
ತರಬೇತಿ ಶಿಬಿರಕ್ಕೆ ಅಭ್ಯರ್ಥಿಗಳ ಆಯ್ಕೆ ಸೆಪ್ಟೆಂಬರ್ 6ರಂದು ನಡೆಯಲಿದೆ.
ಕಂಬಳಕ್ಕೆ ಹೊಸ ಓಟಗಾರರು ರೆಡಿ: ಮೀಯಾರಿನಲ್ಲಿ 10 ದಿನಗಳ ತರಬೇತಿ ಶಿಬಿರ
ಕಂಬಳದ ಹೆಚ್ಚುತ್ತಿರುವ ಜನಪ್ರಿಯತೆ ನಡುವೆ ನುರಿತ ಓಟಗಾರರ ಕೊರತೆ ನೀಗಿಸಲು ಮೀಯಾರಿನಲ್ಲಿ ಸೆ.16ರಿಂದ 26ರವರೆಗೆ 10 ದಿನಗಳ ಸರ್ಕಾರಿ ಸಹಯೋಗದ ತರಬೇತಿ ಶಿಬಿರ ನಡೆಯಲಿದೆ.
ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚುತ್ತಿದ್ದು, ಕಂಬಳದ ಗದ್ದೆಗಳಲ್ಲಿ ಸ್ಪರ್ಧಿಸುವ ಕೋಣಗಳ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಕೋಣಗಳನ್ನು ನಿಯಂತ್ರಿಸಿ ಗದ್ದೆಯಲ್ಲಿ ವೇಗವಾಗಿ ಓಡಿಸುವ ಅನುಭವ ಹೊಂದಿರುವ ಓಟಗಾರರ ಕೊರತೆ ಕಂಬಳ ಸಂಘಟಕರಿಗೆ ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಯುವಕರಿಗೆ ವಿಶೇಷ ತರಬೇತಿ ನೀಡಲು ಮುಂದಾಗಲಾಗಿದೆ.
ರಾಜ್ಯ ಕಂಬಳ ಅಸೋಸಿಯೇಷನ್, ಜಿಲ್ಲಾ ಕಂಬಳ ಸಮಿತಿ ಹಾಗೂ ಕರ್ನಾಟಕ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಕಾರ್ಕಳ ತಾಲೂಕಿನ ಮೀಯಾರಿನಲ್ಲಿ 10 ದಿನಗಳ ಕಂಬಳ ತರಬೇತಿ ಶಿಬಿರ ನಡೆಯಲಿದೆ. ಕಂಬಳವನ್ನು ಕೇವಲ ಸಾಂಪ್ರದಾಯಿಕ ಕ್ರೀಡೆಯಾಗಿ ಉಳಿಸದೆ, ಯುವ ಪ್ರತಿಭೆಗಳಿಗೆ ವ್ಯವಸ್ಥಿತ ತರಬೇತಿ ನೀಡುವ ಮೂಲಕ ವೃತ್ತಿಪರ ಕ್ರೀಡಾ ಚಟುವಟಿಕೆಯಾಗಿ ಮತ್ತಷ್ಟು ಬೆಳೆಸುವುದು ಶಿಬಿರದ ಉದ್ದೇಶವಾಗಿದೆ.
160ರಿಂದ 280ಕ್ಕೂ ಹೆಚ್ಚು ಕೋಣಗಳ ಜೋಡಿ
ಹಿಂದೆ ಕರಾವಳಿಯ ಕಂಬಳಗಳಲ್ಲಿ ಸರಾಸರಿ 150ರಿಂದ 160 ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದವು. ಕಂಬಳದ ಮೇಲಿನ ಆಸಕ್ತಿ ಹೆಚ್ಚಾದಂತೆ ಕೋಣಗಳನ್ನು ಸಾಕುವ ಮಾಲೀಕರ ಸಂಖ್ಯೆಯೂ ಹೆಚ್ಚಾಗಿದೆ. ಈಗ ಹಲವು ಕಂಬಳಗಳಲ್ಲಿ 280ಕ್ಕೂ ಹೆಚ್ಚು ಜೋಡಿ ಕೋಣಗಳು ಕಣಕ್ಕಿಳಿಯುತ್ತಿವೆ.
ಕೋಣಗಳ ಸಂಖ್ಯೆ ಹೆಚ್ಚಾದರೂ, ಅವುಗಳನ್ನು ಸಮರ್ಥವಾಗಿ ಓಡಿಸುವ ತರಬೇತಿ ಪಡೆದ ಯುವಕರ ಸಂಖ್ಯೆ ಅದಕ್ಕೆ ಅನುಗುಣವಾಗಿ ಹೆಚ್ಚಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕಂಬಳಕ್ಕೆ ಅಗತ್ಯವಿರುವ ನುರಿತ ಓಟಗಾರರನ್ನು ರೂಪಿಸುವುದು ಪ್ರಮುಖವಾಗಿದೆ.
ವಿದ್ಯಾವಂತ ಯುವಕರಿಗೂ ಅವಕಾಶ
ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭಾವಂತ ಯುವಕರು ಮಾತ್ರವಲ್ಲದೆ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಪಡೆದ ಯುವಕರಲ್ಲಿಯೂ ಕಂಬಳದ ಬಗ್ಗೆ ಆಸಕ್ತಿ ಇದೆ. ಇಂತಹ ಯುವಕರ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಹಾಗೂ ದೈಹಿಕ ತರಬೇತಿ ನೀಡುವ ಮೂಲಕ ಅವರನ್ನು ಕಂಬಳದ ಭವಿಷ್ಯದ ಓಟಗಾರರನ್ನಾಗಿ ರೂಪಿಸುವ ಗುರಿಯನ್ನು ಸಂಘಟನೆ ಹೊಂದಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ಯುವಕರಿಗೂ ಈ ಶಿಬಿರದಲ್ಲಿ ಅವಕಾಶ ಕಲ್ಪಿಸುವ ಉದ್ದೇಶವಿದೆ.
ಸೆಪ್ಟೆಂಬರ್ 6ರಂದು ಅಭ್ಯರ್ಥಿಗಳ ಆಯ್ಕೆ
ತರಬೇತಿ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸೆಪ್ಟೆಂಬರ್ 6ರಂದು ನಡೆಯಲಿದೆ. ಬೆಳಗ್ಗೆ 9ರಿಂದ 10.30ರವರೆಗೆ ನೋಂದಾಯಿತ ಅಭ್ಯರ್ಥಿಗಳ ಸಾಮರ್ಥ್ಯವನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಜಿಲ್ಲಾ ಕಾರ್ಯದರ್ಶಿ ವಿದ್ಯಾಧರ್ ಜೈನ್ ಹಾಗೂ ಹಿರಿಯ ಕಂಬಳ ತೀರ್ಪುಗಾರರನ್ನು ಒಳಗೊಂಡ ಸಮಿತಿ ಅಭ್ಯರ್ಥಿಗಳ ಆಯ್ಕೆ ನಡೆಸಲಿದೆ.
ಸೆಪ್ಟೆಂಬರ್ 16ರಿಂದ 26ರವರೆಗೆ ಶಿಬಿರ
ಕಾರ್ಕಳ ತಾಲೂಕಿನ ಮೀಯಾರು ಕಂಬಳ ಗದ್ದೆಯ ಆವರಣದಲ್ಲಿ ಸೆಪ್ಟೆಂಬರ್ 16ರಂದು ತರಬೇತಿ ಶಿಬಿರಕ್ಕೆ ಚಾಲನೆ ದೊರೆಯಲಿದೆ. ಸೆಪ್ಟೆಂಬರ್ 16ರಿಂದ 26ರವರೆಗೆ ಹತ್ತು ದಿನಗಳ ಕಾಲ ವಿವಿಧ ಹಂತಗಳಲ್ಲಿ ತರಬೇತಿ ನಡೆಯಲಿದೆ.
ಓಟಗಾರರಿಗೆ ಕೋಣಗಳನ್ನು ಓಡಿಸುವ ತಂತ್ರ, ದೈಹಿಕ ಸಾಮರ್ಥ್ಯ ವೃದ್ಧಿ ಮತ್ತು ಕಂಬಳ ಗದ್ದೆಯಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಕಂಬಳದ ತೀರ್ಪುಗಾರರು, ಫಲಿತಾಂಶ ದಾಖಲಿಸುವ ಸಿಬ್ಬಂದಿ, ಮಂಜೊಟ್ಟಿಯಲ್ಲಿ ಕೋಣಗಳನ್ನು ಬಿಡುಗಡೆ ಮಾಡುವವರು ಹಾಗೂ ನಿಶಾನೆ ಹಿಡಿಯುವವರಿಗೂ ಪ್ರತ್ಯೇಕ ತರಬೇತಿ ನೀಡಲಾಗುತ್ತದೆ.
ಯೋಗದಿಂದ ದೈಹಿಕ ತರಬೇತಿವರೆಗೆ
ಶಿಬಿರದಲ್ಲಿ ಭಾಗವಹಿಸುವ ಯುವಕರಿಗೆ ದಿನನಿತ್ಯದ ತರಬೇತಿಯ ಭಾಗವಾಗಿ ಯೋಗ, ವ್ಯಾಯಾಮ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಅಭ್ಯಾಸಗಳನ್ನು ನಡೆಸಲಾಗುತ್ತದೆ. ಅನುಭವ ಹೊಂದಿರುವ ಹಿರಿಯ ಕಂಬಳ ಓಟಗಾರರು ಮತ್ತು ಪರಿಣಿತರಿಂದ ಗದ್ದೆಯಲ್ಲಿ ಪ್ರಾಯೋಗಿಕ ಮಾರ್ಗದರ್ಶನವೂ ದೊರೆಯಲಿದೆ. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುತ್ತದೆ.
ತರಬೇತಿ ಪೂರ್ಣಗೊಳಿಸಿದವರಿಗೆ ಸರ್ಕಾರಿ ಪ್ರಮಾಣಪತ್ರ
ಶಿಬಿರದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಅಗತ್ಯ ಅರ್ಹತೆ ಗಳಿಸುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಮಾಣಪತ್ರ ನೀಡಲಾಗುತ್ತದೆ. ಇದರಿಂದ ತರಬೇತಿ ಪಡೆದ ಯುವಕರಿಗೆ ಕಂಬಳ ಕ್ಷೇತ್ರದಲ್ಲಿ ಮುಂದಿನ ಅವಕಾಶಗಳನ್ನು ಪಡೆಯಲು ಅನುಕೂಲವಾಗಲಿದೆ.
ಪ್ರತಿವರ್ಷವೂ ಶಿಬಿರ ಮುಂದುವರಿಸುವ ಯೋಜನೆ
ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳ ಅಸೋಸಿಯೇಷನ್‌ನ ನಿಯಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಅನುದಾನ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಆರಂಭವಾಗುತ್ತಿರುವ ಈ ತರಬೇತಿ ಕಾರ್ಯಕ್ರಮವನ್ನು ಈ ವರ್ಷಕ್ಕೆ ಮಾತ್ರ ಸೀಮಿತಗೊಳಿಸದೆ, ಮುಂದಿನ ವರ್ಷಗಳಲ್ಲೂ ನಿರಂತರವಾಗಿ ನಡೆಸುವ ಉದ್ದೇಶವಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭಾವಂತ ಯುವಕರಿಗೆ ಕಂಬಳದ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಅವಕಾಶ ಹಾಗೂ ಗೌರವ ದೊರೆಯುವಂತೆ ಮಾಡುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.

