x

ಬಸ್ ಪ್ರಯಾಣ ದರ ಯದ್ವಾ ತದ್ವಾ ಏರಿಕೆ : ಸಾರಿಗೆ ಸಿಬ್ಬಂದಿಗೆ ಹೆಚ್ಚುತ್ತಾ ವೇತನ ?

ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸರ್ಕಾರ ಏರಿಕೆ ಮಾಡಿದೆ. ಸರಾಸರಿ ಶೇ. 33 ರಿಂದ ಶೇ. 35 ರಷ್ಟು ಪ್ರಯಾಣಿಕರಿಗೆ ದರ ಏರಿಕೆಯ ಬಿಸಿಯನ್ನು ಸರ್ಕಾರ ನೀಡಿದ್ದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ರಾಜ್ಯ ಸರ್ಕಾರ ಜನತೆಗೆ ಬೆಲೆ ಏರಿಕೆಯ ಶಾಕ್ ಮೇಲಿಂದ ಮೇಲೆ ನೀಡುತ್ತಿದೆ. ಇತ್ತೀಚೆಗಷ್ಟೆ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಇದೀಗ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಬರೆ ಎಳೆದಿದೆ. ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಬಸ್ ಪ್ರಯಾಣ ದರವನ್ನು ಮಧ್ಯರಾತ್ರಿಯಿಂದಲೇ (ನವೆಂಬರ್ 5) ಜಾರಿಗೆ ಬರುವಂತೆ ಸರ್ಕಾರ ಏರಿಕೆ ಮಾಡಿದೆ. ದೀಪಾವಳಿಗೆ ಮುನ್ನವೇ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿಯನ್ನು ಸರ್ಕಾರ ನೀಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಸೇವೆಗಳಿಗೆ ಬಸ್ ದರವನ್ನು ಸರಾಸರಿ ಶೇ. 33 ರಿಂದ ಶೇ. 35 ರಷ್ಟು ಹೆಚ್ಚಿಸಿದರೆ, ಕರ್ನಾಟಕ ರಾಜ್ಯದ ಇತರ ರಸ್ತೆ ಸಾರಿಗೆ ನಿಗಮಗಳಾದ KSRTC, KKRTC ಮತ್ತು NWKRTC ಗಳ ಟಿಕೆಟ್ ದರಗಳನ್ನು ಸರಾಸರಿ ಶೇ. 23 ರಷ್ಟು ಹೆಚ್ಚಿಸಲಾಗಿದೆ. ದ ಫೆಡರಲ್ ಕರ್ನಾಟಕ ಪ್ರಯಾಣಿಕರ ಅಭಿಪ್ರಾಯ ಪಡೆದಾಗ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಾರಿಗೆ ಸಚಿವ ಬೈರತಿ ಸುರೇಶ್ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಮಾತನಾಡಿದರು.

ಪ್ರಯಾಣಿಕರು ಮಾತನಾಡಿ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ. ಇದೀಗ ಬಸ್ ಪ್ರಯಾಣ ದರ ಏರಿಕೆಯಿಂದ ಸಾಮಾನ್ಯ ಜನರ ಮೇಲೆ ಭಾರ ಬೀಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಪ್ರತಿ ದಿನ ಬಸ್ ನಲ್ಲಿ ಓಡಾಡುತ್ತೇವೆ. ಈಗ ಇಷ್ಟೊಂದು ಪ್ರಮಾಣದಲ್ಲಿ ದರ ಏರಿಕೆ ಮಾಡಿರುವುದು ಸರಿಯಲ್ಲ. ಜನ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಹೇಳಿದರು. ನಮಗೆ ಸಂಬಳ ಕಡಿಮೆ ಬರುತ್ತದೆ ಅದರಲ್ಲಿ ಜೀವನ ನಡೆಸುತ್ತಿದ್ದೇವೆ. ಪ್ರತಿ ದಿನ ಕೆಲಸಕ್ಕೆ ಬಸ್ ನಲ್ಲಿ ಹೋಗುವುದು, ಇದೀಗ ಬಸ್ ದರ ಏರಿಕೆ ಮಾಡಿದರೆ ಹೇಗೆ ಇದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ನಮ್ಮ ಮೇಲೆ ಹೊರೆ ಹಾಕುತ್ತಿದೆ, ಗ್ಯಾರಂಟಿ ಯೋಜನೆ ನಿಲ್ಲಿಸಿಬಿಡಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ವಿದ್ಯಾರ್ಥಿ ಮಾತನಾಡಿ ನಮ್ಮದು ಮಧ್ಯಮ ವರ್ಗದ ಕುಟುಂಬ ತಿಂಗಳಿಗೆ ಇಷ್ಟು ಹಣ ಅಂತಾ ನಿಗದಿಮಾಡಿರುತ್ತಾರೆ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದು ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ಪಟ್ಟರು.

ಸಾರಿಗೆ ಸಚಿವ ಬೈರತಿ ಸುರೇಶ್ ಮಾತನಾಡಿ ಸಾರಿಗೆ ನಿಗಮಗಳು ನಷ್ಟದಲ್ಲಿದೆ ಡಿಸೇಲ್ ದರ ಏರಿಕೆಯಾಗಿದೆ ಎಂದು ಪ್ರಯಾಣದರ ಏರಿಕೆ ಬಗ್ಗೆ ಸಮರ್ಥನೆ ನೀಡಿದರು. ಇನ್ನು ಸಾರಿಗೆ ನೌಕರರ ಬೇಡಿಕೆಯಾದ ವೇತನ ಹೆಚ್ಚಳದ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು. ಸಾರಿಗೆ ನೌಕರರ ಪಿಎಪ್ ಹಣ ಪಾವತಿ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


Read More
Next Story