
ಗುಟ್ಕಾ, ಪಾನ್ ಮಸಾಲಾ ಮಾರಾಟಕ್ಕೆ ಕರ್ನಾಟಕ ಸರ್ಕಾರದಿಂದ ಬ್ರೇಕ್
ಕರ್ನಾಟಕದಲ್ಲಿ ಪಾನ್ ಮಸಾಲಾ, ಗುಟ್ಕಾ ಸಂಪೂರ್ಣ ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ
ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಯಾವುದೇ ರೀತಿಯ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರ ಬುಧವಾರ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ರಾಜ್ಯಾದ್ಯಂತ ಪಾನ್ ಮಸಾಲಾ ಹಾಗೂ ಗುಟ್ಕಾ ಉತ್ಪನ್ನಗಳ ಮೇಲೆ ಒಂದು ವರ್ಷದ ಅವಧಿಗೆ ಸಂಪೂರ್ಣ ನಿಷೇಧ ಹೇರಿದೆ.
ಸರ್ಕಾರದ ಆದೇಶದಲ್ಲೇನಿದೆ?
ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಹೊರಡಿಸಿರುವ ಈ ನೂತನ ಆದೇಶದ ಪ್ರಕಾರ ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಯಾವುದೇ ರೀತಿಯ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪಾನ್ ಮಸಾಲಾದೊಂದಿಗೆ ಸುಲಭವಾಗಿ ಮಿಶ್ರಣ ಮಾಡಿ ಬಳಸಲು ಅನುಕೂಲವಾಗುವಂತೆ ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ತಂಬಾಕು ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.
ಕಠಿಣ ಕ್ರಮದ ಎಚ್ಚರಿಕೆ
ಈ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ರಾಜ್ಯಾದ್ಯಂತ ಇಂತಹ ಹಾನಿಕಾರಕ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಒಂದು ವರ್ಷದ ಮಟ್ಟಿಗೆ ಸಂಪೂರ್ಣ ತಡೆ ಬಿದ್ದಂತಾಗಿದೆ. ಸರ್ಕಾರದ ಈ ಆದೇಶವನ್ನು ಉಲ್ಲಂಘಿಸುವ ತಯಾರಕರು, ವಿತರಕರು, ಹಾಗೂ ಚಿಲ್ಲರೆ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ತಕ್ಷಣವೇ ದಾಳಿ ನಡೆಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.
ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾದ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

