಿಎಸ್‌ಸಿ ಮಾದರಿಯಲ್ಲಿ ಇಲ್ಲವೇ ಪ್ರಸ್ತುತ ಅನೇಕ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆಸುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕವೇ ನೇಮಕಾತಿಗಳನ್ನು ಮುಂದುವರಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ. ರಾಜ್ಯದ ಯುವಕರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸೇರಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ಈಶ್ವರ್ ಖಂಡ್ರೆ ಅವರ ಈ ಹೇಳಿಕೆಗೆ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಸಾಂವಿಧಾನಾತ್ಮಕ ಸಂಸ್ಥೆಯ ಸ್ವಾಯತ್ತತೆಗೆ ಸರ್ಕಾರವೇ ಧಕ್ಕೆ ತರುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಕೆಪಿಎಸ್ಸಿ ಸಂವಿಧಾನಾತ್ಮಕವಾಗಿ ರಚನೆಯಾದ ಸ್ವಾಯತ್ತ ಸಂಸ್ಥೆ. ಇದನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಅಥವಾ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಭವಿಷ್ಯದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ದಾರಿ ಮಾಡಿಕೊಡಬಹುದು ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ನಿರುದ್ಯೋಗಿ ಯುವಕರಲ್ಲಿ ಈ ಹೇಳಿಕೆಯು ದೊಡ್ಡ ಮಟ್ಟದ ಗೊಂದಲ ಮತ್ತು ಅನಿಶ್ಚಿತತೆ ಸೃಷ್ಟಿಸಿದೆ. ಹೊಸ ವ್ಯವಸ್ಥೆ ಬಂದರೆ ಪ್ರಕ್ರಿಯೆಗಳು ವಿಳಂಬವಾಗಬಹುದೆಂಬ ಆತಂಕವೂ ಆಕಾಂಕ್ಷಿಗಳನ್ನು ಕಾಡುತ್ತಿದೆ. ಕೆಪಿಎಸ್ಸಿ ನೇಮಕಾತಿ ಹಗರಣಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಈ ಹೇಳಿಕೆ ಮತ್ತಷ್ಟು ಕಿಚ್ಚು ಹೊತ್ತಿಸಿದೆ.
ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಇತ್ತೀಚೆಗಷ್ಟೇ ಇಬ್ಬರು ಐಎಎಸ್ ಅಧಿಕಾರಿಗಳನ್ನು ಪರೀಕ್ಷಾ ನಿಯಂತ್ರಕರ ಹುದ್ದೆಗೆ ನೇಮಿಸಿತ್ತು. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಿಂದ ಹಿಡಿದು ಮೌಲ್ಯಮಾಪನ ಮತ್ತು ಅಂತಿಮ ಆಯ್ಕೆವರೆಗೆ ಸಂಪೂರ್ಣ ಡಿಜಿಟಲೀಕರಣ ಹಾಗೂ ಕಟ್ಟುನಿಟ್ಟಿನ ಗೌಪ್ಯತಾ ಕ್ರಮಗಳನ್ನು ಯುಪಿಎಸ್ಸಿ ಮಾದರಿಯಲ್ಲಿ ಅಳವಡಿಸಲು ಚಿಂತನೆ ನಡೆಸಿತ್ತು.
ರಾಜಕೀಯ ಮುಖಂಡರು ಹಾಗೂ ಕಳಂಕಿತರನ್ನು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸುವುದನ್ನು ತಪ್ಪಿಸಲು ವಿದ್ಯಾರ್ಹತೆ, ಪ್ರಾಮಾಣಿಕತೆ ಮತ್ತು ಮೇಲ್ವಿಚಾರಣೆಯ ಸ್ಪಷ್ಟ ನಿಯಮ ರೂಪಿಸಲು ತೀರ್ಮಾನಿಸಲಾಗಿದೆ. ಹಗರಣಗಳಲ್ಲಿ ಭಾಗಿಯಾದ ಭ್ರಷ್ಟ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ, ಪರೀಕ್ಷಾ ವ್ಯವಸ್ಥೆಯ ಮೇಲೆ ಯುವಜನರಿಗೆ ನಂಬಿಕೆ ಮರುಕಳಿಸುವಂತೆ ಮಾಡುವುದಕ್ಕೆ ನಿರ್ಧರಿಸಲಾಗಿತ್ತು. ಇಂತಹ ಸುಧಾರಣಾ ಕ್ರಮಗಳ ಬೆನ್ನಲ್ಲೇ ಆಯೋಗವನ್ನೇ ರದ್ದುಪಡಿಸುವ ಚರ್ಚೆ ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ.

