
ಬೀದಿಗಿಳಿದು ಸರ್ಕಾರದ ವಿರುದ್ಧ ಗುಡುಗಿದ ಕೃಷಿ ವಿವಿ ವಿದ್ಯಾರ್ಥಿಗಳು
ಕೃಷಿ ಇಲಾಖೆಯ ಅಧಿಕಾರಿ ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ ಸರ್ಕಾರದ ವಿರುದ್ಧ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುಡುಗು. ಬಿ.ಇ/ಬಿ.ಟೆಕ್‌ನಲ್ಲಿ ಬಯೋ ಕೆಮಿಸ್ಟ್ರಿ ಓದಿದ ಅಭ್ಯರ್ಥಿಗಳ ಪರಿಗಣನಗೆ ಆಕ್ರೋಶ
ಕೃಷಿ ಇಲಾಖೆಯ ಅಧಿಕಾರಿ ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ ಖಂಡಿಸಿ ಸರ್ಕಾರದ ವಿರುದ್ಧ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಧಾರವಾಡ, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿದರು. ಕೃಷಿ ಅಧಿಕಾರಿ ಹಾಗು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕೃಷಿ ಸಂಬಂಧಿತ ಪಠ್ಯಕ್ರಮಗಳನ್ನು ಓದಿದ ಪದವೀಧರರ ಬದಲಿಗೆ ಬಿ.ಇ/ಬಿ.ಟೆಕ್‌ನಲ್ಲಿ ಬಯೋ ಕೆಮಿಸ್ಟ್ರಿ ಓದಿದ ಅಭ್ಯರ್ಥಿಗಳಿಗೂ ಈ ಹುದ್ದೆಗಳಿಗೆ ಅವಕಾಶ ಕಲ್ಪಿಸಿದೆ. ಇದರ ವಿರುದ್ದ ಸಿಡಿದೆದ್ದ ಕೃಷಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಅಸಮಧಾನ ಹೊರಹಾಕಿದರು.
ಕಳೆದ 24 ದಿನಗಳಿಂದ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಅನ್ಯ ಪದವೀಧರರಿಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಡೀನ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಇವರ ಬೇಡಿಕೆಗಳ ಈಡೇರಿಕೆ ಮಾಡದ ಹಿನ್ನಲೆಯಲ್ಲಿ ಇಂದು ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿದರು. ದೆಹಲಿಯಲ್ಲಿ ಹೋಗಿ ಸಿಎಂ ಡಿ.ಕೆ.ಶಿವಕುಮಾರ್ ಅವರು ನೀಟ್ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಆದರೆ ನಮ್ಮ ವಿದ್ಯಾರ್ಥಿಗಳ ಪ್ರತಿಭಟನೆ ಕಾಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನ್ಯಾಯ ಸರಿಪಡಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 24 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮಹೋರಾಟದ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಇದರ ಜತೆಗೆ ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳಡಿ ಹಲವು ಖಾಸಗಿ ಕೃಷಿ ಕಾಲೇಜುಗಳಿಗೆ ಸಂಯೋಜನೆ ನೀಡಲಾಗುತ್ತಿದೆ. ಇದು ಕೃಷಿ ಶಿಕ್ಷಣವನ್ನು ಸಂಪೂರ್ಣ ವ್ಯಾಪಾರೀಕರಣಗೊಳಿಸಿ ಬಡ ರೈತರ ಮಕ್ಕಳಿಗೆ ದುಬಾರಿ ಆಗುವಂತೆ ಮಾಡುತ್ತದೆ. ಆದ್ದರಿಂದ ಈ ವರ್ಷದ ಶೈಕ್ಷಣಿಕ ದಾಖಲಾತಿ ಆರಂಭಕ್ಕೂ ಮುನ್ನ ಈ ಎಲ್ಲ ಖಾಸಗಿ ಕಾಲೇಜುಗಳ ಪ್ರವೇಶಾತಿ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

