
ಸನ್ನಡತೆ ಆಧಾರದಲ್ಲಿ 28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಜೀವಾವಧಿ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಒಟ್ಟು 45 ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು.
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 28 ಮಂದಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮತ್ತೊಂದು ಪ್ರತ್ಯೇಕ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯದ ಸಹಮತಿ ಪಡೆದು ಅವಧಿಪೂರ್ವ ಬಿಡುಗಡೆಗೆ ಅನುಮೋದಿಸಲಾಗಿದೆ. ಹೀಗಾಗಿ ಒಟ್ಟು 29 ಜೀವಾವಧಿ ಶಿಕ್ಷಾ ಬಂಧಿಗಳು ಅವಧಿಪೂರ್ವ ಬಿಡುಗಡೆಗೆ ಅರ್ಹರಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಜೀವಾವಧಿ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಒಟ್ಟು 45 ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು. ಸರ್ಕಾರದ ಮಾರ್ಗಸೂಚಿ, ಬಂಧಿಗಳ ಸನ್ನಡತೆ, ಜೈಲು ವಾಸದ ಅವಧಿ ಸೇರಿದಂತೆ ನಿಗದಿತ ಮಾನದಂಡಗಳ ಆಧಾರದ ಮೇಲೆ ಪ್ರಕರಣಗಳನ್ನು ಪರಿಶೀಲಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಸಂಪುಟದ ನಿರ್ಧಾರವನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ.
ಜುಲೈ 4ರಂದು ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಿಂದ ಒಟ್ಟು 24 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗಿತ್ತು. ಸಂವಿಧಾನದ ಅನುಚ್ಛೇದ 161 ರನ್ವಯ ರಾಜ್ಯಪಾಲರು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಗೆ ಆದೇಶಿಸಿದ್ದರು. ಅದೇ ರೀತಿ ಮಾ.13 ರಂದು 30 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿತ್ತು. ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಪುನಃ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಮಹಾನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ, ರಾಜ್ಯ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಒಟ್ಟು 54 ಜೀವಾವಧಿ ಶಿಕ್ಷೆ ಕೈದಿಗಳ ಪ್ರಕರಣಗಳನ್ನು ಕೂಲಂಕಷವಾಗಿ ಚರ್ಚಿಸಲಾಗಿತ್ತು. ಸಮಿತಿಯು ಪರಿಶೀಲಿಸಿದ 54 ಪ್ರಕರಣಗಳ ಪೈಕಿ ಬಿಡುಗಡೆಗೆ 31 ಮಂದಿ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿತ್ತು. ಉಳಿದ 21 ಕೈದಿಗಳ ಬಿಡುಗಡೆ ಅರ್ಜಿ ತಿರಸ್ಕರಿಸಲಾಗಿತ್ತು.

