ಸಂಧಾನ ಸಭೆ ವಿಫಲ: ಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದ 2,000 ರೂ., ಗೌರವಧನ ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು; ಹೋರಾಟ ಮುಂದುವರಿಕೆ
ಸಂಧಾನ ಸಭೆಯ ಬಳಿಕ ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಹಾಗೂ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಶನಿವಾರ ನಡೆದ ಸಂಧಾನ ಸಭೆಯ ತೀರ್ಮಾನಗಳನ್ನು ತಿರಸ್ಕರಿಸಿದ್ದಾರೆ. ಸರ್ಕಾರ ಘೋಷಿಸಿರುವ ಗೌರವಧನ ಹೆಚ್ಚಳದ ಭರವಸೆಗೆ ಒಪ್ಪದ ಕಾರ್ಯಕರ್ತೆಯರು, ತಮ್ಮ ಅನಿರ್ದಿಷ್ಟಾವಧಿ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಸಂಧಾನ ಸಭೆಯ ಬಳಿಕ ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಹಾಗೂ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಆಶಾ ಕಾರ್ಯಕರ್ತೆಯರಿಗೆ ತೃಪ್ತಿ ತಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ, ಸಂಘಟನೆಯ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಆಶಾ ಕಾರ್ಯಕರ್ತೆಯರು ಒಮ್ಮತದಿಂದ ಹೋರಾಟವನ್ನು ಮುಂದುವರಿಸುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೋರಾಟ ಹಿಂಪಡೆಯಲಾಗಿದೆ ಎಂದಿದ್ದ ಸಿಎಂ ಟ್ವೀಟ್
ಇದಕ್ಕೂ ಮುನ್ನ, ಸಂಧಾನ ಸಭೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಶಾ ಕಾರ್ಯಕರ್ತೆಯರ ಹೋರಾಟ ಅಂತ್ಯಗೊಂಡಿದೆ ಎಂದು ತಿಳಿಸಿದ್ದರು. ಆಶಾ ಕಾರ್ಯಕರ್ತೆಯರು ನಮ್ಮ ಆಸ್ತಿಯಾಗಿದ್ದು, ಅವರ ಸೇವೆಯನ್ನು ಗೌರವಿಸಿ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಬರೆದುಕೊಂಡಿದ್ದರು. 2027ರ ಜನವರಿ 1ರಿಂದ ಅನ್ವಯವಾಗುವಂತೆ ಮಾಸಿಕ ಗೌರವಧನವನ್ನು 2,000 ರೂಪಾಯಿ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದ ಮುಖ್ಯಮಂತ್ರಿಗಳು, ತಮ್ಮ ಮನವಿಗೆ ಸ್ಪಂದಿಸಿ ಹೋರಾಟ ಕೈಬಿಟ್ಟ ಆಶಾ ಸಹೋದರಿಯರಿಗೆ ಅಭಿನಂದನೆಗಳನ್ನೂ ಸಲ್ಲಿಸಿದ್ದರು.
ಆದರೆ, ಮುಖ್ಯಮಂತ್ರಿಗಳ ಈ ಪ್ರಕಟಣೆಯ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರ ಸಂಘಟನೆಯು ತಾವು ಹೋರಾಟ ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿರುವುದು ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಬೇಡಿಕೆಗಳು ಸಂಪೂರ್ಣವಾಗಿ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.

