
ಡೀಸೆಲ್ ಬೆಲೆ ಏರಿಕೆಯಿಂದ ಕರ್ನಾಟಕದ ಸಾರಿಗೆ ನಿಗಮಗಳ ನಷ್ಟ ಹೆಚ್ಚಾಗಿದೆ.
ಬಸ್ ಪ್ರಯಾಣಿಕರೇ ಗಮನಿಸಿ- ಶೀಘ್ರದಲ್ಲೇ ಹೆಚ್ಚಾಗಲಿದೆ ಟಿಕೆಟ್ ದರ
ಡೀಸೆಲ್ ಬೆಲೆ ಏರಿಕೆಯಿಂದ ಕರ್ನಾಟಕದ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ನಷ್ಟ ಸರಿದೂಗಿಸಲು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ದರ ಏರಿಕೆಗೆ ಬೇಡಿಕೆ ಇಟ್ಟಿವೆ.
ರಾಜ್ಯದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳು ಆರ್ಥಿಕ ಒತ್ತಡಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಪರಿಷ್ಕರಣೆ ಮತ್ತೆ ಚರ್ಚೆಗೆ ಬಂದಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಆರ್ಥಿಕ ಸ್ಥಿತಿ ಹಾಗೂ ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಪರಿಶೀಲಿಸಲು ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದೆ. ಸಮಿತಿಯ ಶಿಫಾರಸು ಆಧರಿಸಿ ಟಿಕೆಟ್ ದರ ಹೆಚ್ಚಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಡೀಸೆಲ್ ಬೆಲೆ ಹೆಚ್ಚಾಗಿದ್ದು, ಇದರ ನೇರ ಪರಿಣಾಮ ಸರ್ಕಾರಿ ಸಾರಿಗೆ ನಿಗಮಗಳ ಮೇಲೆ ಬೀಳುತ್ತಿದೆ. ಹೆಚ್ಚಿದ ಇಂಧನ ವೆಚ್ಚದಿಂದ ಪ್ರತಿತಿಂಗಳು ನಾಲ್ಕು ನಿಗಮಗಳಿಗೆ ಒಟ್ಟಾರೆ ಸುಮಾರು 40 ಕೋಟಿ ರೂ. ಹೆಚ್ಚುವರಿ ಖರ್ಚಾಗುತ್ತಿದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಈ ವೆಚ್ಚದ ಪ್ರಮಾಣ ಇದೇ ರೀತಿ ಮುಂದುವರಿದರೆ ವರ್ಷಕ್ಕೆ ಸುಮಾರು 480 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ನಿಗಮಗಳ ಕಾರ್ಯಾಚರಣೆಯನ್ನು ನಿರ್ವಹಿಸಲು ಆದಾಯ ಹೆಚ್ಚಿಸುವ ಅಗತ್ಯ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿಯಿಂದ ಶೇ.33, ಬಿಎಂಟಿಸಿಯಿಂದ ಶೇ.44ರಷ್ಟು ಹೆಚ್ಚಳದ ಬೇಡಿಕೆ
ಟಿಕೆಟ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ತಮ್ಮದೇ ಆದ ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಟ್ಟಿವೆ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ ಸುಮಾರು ಶೇ.33ರಷ್ಟು ದರ ಹೆಚ್ಚಳವನ್ನು ಕೋರಿದ್ದರೆ, ಬಿಎಂಟಿಸಿ ಶೇ.44ರಷ್ಟು ಏರಿಕೆಗೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ನಿಗಮಗಳ ಬೇಡಿಕೆಯಂತೆ ನೇರವಾಗಿ ದರ ಹೆಚ್ಚಿಸುವ ಬದಲು, ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆಯನ್ನೂ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಆರು ಬಾರಿ ಡೀಸೆಲ್ ದರ ಹೆಚ್ಚಳ: ಸಚಿವ
ಸಾರಿಗೆ ಸಚಿವ ಭೈರತಿ ಸುರೇಶ್ ಮಾತನಾಡಿ, ಇತ್ತೀಚಿನ ಅವಧಿಯಲ್ಲಿ ಡೀಸೆಲ್ ದರ ಆರು ಬಾರಿ ಏರಿಕೆಯಾಗಿದೆ. ಇದರಿಂದ ಸಾರಿಗೆ ನಿಗಮಗಳ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಿದೆ ಎಂದು ಹೇಳಿದ್ದಾರೆ. ಡೀಸೆಲ್ ಬೆಲೆ ಏರಿಕೆಯಿಂದ ನಾಲ್ಕು ನಿಗಮಗಳು ವಾರಕ್ಕೆ ಸುಮಾರು 7ರಿಂದ 8 ಕೋಟಿ ರೂ.ವರೆಗೆ ಹೆಚ್ಚುವರಿ ನಷ್ಟ ಅನುಭವಿಸುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ. ಹೀಗಾಗಿ ಟಿಕೆಟ್ ದರ ಪರಿಷ್ಕರಣೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ತಜ್ಞರ ಸಮಿತಿ ವರದಿ ಬಳಿಕ ಅಂತಿಮ ನಿರ್ಧಾರ
ಟಿಕೆಟ್ ದರ ನಿಗದಿ ಸೇರಿದಂತೆ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಸಮಿತಿಯು ಈಗಾಗಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹಿಸಿದೆ. ನಿಗಮಗಳ ಆದಾಯ, ವೆಚ್ಚ, ಇಂಧನದ ಮೇಲಿನ ಖರ್ಚು ಹಾಗೂ ಒಟ್ಟಾರೆ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅಧ್ಯಕ್ಷರಾಗಿದ್ದು, ದ್ವಾರಕನಾಥ್ ಬಾಬು, ನಿವೃತ್ತ ಸರ್ಕಾರಿ ಕಾರ್ಯದರ್ಶಿ ಡಾ. ಅಬ್ದುಲ್ ಪಿಂಜರಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿನಿಧಿ ಸದಸ್ಯರಾಗಿದ್ದಾರೆ.
ಸಮಿತಿ ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಟಿಕೆಟ್ ದರ ಏರಿಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಪ್ರಯಾಣಿಕರಿಂದ ದರ ಏರಿಕೆಗೆ ವಿರೋಧ
ಸರ್ಕಾರದ ಪ್ರಸ್ತಾವಿತ ದರ ಏರಿಕೆಗೆ ಪ್ರಯಾಣಿಕರಿಂದ ವಿರೋಧವೂ ವ್ಯಕ್ತವಾಗಿದೆ. ಕಳೆದ ವರ್ಷವೇ ಬಸ್ ಟಿಕೆಟ್ ದರ ಹೆಚ್ಚಿಸಲಾಗಿದ್ದು, ಮತ್ತೆ ದರ ಏರಿಕೆ ಮಾಡಿದರೆ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂಬುದು ಪ್ರಯಾಣಿಕರ ವಾದ. ನಿಗಮಗಳ ಆರ್ಥಿಕ ಸಂಕಷ್ಟ ನಿವಾರಿಸುವುದರ ಜೊತೆಗೆ ಸಾರ್ವಜನಿಕರ ಮೇಲಿನ ಹೊರೆ ಕಡಿಮೆ ಮಾಡುವ ಮಾರ್ಗವನ್ನು ಸರ್ಕಾರ ಕಂಡುಕೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ವರದಿ ಮೇಲೆ ಎಲ್ಲರ ಕಣ್ಣು
ಇಂಧನ ಬೆಲೆ ಏರಿಕೆ, ನಿಗಮಗಳ ನಿರಂತರ ಆರ್ಥಿಕ ಒತ್ತಡ ಮತ್ತು ಪ್ರಯಾಣಿಕರ ವಿರೋಧದ ನಡುವೆ ತಜ್ಞರ ಸಮಿತಿಯ ವರದಿ ಮಹತ್ವ ಪಡೆದಿದೆ. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸರ್ಕಾರ ಟಿಕೆಟ್ ದರ ಹೆಚ್ಚಿಸುತ್ತದೆಯೇ ಅಥವಾ ನಿಗಮಗಳ ಆರ್ಥಿಕ ಸಂಕಷ್ಟಕ್ಕೆ ಪರ್ಯಾಯ ಪರಿಹಾರ ಕಂಡುಕೊಳ್ಳುತ್ತದೆಯೇ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

