
ನೇಪಾಳ-ಟಿಬೆಟ್ ಭೀಕರ ಪ್ರವಾಹದಲ್ಲಿ ಸಾವಿನ ಸಂಖ್ಯೆ 1,243ಕ್ಕೆ ಏರಿದೆ.
ನೇಪಾಳ ಪ್ರವಾಹ| ಕರ್ನಾಟಕದ 13 ಮಂದಿ ನಾಪತ್ತೆ, ಶೋಧ ಕಾರ್ಯ ಮುಂದುವರಿಕೆ
ನಾಪತ್ತೆಯಾದವರು ಹಾಗೂ ಸಿಲುಕಿಕೊಂಡವರಲ್ಲಿ ಹೆಚ್ಚಿನವರು ನೇಪಾಳದ ರಸುವಾ ಜಿಲ್ಲೆಯ ಟಿಮುರೆ ಮತ್ತು ಟಿಬೆಟ್‌ನ ದರ್ಚೆನ್‌ನಲ್ಲಿ ಇದ್ದರು ಎನ್ನಲಾಗಿದೆ.
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರಕೃತಿ ವಿಕೋಪ ಸೃಷ್ಟಿಸಿರುವ ಆತಂಕ ಇನ್ನೂ ತಗ್ಗಿಲ್ಲ. ಭೀಕರ ಹಠಾತ್ ಪ್ರವಾಹ ಮತ್ತು ಭೂಕುಸಿತದ ಬಳಿಕ ಕರ್ನಾಟಕದ 13 ಮಂದಿ ಇನ್ನೂ ನಾಪತ್ತೆಯಾಗಿದ್ದು, ಅವರ ಸುರಕ್ಷತೆ ಬಗ್ಗೆ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ. ನಾಪತ್ತೆಯಾಗಿರುವವರ ಪತ್ತೆಗೆ ಕರ್ನಾಟಕ ಸರ್ಕಾರ ಕೇಂದ್ರ ಹಾಗೂ ವಿದೇಶಾಂಗ ಸಚಿವಾಲಯದ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಪತ್ತೆಯಾಗದವರ ಸುರಕ್ಷತೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪ್ರವಾಹದಿಂದ ಸಂತ್ರಸ್ತರಾದವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಗಿದೆ. ಬಹುತೇಕ ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಒಂದು ಗುಂಪಿನ ಬಗ್ಗೆ ಮಾತ್ರ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ವಾರ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಕರ್ನಾಟಕದ 28 ಮಂದಿ ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಿಲುಕಿರುವ ಅಥವಾ ನಾಪತ್ತೆಯಾಗಿರುವ ಮಾಹಿತಿ ಬಂದಿತ್ತು. ಇವರಲ್ಲಿ 23 ಮಂದಿ ಬೆಂಗಳೂರು ನಗರಕ್ಕೆ ಸೇರಿದವರಾಗಿದ್ದರು. ನಾಪತ್ತೆಯಾದವರು ಹಾಗೂ ಸಿಲುಕಿಕೊಂಡವರಲ್ಲಿ ಹೆಚ್ಚಿನವರು ನೇಪಾಳದ ರಸುವಾ ಜಿಲ್ಲೆಯ ಟಿಮುರೆ ಪ್ರದೇಶದಲ್ಲಿದ್ದರೆ, ಕೆಲವರು ಟಿಬೆಟ್‌ನ ದರ್ಚೆನ್‌ನಲ್ಲಿ ಇದ್ದರು. ಪ್ರವಾಹ ಮತ್ತು ಭೂಕುಸಿತದಿಂದ ಸಂಪರ್ಕ ಹಾಗೂ ರಸ್ತೆ ವ್ಯವಸ್ಥೆಗಳಿಗೆ ಭಾರಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಗಳು ಎದುರಾಗಿವೆ.

