
BPL ಕಾರ್ಡ್‌ದಾರರ ವಾರ್ಷಿಕ ಆದಾಯ ಮಿತಿ 3 ಲಕ್ಷಕ್ಕೆ ಹೆಚ್ಚಿಸಲು ಚಿಂತನೆ
ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ ಬಿಪಿಎಲ್ ಆದಾಯ ಪರಿಮಿತಿಯನ್ನು 3 ಲಕ್ಷಕ್ಕೆ ಏರಿಸಲಾಗುತ್ತಿದೆ. ಇನ್ನು ಯಾವುದೇ ಅರ್ಹ ಫಲಾನುಭವಿಗಳ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಆಹಾರ ಇಲಾಖೆ ತಿಳಿಸಿದೆ.
ರಾಜ್ಯದ ಲಕ್ಷಾಂತರ ಬಿಪಿಎಲ್ ಕಾರ್ಡ್‌ದಾರರು ಹಾಗೂ ನೂತನವಾಗಿ ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಿಪಿಎಲ್ ಕಾರ್ಡ್ ಪಡೆಯಲು ಇರಬೇಕಾದ ವಾರ್ಷಿಕ ಆದಾಯದ ಮಿತಿಯನ್ನು 1.20 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರ ಜಂಟಿ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಈ ಪ್ರಮುಖ ನಿರ್ಧಾರದ ಕುರಿತು ಅಧಿಕೃತ ಮಾಹಿತಿ ನೀಡಲಾಯಿತು.
ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ ಬಿಪಿಎಲ್ ಆದಾಯ ಪರಿಮಿತಿಯನ್ನು 3 ಲಕ್ಷಕ್ಕೆ ಏರಿಸಲಾಗುತ್ತಿದೆ. ಇನ್ನು ಯಾವುದೇ ಅರ್ಹ ಫಲಾನುಭವಿಗಳ ಕಾರ್ಡ್ ರದ್ದು ಮಾಡುವುದಿಲ್ಲ, ಆದರೆ, ನಿಯಮ ಮೀರಿ ಪಡೆದ ಅನರ್ಹ ಕಾರ್ಡ್‌ಗಳನ್ನು ಮಾತ್ರ ಎಪಿಎಲ್‌ಗೆ ವರ್ಗಾಯಿಸಲಾಗುತ್ತದೆ ಎಂದು ಆಹಾರ ಇಲಾಖೆ ತಿಳಿಸಿದೆ.
6 ಸಾವಿರ ಕೋಟಿ ವೆಚ್ಚದಲ್ಲಿ ಇಂದಿರಾ ಕಿಟ್ ವಿತರಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ 2 ತಿಂಗಳಲ್ಲಿ ಇಂದಿರಾ ಕಿಟ್ ವಿತರಣೆ ಆರಂಭಿಸಲು ಸರ್ಕಾರ ಉದ್ದೇಶಿಸಿದೆ. ಇದಲ್ಲದೇ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ತೆರೆಯಬೇಕು ಎಂದು ಆದೇಶಿಸಲಾಗಿದೆ.
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ 4.42 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆ.ಜಿ ಉಚಿತ ಪಡಿತರ ವಿತರಿಸುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ 7 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ರಾಗಿ ನೀಡುತ್ತಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 8 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಜೋಳ ನೀಡಲಾಗುತ್ತಿದೆ. ಇನ್ನು ಪಡಿತರ ಧಾನ್ಯ ದುರುಪಯೋಗ ಮತ್ತು ಕಾಳಸಂತೆ ಮಾರಾಟ ತಡೆಯುವ ಸಲುವಾಗಿಯೂ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಗೋದಾಮುಗಳಿಗೆ ಸಿಸಿಟಿವಿ ಹಾಗೂ ಪಡಿತರ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಿ, ಕೇಂದ್ರ ಕಚೇರಿಯ ಕಮಾಂಡ್ ಕಂಟ್ರೋಲ್ ರೂಂ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದೆ.

