By-Election Result| ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪ ಚುನಾವಣೆ ಫಲಿತಾಂಶ ಇಂದು; ವಿಜಯಮಾಲೆ ಯಾರಿಗೆ?
x
ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು

By-Election Result| ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪ ಚುನಾವಣೆ ಫಲಿತಾಂಶ ಇಂದು; ವಿಜಯಮಾಲೆ ಯಾರಿಗೆ?

21 ದಿನಗಳ ಬಳಿಕ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಇಂದು ಬಯಲಾಗಲಿದೆ. ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲಕ್ಕೆ ಇಂದು ಫಲಿತಾಂಶವೇ ತೆರೆ ಎಳೆಯಲಿದೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಇಂದು (ಮೇ 4) ಪ್ರಕಟವಾಗಲಿದ್ದು, ಅಭ್ಯರ್ಥಿಗಳ ಹಣೆಬರಹ ಇಂದು ತೀರ್ಮಾನವಾಗಲಿದೆ.

ಏ.9 ರಂದು ಎರಡೂ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆದಿದ್ದರು. 21 ದಿನಗಳ ಬಳಿಕ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಏನಾಗಲಿದೆ, ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲಕ್ಕೆ ಇಂದು ಫಲಿತಾಂಶವೇ ತೆರೆ ಎಳೆಯಲಿದೆ.

ಸಮುದಾಯವಾರು ಮತಗಳ ಪ್ರಾಬಲ್ಯ!

ಬಾಗಲಕೋಟೆ ಕ್ಷೇತ್ರದಲ್ಲಿ ಹಿರಿಯ ಶಾಸಕ ದಿವಂಗತ ಎಚ್‌.ವೈ.ಮೇಟಿ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಕಿರಿಯ ಪುತ್ರ ಉಮೇಶ್‌ ಮೇಟಿ ಸ್ಪರ್ಧಿಸಿದ್ದರು. ತಮ್ಮ ಆಪ್ತರಾಗಿದ್ದ ಎಚ್‌.ವೈ. ಮೇಟಿ ಪ್ರತಿನಿಧಿಸಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಒಂದು ವಾರಗಳ ಕಾಲ ಬಾಗಲಕೋಟೆಯಲ್ಲಿ ಮೊಕ್ಕಾಂ ಹೂಡಿದ್ದರು. ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ಶಾಸಕರು ಹಾಗೂ ಸಚಿವರಿಗೆ ಟಾಸ್ಕ್‌ ನೀಡಿದ್ದರು.

ಆದರೆ, ಮೇಟಿ ಕುಟುಂಬದ ಒಳ ಜಗಳ, ಆಡಳಿತ ವಿರೋಧಿ ಅಲೆಯನ್ನೇ ಮುಂದಿಟ್ಟುಕೊಂಡು ಎದುರಾಳಿಯಾದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ತೀವ್ರ ಪೈಫೋಟಿ ನೀಡಿದ್ದರು. ಕಳೆದ 4 ಚುನಾವಣೆಗಳಲ್ಲಿ 2 ಬಾರಿ ಗೆದ್ದಿರುವ ಬಿಜೆಪಿಯು ಈ ಬಾರಿ ಕೂಡ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತು ನಡೆಸಿತ್ತು. ಪಕ್ಷದಿಂದ ಉಚ್ಚಾಟನೆ ಮಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೂ ಕರೆತಂದು ಭರ್ಜರಿ ಪ್ರಚಾರ ನಡೆಸಿತ್ತು.

ಬಾಗಲಕೋಟೆಯಲ್ಲಿ ಮುಸ್ಲಿಂ ಹಾಗೂ ಕುರುಬ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಭರಪೂರ ಹರಿದು ಬಂದಿವೆ. ಇದಲ್ಲದೇ ಎಸ್ಸಿ, ಎಸ್ಟಿ ಹಾಗೂ ಇತರೆ ಸಣ್ಣ ಸಮುದಾಯಗಳ ಮತಗಳೂ ಕೈ ಹಿಡಿದಿವೆ ಎಂಬುದು ಕಾಂಗ್ರೆಸ್ ನಾಯಕರ ವಾದ. ಬಿಜೆಪಿ ಅಭ್ಯರ್ಥಿಗೆ ಲಿಂಗಾಯತ ಒಳಪಂಗಡಗಳೇ ಹೆಚ್ಚು ಕೈ ಹಿಡಿದಿವೆ. ಒಳ ಮೀಸಲಾತಿ ನೀಡದ ಕಾರಣ ಕಾಂಗ್ರೆಸ್‌ ವಿರುದ್ಧ ಪ್ರಚಾರ ಕೈಗೊಂಡ ಪರಿಶಿಷ್ಟ ಜಾತಿಯವರು ಕೂಡ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದ್ದಾರೆ. ಜತೆಗೆ ನೇಕಾರರ ಮತಗಳು ಗಣನೀಯವಾಗಿ ಬಂದಿವೆ ಎಂಬುದು ಬಿಜೆಪಿ ನಾಯಕರು ಪ್ರತಿವಾದವಾಗಿದೆ.

ಮಹಿಳಾ, ಗ್ರಾಮೀಣ ಮತದಾರರೇ ನಿರ್ಣಾಯಕ

ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದು, 1,78,265 ಮತಗಳು ಚಲಾವಣೆಯಾಗಿವೆ. 1,26, 999 ಪುರುಷ ಮತದಾರರ ಪೈಕಿ 88,241ಮಂದಿ ಮತ ಹಾಕಿದ್ದಾರೆ. 1,32,775 ಮಹಿಳಾ ಮತದಾರರ ಪೈಕಿ 90,024 ಮಂದಿ ಮತ ಚಲಾಯಿಸಿದ್ದಾರೆ.

ಪುರುಷರಿಗಿಂತ ಮಹಿಳೆಯರ ಮತದಾನದ ಪ್ರಮಾಣ ಶೇ. 1.68 ರಷ್ಟು ಕಡಿಮೆಯಾಗಿರುವುದು ಸರ್ಕಾರಕ್ಕೆ ತಲೆ ನೋವು ತಂದಿಟ್ಟಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಪ್ರಭಾವದ ಹೊರತಾಗಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆಂಬ ಕಾಂಗ್ರೆಸ್ ನಿರೀಕ್ಷೆ ತಲೆಕೆಳಗಾಗಿದೆ.

ಇನ್ನು ನಗರ ಪ್ರದೇಶದಲ್ಲಿ 1,16,527 ಮತದಾರರಲ್ಲಿ 71,373 ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಹಾಗಾಗಿ ಈ ಮತಗಳು ಯಾರ ಕೈ ಹಿಡಿದಿವೆ ಎಂಬುದೇ ಕುತೂಹಲಕಾರಿಯಾಗಿದೆ.

ಶಾಮನೂರು ಭದ್ರಕೋಟೆಯಲ್ಲಿ ಫಲಿತಾಂಶ ಕುತೂಹಲ

ದಾವಣಗೆರೆ ದಕ್ಷಿಣ ಕ್ಷೇತ್ರದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಅವರ ಮೊಮ್ಮಗ ಸಮರ್ಥ್‌ ಮಲ್ಲಿಕಾರ್ಜುನ್‌ ಸ್ಪರ್ಧಿಸಿದ್ದು, ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಾಯಾಸವಾಗಿ ಗೆಲ್ಲಲಿದ್ದಾರೆ ಎಂಬ ಕಾಂಗ್ರೆಸ್‌ ನಾಯಕರ ಲೆಕ್ಕಾಚಾರಕ್ಕೆ ಮುಸ್ಲಿಮರ ಬಂಡಾಯ ತಲೆ ನೋವು ತಂದಿಟ್ಟಿತ್ತು.

ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ ವಿರುದ್ಧ ಮುಸ್ಲಿಂ ನಾಯಕರು ಬಂಡಾಯ ಸಾರಿದ್ದರು. ಮಾತುಕತೆ ಮೂಲಕ ಬಂಡಾಯ ಶಮನಗೊಳಿಸಿದರೂ ತೆರೆ ಮರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಲವರ ಮೇಲೆ ಶಿಸ್ತುಕ್ರಮ ಜರುಗಿಸಲಾಗಿದೆ. ಆದರೆ, ಈ ಪಕ್ಷ ವಿರೋಧಿ ಚಟುವಟಿಕೆಯ ಆತಂಕವೇ ಕಾಂಗ್ರೆಸ್‌ ಪಕ್ಷವನ್ನು ಕಂಗಾಲು ಮಾಡಿದೆ.

ಕ್ಷೇತ್ರದಲ್ಲಿ ಒಟ್ಟು 2,31,072 ಮತದಾರರಿದ್ದು, 1,58,131 (ಶೇ. 68.43) ಮತಗಳು ಚಲಾವಣೆಯಾಗಿವೆ. ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದ ಮುಸ್ಲಿಮರ ಮತಗಳು ವಿಭಜನೆಯಾಗಿರುವ ಸಾಧ್ಯತೆ ಇದ್ದು, ಪರಿಶಿಷ್ಟರು ಕೂಡ ಕಾಂಗ್ರೆಸ್‌ ವಿರುದ್ಧ ಪ್ರಚಾರ ನಡೆಸಿದ್ದರು. ಈ ಎಲ್ಲಾ ಕಾರಣಗಳು ಕೈ ನಾಯಕರಲ್ಲಿ ಆತಂಕ ಸೃಷ್ಟಿಸಿವೆ. ಆದರೂ, ಮತ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಆ ಪಕ್ಷದ ನಾಯಕರಲ್ಲಿದೆ.

ಇನ್ನು ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಖಾತೆಯನ್ನೇ ತೆರೆಯದ ಬಿಜೆಪಿಯು ಇದೇ ಅವಕಾಶವನ್ನು ಲಾಭಕರವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದು, ಎಸ್ಟಿ ಸಮುದಾಯದ ಅಭ್ಯರ್ಥಿ ಶ್ರೀನಿವಾಸ್‌ ಕರಿಯಣ್ಣ ಅವರಿಗೆ ಟಿಕೆಟ್‌ ನೀಡಿತ್ತು. ಕುಟುಂಬ ರಾಜಕಾರಣ ಪ್ರಸ್ತಾಪಿಸಿ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಪ್ರಚಾರ ಕೈಗೊಂಡಿದ್ದರು. ಜತೆಗೆ ಪರಿಶಿಷ್ಟ ಜಾತಿಯವರ ಕಾಂಗ್ರೆಸ್‌ ವಿರೋಧಿ ನಿಲುವಿನ ಲಾಭವನ್ನೂ ಬಿಜೆಪಿ ಪಡೆದಿತ್ತು. ಮುಸ್ಲಿಮರ ಮತಗಳ ವಿಭಜನೆ, ಎಸ್ಟಿ ಸಮುದಾಯದ ಮತಗಳು ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಒಗ್ಗೂಡಿಸಿ, ಚುನಾವಣೆ ಎದುರಿಸಿತ್ತು. ಬಿಜೆಪಿಯ ಈ ತಂತ್ರಗಾರಿಕೆ ಕೂಡ ಕಾಂಗ್ರೆಸ್‌ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ದಾವಣಗೆರೆಯ ಡಿಆರ್‌ಆರ್‌ ವಿದ್ಯಾಸಂಸ್ಥೆಯಲ್ಲಿ ಮತ ಎಣಿಕೆಗೆ ಬೆಳಿಗ್ಗೆ 8ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸಂಪೂರ್ಣ ಚಿತ್ರಣ ಹೊರಬೀಳಲಿದೆ.

ಮೂರು ಹಂತದ ಬಿಗಿ ಭದ್ರತೆ

ಮತ ಎಣಿಕೆ ಕೇಂದ್ರದ ಸುತ್ತಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೂರು ಹಂತದ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ರಸ್ತೆಗಳ ವ್ಯವಸ್ಥೆ ಮಾಡಲಾಗಿದೆ.

ಒಟ್ಟಾರೆ, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಮುಸ್ಲಿಂ ಮತಗಳ ವಿಭಜನೆ, ಕುಟುಂಬದ ಒಳ ಜಗಳ, ಆಡಳಿತ ವಿರೋಧಿ ಅಲೆ, ಪಕ್ಷ ವಿರೋಧಿ ನಡೆಗಳಿಂದ ಈ ಬಾರಿಯ ಫಲಿತಾಂಶ ಅಚ್ಚರಿ ಮೂಡಿಸಿದೆ.

Read More
Next Story