
ನಟಿ ರನ್ಯಾ ರಾವ್, ಒಂದು ವರ್ಷದ ಕಠಿಣ ಬಂಧನ ಅವಧಿಯನ್ನು ಪೂರೈಸಿ ಈಗ ಬಿಡುಗಡೆಗೆ ಸಿದ್ಧರಾಗಿದ್ದಾರೆ.
Ranya Rao Release|102 ಕೋಟಿ ರೂ. ಚಿನ್ನದ ಸ್ಮಗ್ಲಿಂಗ್; ನಟಿ ರನ್ಯಾ ರಾವ್‌ಗೆ ಕೊನೆಗೂ ಜಾಮೀನು
102 ಕೋಟಿ ರೂ. ಚಿನ್ನದ ಸ್ಮಗ್ಲಿಂಗ್ ಆರೋಪದಡಿ ಕಾಫಿಪೋಸಾ ಕಾಯ್ದೆಯಡಿ ಬಂಧಿತರಾಗಿದ್ದ ನಟಿ ರನ್ಯಾ ರಾವ್ ಮತ್ತು ಸಹಚರರು ಒಂದು ವರ್ಷದ ಶಿಕ್ಷೆ ಪೂರೈಸಿ ಈ ವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಸುಮಾರು 102 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಅಕ್ರಮ ಸಾಗಣೆ ಆರೋಪದ ಮೇಲೆ ಬಂಧಿತರಾಗಿ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದ ನಟಿ ರನ್ಯಾ ರಾವ್‌ಗೆ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ರನ್ಯಾ ರಾವ್ ಬಿಡುಗಡೆಯಾಗಲಿದ್ದಾರೆ.
ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಸ್ಮಗ್ಲಿಂಗ್ ಚಟುವಟಿಕೆಗಳ ತಡೆ ಕಾಯ್ದೆ (COFEPOSA) ಅಡಿ ಒಂದು ವರ್ಷದ ಅವಧಿಯ ಬಂಧನ ಪೂರೈಸಿರುವ ಹಿನ್ನೆಲೆ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಲಿದ್ದಾರೆ.
ಕಾಫಿಪೋಸಾದಡಿ ವರ್ಷದ ಬಂಧನ ಅಂತ್ಯ
ಕರ್ನಾಟಕದ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಮಲ ಮಗಳಾಗಿರುವ ರನ್ಯಾ ರಾವ್ ಅಲಿಯಾಸ್ ಹರ್ಷವರ್ಧಿನಿ ರನ್ಯಾ ಅವರನ್ನು 2025ರ ಮಾರ್ಚ್ ತಿಂಗಳಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು.
2024-25ರ ಅವಧಿಯಲ್ಲಿ ದುಬೈನಿಂದ ಬೆಂಗಳೂರಿಗೆ ಸುಮಾರು 100 ಕೆಜಿಗೂ ಅಧಿಕ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಆರೋಪ ಇವರ ಮೇಲಿದೆ. 2025ರ ಏಪ್ರಿಲ್ 22 ರಂದು ಕಾಫಿಪೋಸಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಲಾಗಿತ್ತು.
ಸುಪ್ರೀಂಕೋರ್ಟ್‌ನಿಂದಲೂ ಸಿಗದ ರಿಲೀಫ್
ರನ್ಯಾ ರಾವ್ ಅವರೊಂದಿಗೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ತೆಲುಗು ನಟ ತರುಣ್ ಕೊಂಡೂರು ಹಾಗೂ ಹವಾಲಾ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್ ಕೂಡ ಬಿಡುಗಡೆಯಾಗಲಿದ್ದಾರೆ. ವಿಶೇಷವೆಂದರೆ, ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ರನ್ಯಾ ರಾವ್ ಬಂಧನವನ್ನು ಎತ್ತಿ ಹಿಡಿದಿತ್ತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠವು, ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದು, ಕಾಫಿಪೋಸಾ ಬಂಧನ ಪ್ರಕ್ರಿಯೆಯು ಕಾನೂನುಬದ್ಧವಾಗಿದೆ ಎಂದು ಏ.16 ರಂದು ತೀರ್ಪು ನೀಡಿತ್ತು.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸರ್ಕಾರದ ಮೂಲಗಳು, ಕಾಫಿಪೋಸಾ ಅಡಿಯಲ್ಲಿ ಗರಿಷ್ಠ ಒಂದು ವರ್ಷದವರೆಗೆ ಮಾತ್ರ ತಡೆಹಿಡಿಯಲು ಅವಕಾಶವಿರುತ್ತದೆ. ಈ ಅವಧಿಯು 2026ರ ಏಪ್ರಿಲ್ 22ಕ್ಕೆ ಮುಕ್ತಾಯಗೊಳ್ಳುವುದರಿಂದ ಅವರು ಬಿಡುಗಡೆಗೆ ಅರ್ಹರಾಗಿದ್ದಾರೆ. ಆದರೆ, ಡಿಆರ್‌ಐ ದಾಖಲಿಸಿರುವ ಚಿನ್ನದ ಸ್ಮಗ್ಲಿಂಗ್ ಪ್ರಕರಣದ ವಿಚಾರಣೆಯನ್ನು ಎದುರಿಸಲೇಬೇಕಾಗುತ್ತದೆ ಎಂದು ತಿಳಿಸಿವೆ.
ಅಮೆರಿಕದ ಪೌರತ್ವ ಹೊಂದಿದ್ದ ನಟ ತರುಣ್ ಕೊಂಡೂರು ಅವರು ದುಬೈ ಕಸ್ಟಮ್ಸ್‌ನಿಂದ ಚಿನ್ನ ತರಲು ನೆರವಾಗಿದ್ದರೆ, ಸಾಹಿಲ್ ಜೈನ್ ಆ ಚಿನ್ನವನ್ನು ಭಾರತದಲ್ಲಿ ವಿಲೇವಾರಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
7 ವರ್ಷಗಳ ಜೈಲು ಶಿಕ್ಷೆಗೆ ಡಿಆರ್‌ಐ ಮನವಿ
ಡಿಆರ್‌ಐ ಈಗಾಗಲೇ 350 ಪುಟಗಳ ದೋಷಾರೋಪ ಪಟ್ಟಿಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಆರೋಪಿಗಳಿಗೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಕೋರಿದೆ. ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ರನ್ಯಾ ರಾವ್ ಅವರು ಸ್ಮಗ್ಲಿಂಗ್ ಮಾಡಿ ಬಂದ ನಂತರ ಪೊಲೀಸ್ ಇಲಾಖೆಯ ಅಧಿಕೃತ ಕಾರನ್ನು ಬಳಸುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಮಚಂದ್ರ ರಾವ್ ಅವರನ್ನು ಈ ಹಿಂದೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು.
ಏನಿದು ಪ್ರಕರಣ?
ನಟಿ ರನ್ಯಾ ರಾವ್ 2025ರ ಮಾ.3ರಂದು 12.56 ಕೋಟಿ ರೂ. ಮೌಲ್ಯದ 14 ಕೆ.ಜಿ. ಚಿನ್ನವನ್ನು ವಿದೇಶದಿಂದ ಕಳ್ಳಸಾಗಾಟ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬಳಿಕ ಆಕೆಯ ಮನೆಯ ಮೇಲೆ ದಾಳಿ ನಡೆಸಿ ಶೋಧಿಸಿದಾಗ ಪತ್ತೆಯಾದ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ನಗದನ್ನು ಜಪ್ತಿ ಮಾಡಲಾಗಿತ್ತು. ಈ ಸಂಬಂಧ ಡಿಆರ್‌ಐ ಮತ್ತು ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಇ.ಡಿ. ತನಿಖೆ ನಡೆಸುತ್ತಿದೆ.
2024ರ ಮಾರ್ಚ್‌ನಿಂದ 2025ರ ಮಾರ್ಚ್ ಅವಧಿಯಲ್ಲಿ 102.55 ಕೋಟಿ ರೂ. ಮೌಲ್ಯದ 127 ಕೆ.ಜಿ. 287 ಗ್ರಾಂ ಚಿನ್ನಾಭರಣವನ್ನು ಆರೋಪಿಗಳು ಸಾಗಾಟ ಮಾಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲಮಗಳಾಗಿರುವ ರನ್ಯಾ, ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ಪ್ರಕರಣದಲ್ಲಿ ರನ್ಯಾ ರಾವ್ ಮಾತ್ರವಲ್ಲದೆ ಆಕೆಯ ಸಹಚರರಾದ ತರುಣ್ ಕೊಂಡೂರು ಹಾಗೂ ಸಾಹಿಲ್ ಸಕಾರಿಯಾ ಜೈನ್ ಕೂಡ ಭಾಗಿಯಾಗಿದ್ದರು. ಆರೋಪಿ ತರುಣ್ ಕೊಂಡೂರು ಈ ಜಾಲದ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದಾರೆ. ಮತ್ತೋರ್ವ ಆರೋಪಿ ಸಾಹಿಲ್ ಸಕಾರಿಯಾ ಜೈನ್ ಅಕ್ರಮ ಸಾಗಣೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಭಾಗಿಯಾದ ವ್ಯಕ್ತಿಯಾಗಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಯಾರು ಈ ರನ್ಯಾ ರಾವ್?
ರನ್ಯಾ ರಾವ್ ಚಿಕ್ಕಮಗಳೂರಿನಲ್ಲಿ ಜನಿಸಿ, ಕೊಡಗಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ವ್ಯಾಸಂಗಕ್ಕೆ ಸೇರಿದರು. ಆದರೆ ನಟನಾ ವೃತ್ತಿ ಮುಂದುವರಿಸಲು ತಮ್ಮ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿದರು.
ನಂತರ ಅವರು ಮುಂಬೈನ ಕಿಶೋರ್ ನಮಿತ್ ಕಪೂರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದರು. ರನ್ಯಾ ರಾವ್ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ಮಲಮಗಳಾಗಿದ್ದಾರೆ. 'ಮಾಣಿಕ್ಯ' (2014) ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು ತಮಿಳು ಚಿತ್ರ 'ವಾಘಾ' (2016) ನಲ್ಲಿ ವಿಕ್ರಮ್ ಪ್ರಭು ಜೊತೆ ನಾಯಕಿಯಾಗಿ ನಟಿಸಿದರು. ಗಣೇಶ್ ಅವರೊಂದಿಗೆ ಕನ್ನಡ ಚಿತ್ರ 'ಪಟಾಕಿ' (2017) ನಲ್ಲಿ ನಟಿಸಿದ್ದರು.

