ಸರ್ಕಾರಿ ಆಸ್ಪತ್ರೆಗಳ ಔಷಧ ಪೂರೈಕೆಯಲ್ಲಿ ಗೋಲ್‌ಮಾಲ್- 301 ಬ್ಯಾಚ್ ಕಳಪೆ ಮಾತ್ರೆಗಳು ಪತ್ತೆ
x

ಕಳಪೆ ಗುಣಮಟ್ಟದ ಔಷಧಗಳನ್ನು ಪೂರೈಸಿದ ಕನಿಷ್ಠ ಐದು ಕಂಪನಿಗಳನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ಔಷಧ ಪೂರೈಕೆಯಲ್ಲಿ ಗೋಲ್‌ಮಾಲ್- 301 ಬ್ಯಾಚ್ ಕಳಪೆ ಮಾತ್ರೆಗಳು ಪತ್ತೆ

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಮೂಲಕ ಖರೀದಿಸಲಾದ ಔಷಧಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 98 ಬಗೆಯ 301 ಬ್ಯಾಚ್‌ ಕಳಪೆ ಮಾತ್ರೆಗಳು ಪತ್ತೆಯಾಗಿವೆ.


Click the Play button to hear this message in audio format

ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಪೂರೈಕೆಯಾಗುತ್ತಿದ್ದ ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಪರೀಕ್ಷಿಸಲಾದ ಔಷಧಗಳ ಪೈಕಿ ಒಟ್ಟು 301 ಬ್ಯಾಚ್‌ಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿಲ್ಲ ಎಂದು ಪತ್ತೆಯಾಗಿದೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಮೂಲಕ ಖರೀದಿಸಲಾದ ಔಷಧಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಒಟ್ಟು 98 ಬಗೆಯ ಔಷಧಗಳು ‘ನಿಗದಿತ ಗುಣಮಟ್ಟಕ್ಕೆ ಅನುಗುಣವಾಗಿಲ್ಲ’ (NSQ) ಎಂದು ವರದಿಯಾಗಿದೆ.

ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಬಳಸುವ ಪ್ಯಾರಾಸಿಟಮಾಲ್, ಇಬುಪ್ರೊಫೇನ್, ಆಂಟಿಬಯೋಟಿಕ್‌ಗಳು, ಐರನ್ ಮಾತ್ರೆಗಳು, ವಿವಿಧ ಇಂಜೆಕ್ಷನ್‌ಗಳು ಮತ್ತು ಐವಿ ಫ್ಲೂಯಿಡ್‌ಗಳು ಸೇರಿವೆ.

2024-25ರಲ್ಲಿ 146 ಬ್ಯಾಚ್‌ಗಳು ಕಳಪೆ

ಅಂಕಿ-ಅಂಶಗಳ ಪ್ರಕಾರ, 2021-22ರಲ್ಲಿ 9 ಕೋಟಿ ರೂಪಾಯಿ ಮೌಲ್ಯದ 77 ಬ್ಯಾಚ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದವು. ನಂತರದ ವರ್ಷಗಳಲ್ಲಿ ಸಂಖ್ಯೆಯಲ್ಲಿ ಏರಿಳಿತ ಕಂಡುಬಂದಿದ್ದು, 2024-25ರಲ್ಲಿ ಏಕಾಏಕಿ ಹೆಚ್ಚಳವಾಗಿದೆ. ಆ ವರ್ಷದಲ್ಲಿ 5.2 ಕೋಟಿ ರೂಪಾಯಿ ಮೌಲ್ಯದ 146 ಬ್ಯಾಚ್‌ಗಳು ನಿಗದಿತ ಗುಣಮಟ್ಟವನ್ನು ಹೊಂದಿಲ್ಲ ಎಂದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಐದು ವರ್ಷಗಳ ಅವಧಿಯಲ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳ ಒಟ್ಟು ಮೌಲ್ಯ ಸುಮಾರು 19.2 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಕಳಪೆ ಔಷಧ ಪೂರೈಕೆ ಮಾಡಿದ ಕಂಪನಿಗಳ ವಿರುದ್ಧ ಕ್ರಮ

ಕಳಪೆ ಗುಣಮಟ್ಟದ ಔಷಧಗಳನ್ನು ಪೂರೈಸಿದ ಕಂಪನಿಗಳ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಕನಿಷ್ಠ ಐದು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಯಾವುದೇ ಔಷಧ ಬ್ಯಾಚ್ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ತಕ್ಷಣ ಅದರ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಅಲ್ಲದೆ, ಸಂಬಂಧಪಟ್ಟ ಸರಬರಾಜುದಾರರಿಗೆ 10 ದಿನಗಳೊಳಗೆ ಗುಣಮಟ್ಟದ ಹೊಸ ಸ್ಟಾಕ್ ಪೂರೈಸುವಂತೆ ಸೂಚಿಸಲಾಗುತ್ತಿದೆ.

ಸಾರ್ವಜನಿಕರಿಗೆ ಪೂರೈಕೆಯಾಗುವ ಔಷಧಗಳ ಗುಣಮಟ್ಟದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, NSQ ಎಂದು ಗುರುತಿಸಲಾದ ಔಷಧಗಳನ್ನು ಬಳಕೆಗೆ ಮುನ್ನವೇ ತಡೆದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

Read More
Next Story