ವಿಧಾನಸಭೆಯಲ್ಲಿಅಪಾರ್ಟ್​ಮೆಂಟ್ ಮಾಲೀಕರಿಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆ ಮಂಡನೆ
x

ವಿಧಾನಸಭೆಯಲ್ಲಿಅಪಾರ್ಟ್​ಮೆಂಟ್ ಮಾಲೀಕರಿಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆ ಮಂಡನೆ

ಅಪಾರ್ಟ್​ಮೆಂಟ್​ ಸಂಸ್ಕೃತಿ ವೇಗವಾಗಿ ಬೆಳೆದಿದೆ. ಕಾನೂನು 1972ರಲ್ಲಿ ಜಾರಿಗೆ ಬಂದಿದ್ದು, ಅದು ಹಳೆಯದಾಗಿದೆ. ಹೀಗಾಗಿ ಸರ್ಕಾರ ಹೊಸ ವಿಧೇಯಕವನ್ನು ಮಂಡಿಸಿದೆ.


Click the Play button to hear this message in audio format

ರಾಜ್ಯ ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೇ, ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿದೆ. ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಅಪಾರ್ಟ್​ಮೆಂಟ್​ ಮಾಲೀಕರ ಹಿತರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಹುನಿರೀಕ್ಷಿತ ‘ಕರ್ನಾಟಕ ಅಪಾರ್ಟ್​ಮೆಂಟ್​ (ಮಾಲಿಕತ್ವ ಮತ್ತು ನಿರ್ವಹಣೆ) ವಿಧೇಯಕ 2026’ ಸೇರಿದಂತೆ ಮೂರು ವಿಧೇಯಕಗಳನ್ನು ಮಂಡಿಸಿದ್ದಾರೆ.

ಕಳೆದ ಕೆಲವು ದಶಕಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳಲ್ಲಿ ಅಪಾರ್ಟ್​ಮೆಂಟ್​ ಸಂಸ್ಕೃತಿ ವೇಗವಾಗಿ ಬೆಳೆದಿದೆ. ಆದರೆ, ಇದಕ್ಕೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಕಾನೂನು 1972ರಲ್ಲಿ ಜಾರಿಗೆ ಬಂದಿದ್ದು, ಅದು ಹಳೆಯದಾಗಿದೆ ಮತ್ತು ಇಂದಿನ ವಾಸ್ತವಿಕ ಸನ್ನಿವೇಶಗಳಿಗೆ ಹೊಂದಿಕೆಯಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಸರ್ಕಾರ ಹೊಸ ವಿಧೇಯಕವನ್ನು ಮಂಡಿಸಿದೆ.

ಮಸೂದೆಯ ಪ್ರಮುಖ ಉದ್ದೇಶಗಳು

ಅಪಾರ್ಟ್​ಮೆಂಟ್​ ಮನೆ ಮಾಲೀಕರ ಹಕ್ಕುಗಳನ್ನು ಬಲಪಡಿಸುವುದು ಮತ್ತು ಅವರ ಸಂಘಗಳ ನಿರ್ವಹಣೆಯಲ್ಲಿನ ಗೊಂದಲಗಳನ್ನು ನಿವಾರಿಸುವುದು. ಬಿಲ್ಡರ್‌ಗಳು ಸಾಮಾನ್ಯವಾಗಿ ಕಾಮನ್ ಏರಿಯಾಗಳ (ಮೆಟ್ಟಿಲು, ಲಿಫ್ಟ್, ಟೆರೇಸ್, ಪಾರ್ಕ್, ಕ್ಲಬ್ ಹೌಸ್ ಇತ್ಯಾದಿ) ಮೇಲೆ ಹಿಡಿತ ಸಾಧಿಸುತ್ತಾರೆ. ಈ ಹೊಸ ಮಸೂದೆಯು ಬಿಲ್ಡರ್‌ಗಳಿಂದ ಭೂಮಿಯ ಮೇಲಿನ ಹಕ್ಕನ್ನು ಮನೆ ಮಾಲೀಕರ ಸಂಘಗಳಿಗೆ ವರ್ಗಾಯಿಸುವುದನ್ನು ಕಡ್ಡಾಯಗೊಳಿಸುತ್ತದೆ. ಪ್ರತಿಯೊಂದು ಅಪಾರ್ಟ್​ಮೆಂಟ್​ ಮಾಲೀಕರಿಗೆ ಸಾಮಾನ್ಯ ಪ್ರದೇಶಗಳಲ್ಲಿ ಇರುವ ಅವಿಭಜಿತ ಪಾಲನ್ನು ಸ್ಪಷ್ಟವಾಗಿ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ನಿಯಮಬದ್ಧಗೊಳಿಸಲಾಗುವುದಾಗಿದೆ.

ನಿಯಮ ಉಲ್ಲಂಘಿಸಿದರೆ ದಂಡ

ಈ ಕಾಯ್ದೆಯು ಕೇವಲ ನಿಯಮಗಳನ್ನು ರೂಪಿಸುವುದಷ್ಟೇ ಅಲ್ಲದೆ, ಅವುಗಳ ಉಲ್ಲಂಘನೆಯಾದಾಗ ದಂಡ ವಿಧಿಸುವ ಅವಕಾಶವನ್ನೂ ಹೊಂದಿದೆ. ಘೋಷಣಾ ಪತ್ರದ ತಿದ್ದುಪಡಿ ಸಲ್ಲಿಸಲು ವಿಫಲರಾದರೆ, ಸಂಘದ ರಚನೆಗೆ ಅಡ್ಡಿಪಡಿಸಿದರೆ, ಅಥವಾ ಓಸಿ ಪಡೆಯದೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಿದರೆ ಪ್ರವರ್ತಕರಿಗೆ ಅಥವಾ ಸಂಬಂಧಪಟ್ಟವರಿಗೆ ದಂಡ ವಿಧಿಸಲಾಗುವುದು. ಪ್ರಾಥಮಿಕವಾಗಿ 1 ಲಕ್ಷ ರೂ. ವರೆಗೆ ದಂಡ ವಿಧಿಸುವ ಅಧಿಕಾರ ಸಕ್ಷಮ ಪ್ರಾಧಿಕಾರಕ್ಕಿದೆ. ಉಲ್ಲಂಘನೆ ಮುಂದುವರಿದರೆ ಪ್ರತಿ ದಿನಕ್ಕೆ 1,000 ರೂ.ನಿಂದ 20,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.

ಮುನ್ಸಿಪಾಲಿಟಿಗಳು ಮತ್ತು ನಗರಪಾಲಿಕೆಗಳ ತಿದ್ದುಪಡಿ ವಿಧೇಯಕ

ಅಪಾರ್ಟ್​ಮೆಂಟ್​ ಮಸೂದೆಯ ಜೊತೆಗೆ, ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕ 2026 ಮತ್ತು ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2026ನ್ನು ಸಚಿವ ಕೃಷ್ಣ ಬೈರೇಗೌಡ ಅವರು ಮಂಡಿಸಿದರು. ಈ ಮಸೂದೆಗಳು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತವೆ.

ಅನೇಕ ಕಡೆಗಳಲ್ಲಿ ಖಾಸಗಿ ಬೀದಿಗಳು ಮತ್ತು ಚರಂಡಿಗಳು ಕಳಪೆ ನಿರ್ವಹಣೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿವೆ. ಇಂತಹ ಪ್ರದೇಶಗಳು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿದ್ದರೆ, ಕಮಿಷನರ್ ಅಥವಾ ಚೀಫ್ ಆಫೀಸರ್ ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸಿ ಆ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಈ ಹೊಸ ಕಾನೂನು ಅಧಿಕಾರ ನೀಡುತ್ತದೆ.

ಖಾಸಗಿ ರಸ್ತೆ ಅಥವಾ ಚರಂಡಿಯನ್ನು ಸಾರ್ವಜನಿಕ ಆಸ್ತಿಯನ್ನಾಗಿ ಘೋಷಿಸುವ ಮುನ್ನ ಸಂಬಂಧಪಟ್ಟ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ನೋಟಿಸ್ ನೀಡಲಾಗುವುದು. ನೋಟಿಸ್ ಜಾರಿಯಾದ ಒಂದು ತಿಂಗಳ ಅವಧಿಯಲ್ಲಿ ಸಂಬಂಧಪಟ್ಟವರು ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಈ ಮೂಲಕ ಹಿಂದಿನ ಭೂಮಾಲೀಕರು ರಸ್ತೆ ಭೂಮಿಗೆ ಹೆಚ್ಚಿನ ಪರಿಹಾರ ಕೋರುವುದನ್ನು ಅಥವಾ ಅಭಿವೃದ್ಧಿ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಮಸೂದೆಗಳನ್ನು ಮಂಡಿಸುವಾಗ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಗದ್ದಲ ನಡೆಸಿದವು. ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ, ಈ ಮಹತ್ವದ ಮಸೂದೆಗಳ ಮೇಲೆ ಚರ್ಚೆ ನಡೆಯುವುದು ಅನಿಶ್ಚಿತವಾಗಿದೆ. ಆದರೂ, ನಾಗರಿಕರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಈ ತಿದ್ದುಪಡಿಗಳು ಜಾರಿಯಾದರೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಲಿದೆ ಮತ್ತು ಮನೆ ಮಾಲೀಕರ ಕಾನೂನು ಹೋರಾಟಗಳಿಗೆ ಬಲ ಸಿಗಲಿದೆ ಎಂಬುದು ಸರ್ಕಾರದ ವಾದವಾಗಿದೆ.

ಕಳೆದ ಹಲವು ವರ್ಷಗಳಿಂದ ಅಪಾರ್ಟ್​ಮೆಂಟ್​ ನಿವಾಸಿಗಳು ಸಂಘಗಳ ಆಡಳಿತ ಮತ್ತು ಬಿಲ್ಡರ್‌ಗಳ ದಬ್ಬಾಳಿಕೆಯಿಂದ ಬಳಲುತ್ತಿದ್ದರು. ಹೊಸ ಕಾನೂನಿನಿಂದಾಗಿ ಅಸೋಸಿಯೇಷನ್​ಗಳ ನೋಂದಣಿ ಮತ್ತು ಕಾರ್ಯನಿರ್ವಹಣೆಯಲ್ಲಿ ಒಂದು ಏಕರೂಪತೆ ಬರಲಿದೆ. ಜತೆಗೆ, ನಗರಗಳ ಮೂಲಸೌಕರ್ಯಗಳನ್ನು ಸಾರ್ವಜನಿಕ ಆಸ್ತಿಯನ್ನಾಗಿ ಘೋಷಿಸಲು ಸಿಗುವ ಅಧಿಕಾರದಿಂದ, ಕಿರಿದಾದ ಮತ್ತು ಹದಗೆಟ್ಟ ಖಾಸಗಿ ರಸ್ತೆಗಳ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

Read More
Next Story