ಕಾವೇರಿಗಾಗಿ ಸಮರ: ಹೋರಾಟದ ರೂಪುರೇಷೆಗಾಗಿ ಕನ್ನಡಪರ ಸಂಘಟನೆಗಳ ಸಭೆ
x

ಕಾವೇರಿಗಾಗಿ ಸಮರ: ಹೋರಾಟದ ರೂಪುರೇಷೆಗಾಗಿ ಕನ್ನಡಪರ ಸಂಘಟನೆಗಳ ಸಭೆ

ಸಿಡಬ್ಲ್ಯೂಎಂಎ ಆದೇಶ ಬೆನ್ನಲ್ಲೇ ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು ಜೋರಾಗಿದೆ. ಕನ್ನಡಪರ ಸಂಘಟನೆಗಳು, ರೈತ ಒಕ್ಕೂಟಗಳುಸರ್ಕಾರದ ವೈಫಲ್ಯ ಮತ್ತು ಪ್ರಾಧಿಕಾರದ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.


Click the Play button to hear this message in audio format

ಕಾವೇರಿ ನದಿ ನೀರಿನ ಹಂಚಿಕೆ ವಿವಾದವು ಮತ್ತೆ ರಾಜ್ಯದ ಅಸ್ಮಿತೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯೂಎಂಎ) ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನೀರು ಹರಿಸುವ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯೂಆರ್‌ಸಿ) ಆದೇಶವನ್ನು ಎತ್ತಿಹಿಡಿದಿರುವುದು ಕನ್ನಡಿಗರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೇ ಹಾಹಾಕಾರ ಉಂಟಾಗಿದ್ದು, ಜಲಾಶಯಗಳು ಬರಿದಾಗುತ್ತಿರುವ ಹೊತ್ತಿನಲ್ಲೇ ಹೊರಬಿದ್ದಿರುವ ಈ ಆದೇಶ, ಕರ್ನಾಟಕದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ನಾಂದಿ ಹಾಡಿದೆ.

ಪ್ರಾಧಿಕಾರದ ಈ ನಿರ್ಧಾರದ ಬೆನ್ನಲ್ಲೇ ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು ಜೋರಾಗಿದೆ. ಕನ್ನಡಪರ ಸಂಘಟನೆಗಳು, ರೈತ ಒಕ್ಕೂಟಗಳು ಮತ್ತು ನಾಗರಿಕ ಸಮಾಜವು ಸರ್ಕಾರದ ವೈಫಲ್ಯ ಮತ್ತು ಪ್ರಾಧಿಕಾರದ ಧೋರಣೆಯ ವಿರುದ್ಧ ರೊಚ್ಚಿಗೆದ್ದಿವೆ. ಪರಿಸ್ಥಿತಿ ಕೈಮೀರುತ್ತಿದ್ದು, ರಾಜ್ಯವ್ಯಾಪಿ ಕರ್ನಾಟಕ ಬಂದ್ ನಡೆಸಲು ಸಿದ್ಧತೆಗಳು ನಡೆದಿವೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಶುಕ್ರವಾರ ವಿವಿಧ ಕನ್ನಡ ಪರ ಮತ್ತು ರೈತ ಸಂಘಟನೆಗಳ ತುರ್ತು ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಬಂದ್‌ನ ದಿನಾಂಕವನ್ನು ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಬಂದ್ ಅಷ್ಟೇ ಅಲ್ಲದೆ, ಹೋರಾಟದ ಮುಂದಿನ ರೂಪುರೇಷೆಗಳು, ಹೆದ್ದಾರಿ ತಡೆ, ಜೈಲ್ ಭರೋ ಆಂದೋಲನ ಸೇರಿದಂತೆ ತೀವ್ರ ಸ್ವರೂಪದ ಚಳುವಳಿಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ.

ಸರ್ಕಾರದ ಮೇಲಿರುವ ಒತ್ತಡ

ರಾಜ್ಯ ಸರ್ಕಾರದ ನಿಲುವು ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರವು ಕಾನೂನು ಹೋರಾಟದಲ್ಲಿ ದುರ್ಬಲವಾಗಿ ವಾದ ಮಂಡಿಸಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ರೈತ ಸಂಘಟನೆಗಳು ನೀರು ಬಿಡುಗಡೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿವೆ. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಬೆಳೆಗಳು ಒಣಗುತ್ತಿದ್ದು, ಸಾಲದ ಸುಳಿಯಲ್ಲಿರುವ ರೈತರಿಗೆ ಕಾವೇರಿ ನೀರು ಇಲ್ಲದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. "ನಮ್ಮ ಹೊಲಗಳು ಒಣಗುತ್ತಿದ್ದರೆ, ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸಲು ನಮಗೆ ಮನಸ್ಸಿಲ್ಲ" ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗಷ್ಟೇ ಅಲ್ಲ, ಕುಡಿಯುವ ನೀರಿಗೂ ತತ್ವಾರ ಬರುವ ಪರಿಸ್ಥಿತಿಯಲ್ಲಿ ನೀರು ಬಿಡುಗಡೆ ಮಾಡಿದರೆ, ಅದು ಮುಂದಿನ ದಿನಗಳಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಸರ್ಕಾರವು ಈಗ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಅಥವಾ ವಿಶೇಷ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ. ಆದರೆ, ನ್ಯಾಯಾಲಯದ ಪ್ರಕ್ರಿಯೆಗಳು ವಿಳಂಬವಾದರೆ, ಅಷ್ಟರಲ್ಲಿ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿದುಹೋಗಿರುತ್ತದೆ. ಹೀಗಾಗಿ, ನ್ಯಾಯಾಲಯದ ಆದೇಶ ಬರುವವರೆಗೂ ನೀರು ಬಿಡುಗಡೆ ತಡೆಯುವಂತೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 54ನೇ ಸಭೆಯು ಕರ್ನಾಟಕದ ಪಾಲಿಗೆ ನಿರಾಶದಾಯಕವಾಗಿ ಅಂತ್ಯಗೊಂಡಿದೆ. 'ಸೂಪರ್ ಎಲ್ ನಿನೋ' ಪ್ರಭಾವದಿಂದ ಮಳೆ ಕೊರತೆಯಾಗಿದ್ದು, ಜಲಾಶಯಗಳಲ್ಲಿನ ನೀರಿನ ಒಳಹರಿವು ಕಳೆದ 30 ವರ್ಷಗಳ ಸರಾಸರಿಗಿಂತ ಶೇ. 65.65ರಷ್ಟು ಕಡಿಮೆಯಾಗಿದೆ ಎಂದು ಕರ್ನಾಟಕ ಸರ್ಕಾರ ಅಂಕಿಅಂಶಗಳ ಸಮೇತ ವಾದ ಮಂಡಿಸಿತ್ತು. ಅಲ್ಲದೆ, ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆಯ ಜನರಿಗೆ ಕುಡಿಯುವ ನೀರು ಪೂರೈಸಲು ಕನಿಷ್ಠ 40 ಟಿಎಂಸಿ ನೀರು ಮೀಸಲಿಡುವುದು ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಲು ಪ್ರಯತ್ನಿಸಿತ್ತು. ಆದರೂ, ಪ್ರಾಧಿಕಾರವು ರಾಜ್ಯದ ವಾಸ್ತವಿಕ ಸಂಕಷ್ಟವನ್ನು ಪರಿಗಣಿಸದೆ, ತಮಿಳುನಾಡಿಗೆ ನೀರು ಹರಿಸುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿದೆ.

Read More
Next Story