x

ಬೆಂಗಳೂರು: 15,000 ರೂ. ಗೌರವಧನಕ್ಕೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

ಬೇರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ ನಮಗೂ ಹೆಚ್ಚಿನ ವೇತನ ನೀಡಿ, ಇಲ್ಲದಿದ್ದರೆ ನಮ್ಮ ಕಣ್ಣೀರು ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.


Click the Play button to hear this message in audio format

ಕನಿಷ್ಠ ವೇತನ, ಹೆರಿಗೆ ರಜೆ ಮತ್ತು ಮೊಬೈಲ್ ಭತ್ಯೆ ಸೇರಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆದ ಈ ಮುಷ್ಕರದಲ್ಲಿ, ಸರ್ಕಾರ ಮಾತು ತಪ್ಪಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಬಡಜನರ ಆರೋಗ್ಯ ಸೇವೆಯ ಬೆನ್ನೆಲುಬಾಗಿರುವ ಕಾರ್ಯಕರ್ತೆಯರು ಪ್ರತಿಭಟನಾ ಸ್ಥಳದಲ್ಲಿ ತಮ್ಮ ನೋವನ್ನು ತೋಡಿಕೊಂಡರು.

ಕಳೆದ ಹದಿನೇಳು ವರ್ಷಗಳಿಂದ ಆರೋಗ್ಯ ಇಲಾಖೆಯಡಿ ಗ್ರಾಮೀಣ ಹಾಗೂ ನಗರದ ಕೊಳಗೇರಿ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಸ್ಥಾನಮಾನ ನೀಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಘನತೆಯಿಂದ ಬದುಕಲು ಅಗತ್ಯವಾದ ಕನಿಷ್ಠ ವೇತನವನ್ನು ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ನಡೆದ ಹೋರಾಟದ ವೇಳೆ ಅಂದಿನ ಮುಖ್ಯಮಂತ್ರಿಗಳು ಹತ್ತು ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರದೆ ಸರ್ಕಾರ ದ್ರೋಹ ಎಸಗಿದೆ. ಬೇರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ ನಮಗೂ ಹೆಚ್ಚಿನ ವೇತನ ನೀಡಿ, ಇಲ್ಲದಿದ್ದರೆ ನಮ್ಮ ಕಣ್ಣೀರು ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮೊಬೈಲ್ ಕೆಲಸದ ಒತ್ತಡಕ್ಕೆ ವಿರೋಧ

ವಿವಿಧ ರಾಜ್ಯಗಳಲ್ಲಿ ಹೆಚ್ಚಿಸಿರುವ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಹದಿನೈದು ಸಾವಿರ ರೂಪಾಯಿ ನಿಶ್ಚಿತ ಗೌರವಧನ ನಿಗದಿಪಡಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ಇದರ ಜತೆಗೆ, ಎಲ್ಲಾ ಆ್ಯಪ್‌ಗಳ ಮೂಲಕ ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಮೊಬೈಲ್ ಕೆಲಸ ಕಡ್ಡಾಯವಾದರೆ, ಇಲಾಖೆಯಿಂದಲೇ ಮೊಬೈಲ್ ಒದಗಿಸಿ ಪ್ರತ್ಯೇಕ ಪ್ರೋತ್ಸಾಹಧನ ನಿಗದಿ ಮಾಡಬೇಕು. ತಾಂತ್ರಿಕವಾಗಿ ಮೊಬೈಲ್ ಬಳಸಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಾಕಿ ಪ್ರೋತ್ಸಾಹಧನ ಮತ್ತು ನಿವೃತ್ತಿ ಸೌಲಭ್ಯಕ್ಕೆ ಆಗ್ರಹ

ಆಶಾ ನಿಧಿ ಮೂಲಕ ಕೇಂದ್ರದಿಂದ ಬರಬೇಕಿರುವ ಪ್ರೋತ್ಸಾಹಧನವು ಮಾಡಿದ ಕೆಲಸಕ್ಕೆ ತಕ್ಕಂತೆ ಬರುತ್ತಿಲ್ಲ. ಹೀಗಾಗಿ ಬಾಕಿ ಇರುವ ಎಲ್ಲಾ ಪ್ರೋತ್ಸಾಹಧನವನ್ನು ಕೂಡಲೇ ಪಾವತಿಸಬೇಕು ಎಂದು ಕಾರ್ಯಕರ್ತೆಯರು ಆಗ್ರಹಿಸಿದರು. ಅಲ್ಲದೆ, ಕಳೆದ ಹಲವು ವರ್ಷಗಳಿಂದ ನಿವೃತ್ತಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಬರಬೇಕಿರುವ ಬಾಕಿ ಇಡಿಗಂಟನ್ನು ಬಿಡುಗಡೆ ಮಾಡಬೇಕು. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ, ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರ ನಿವೃತ್ತಿ ಸೌಲಭ್ಯವನ್ನು ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು.

ತರಬೇತಿ ಭತ್ಯೆ, ಆರೋಗ್ಯ ಭದ್ರತೆ ಹಾಗೂ ಸುಗಮಕಾರರ ಮುಂದುವರಿಕೆ

ಕೇಂದ್ರದ ನಿರ್ದೇಶನದಂತೆ ಎನ್‌ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಮತ್ತು ಆಶಾ ಸುಗಮಕಾರರಿಗೆ ತಲಾ ಐದು ಸಾವಿರ ರೂಪಾಯಿ ವಿಶೇಷ ಪ್ರೋತ್ಸಾಹಧನ ನೀಡಬೇಕು. ತೀವ್ರ ಸ್ವರೂಪದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ ಮೂರು ತಿಂಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ದೈನಂದಿನ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನವನ್ನು ಕಡಿತಗೊಳಿಸದೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಮಾರ್ಗಸೂಚಿಗೆ ವಿರುದ್ಧವಾಗಿ 2025ರ ಫೆಬ್ರವರಿ 25ರಂದು ಹಿಂಪಡೆಯಲಾದ ಆಶಾ ಸುಗಮಕಾರರ ಸೇವೆಯನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು ಹಾಗೂ ಆರ್‌ಒಪಿಯಲ್ಲಿ (ROP) ಅನುಮೋದನೆಯಾದಂತೆ 2024-25ನೇ ಸಾಲಿನಲ್ಲಿ ಹೆಚ್ಚಳವಾದ ಮಾಸಿಕ 1,500 ರೂಪಾಯಿಗಳ ಒಂದು ವರ್ಷದ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು.

Read More
Next Story