ಕಲ್ಯಾಣ ಕರ್ನಾಟಕಕ್ಕೆ ದಶಸೂತ್ರಗಳ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಡಿಕೆಶಿ
x

ಕಲ್ಯಾಣ ಕರ್ನಾಟಕಕ್ಕೆ ದಶಸೂತ್ರಗಳ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಡಿಕೆಶಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರವು ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಸ್ಥಾಪಿಸಲು ನಿರ್ಧರಿಸಿದೆ.


Click the Play button to hear this message in audio format

79ನೇ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮವು ಕೇವಲ ಸಾಂಸ್ಕೃತಿಕ ಆಚರಣೆಗೆ ಸೀಮಿತವಾಗದೆ, ಈ ಪ್ರದೇಶದ ಮುಂದಿನ ದಶಕದ ಅಭಿವೃದ್ಧಿಯ ದಿಕ್ಕನ್ನು ಬದಲಿಸುವ ಐತಿಹಾಸಿಕ ಘೋಷಣೆಗಳಿಗೆ ಸಾಕ್ಷಿಯಾಯಿತು. ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆಯನ್ನು ಸ್ವೀಕರಿಸಿದರು. ಬಳಿಕ ಅವರು, ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ಹತ್ತು ಪ್ರಮುಖ ಘೋಷಣೆಗಳನ್ನು ಮಾಡಿದರು.

ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್

ಕಲ್ಯಾಣ ಕರ್ನಾಟಕ ಭಾಗವನ್ನು ಕೇವಲ ಹಿಂದುಳಿದ ಪ್ರದೇಶ ಎಂದು ಕರೆಯುವ ಕಾಲ ಮುಗಿದಿದೆ. ಈ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರವು ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಸ್ಥಾಪಿಸಲು ನಿರ್ಧರಿಸಿದೆ. ಇದನ್ನು ಸೆಕ್ಷನ್ 8 ಕಂಪನಿಯಾಗಿ ನೋಂದಾಯಿಸಲಾಗುವುದು. ಈ ಮಿಷನ್ ಮೂಲಕ ಹೂಡಿಕೆದಾರರಿಗೆ ಏಕಗವಾಕ್ಷಿ ಪದ್ಧತಿಯಲ್ಲಿ ನೆರವು ನೀಡುವುದು, ಹೊಸ ಉದ್ಯಮಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಕಲ್ಯಾಣ ಕರ್ನಾಟಕವನ್ನು ರಾಜ್ಯದ ಹೊಸ ಆರ್ಥಿಕ ಶಕ್ತಿಯ ಕೇಂದ್ರವನ್ನಾಗಿ ಮಾಡುವ ದೃಢ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ರೈತರ ಆದಾಯ ಹೆಚ್ಚಿಸಲು ಜೈವಿಕ ಆರ್ಥಿಕ ಮಿಷನ್ ಸ್ಥಾಪನೆಯಾಗಲಿದೆ. ತೊಗರಿ ಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಮತ್ತು ಸಿರಿಧಾನ್ಯಗಳಂತಹ ಬೆಳೆಗಳಿಗೆ ಜಾಗತಿಕ ಮಟ್ಟದ ಮೌಲ್ಯವರ್ಧನೆ ನೀಡುವ ಮೂಲಕ ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಲಾಗುವುದು. ಸಂಸ್ಕರಣಾ ಘಟಕಗಳನ್ನು ಹೆಚ್ಚಿಸುವುದರಿಂದ ಉತ್ಪನ್ನಗಳ ಶ್ರೇಣೀಕರಣ ಮತ್ತು ರಫ್ತಿಗೆ ಅನುಕೂಲವಾಗಲಿದೆ. ಕೃಷಿ ಆಧರಿತ ಕೈಗಾರಿಕೆಗಳು ಇಲ್ಲಿ ತಲೆ ಎತ್ತಿದರೆ ಕೃಷಿ ವಲಯದಲ್ಲಿ ದೊಡ್ಡ ಬದಲಾವಣೆ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರೋಗ್ಯ ಸಂಜೀವಿನಿ: ರಕ್ತಹೀನತೆ ವಿರುದ್ಧ ಸಮರ

ಸಾಮಾಜಿಕ ಅಭಿವೃದ್ಧಿಯಲ್ಲಿ ಆರೋಗ್ಯಕ್ಕೆ ಆದ್ಯತೆ ನೀಡಿರುವ ಸರ್ಕಾರ, ಕಲ್ಯಾಣ ಕರ್ನಾಟಕದಲ್ಲಿ ರಕ್ತಹೀನತೆ ಸಮಸ್ಯೆಯನ್ನು ಬೇರುಸಹಿತ ಕಿತ್ತೊಗೆಯಲು ಎರಡು ವರ್ಷಗಳ ವಿಶೇಷ ಅಭಿಯಾನವನ್ನು ಘೋಷಿಸಿದೆ. ವಿಶೇಷವಾಗಿ ಗರ್ಭಿಣಿಯರು, ಹದಿಹರೆಯದವರು ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ವಿತರಣೆ ಮತ್ತು ಚಿಕಿತ್ಸೆಗೆ ಒತ್ತು ನೀಡಲಾಗುವುದು. ಇದು ಸಮಾಜದ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ವೇಗವಾಗಿ ಬೆಳೆಯುತ್ತಿರುವ ಕಲಬುರಗಿ ನಗರಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಹೊಸ ರೂಪ ನೀಡಲಾಗುತ್ತಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಸೇಡಂ ರಸ್ತೆಯ ಹೊರ ವರ್ತುಲ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ, ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಇದಲ್ಲದೆ, 30 ಕೋಟಿ ರೂ. ವೆಚ್ಚದಲ್ಲಿ ನೂತನ ಕೆರೆ ಮತ್ತು ಸುಸಜ್ಜಿತ ಮನರಂಜನಾ ಉದ್ಯಾನವನ್ನು ಅಭಿವೃದ್ಧಿಪಡಿಸುವ ಮೂಲಕ ನಗರದಲ್ಲಿ ಪ್ರಮುಖ ಹಸಿರು ಮತ್ತು ಸಾರ್ವಜನಿಕ ವಿಹಾರ ತಾಣವಾಗಿ ಹೊಸ ಕೆರೆ ಮತ್ತು ಮನರಂಜನಾ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

50 ಸಾವಿರ ನಿವೇಶನರಹಿತ ಕುಟುಂಬಗಳಿಗೆ ಆಸರೆ

'ಎಲ್ಲರಿಗೂ ಸೂರು' ಎಂಬ ಧ್ಯೇಯದಡಿ, ಕಲಬುರಗಿ ಜಿಲ್ಲೆಯಲ್ಲಿ ನಿವೇಶನರಹಿತ ಬಡ ಕುಟುಂಬಗಳಿಗೆ 50 ಸಾವಿರ ವಸತಿ ನಿವೇಶನಗಳನ್ನು ಹಂಚಿಕೆ ಮಾಡುವ ಮಹತ್ತರ ಯೋಜನೆಯನ್ನು ಘೋಷಿಸಲಾಗಿದೆ. ಇದು ಸಾವಿರಾರು ಕುಟುಂಬಗಳ ಬಾಳಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಲಿದೆ. ಭೂಮಿ ಮತ್ತು ವಸತಿ ಹಕ್ಕು ಕಲ್ಪಿಸುವುದರಿಂದ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಿದೆ. ಬೆಂಗಳೂರಿಗೆ ಸೀಮಿತವಾಗಿದ್ದ ಐಟಿ ತಂತ್ರಜ್ಞಾನ ವಲಯವನ್ನು ಕಲ್ಯಾಣ ಕರ್ನಾಟಕಕ್ಕೂ ವಿಸ್ತರಿಸಲಾಗುತ್ತಿದೆ. ಕಲಬುರಗಿಯಲ್ಲಿ 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ನಿರ್ಮಾಣವಾಗಲಿದೆ. ಇದರೊಂದಿಗೆ 'ಕ್ರಿಯಾ' (ಕಲಬುರಗಿ ಸಂಶೋಧನೆ, ನಾವೀನ್ಯತೆ ಮತ್ತು ಯುವ ವೇಗವರ್ಧಕ) ಸ್ಥಾಪನೆಯಾಗಲಿದ್ದು, ಇದು ಸ್ಥಳೀಯ ಯುವ ಉದ್ಯಮಿಗಳಿಗೆ, ಸ್ಟಾರ್ಟ್‌ಅಪ್‌ಗಳಿಗೆ ಮತ್ತು ನವೀನ ಆಲೋಚನೆಗಳಿಗೆ ಸೂಕ್ತ ವೇದಿಕೆ ಒದಗಿಸಲಿದೆ. ಪ್ರತಿಭಾವಂತ ಯುವಕರು ಉದ್ಯೋಗ ಅರಸಿ ಅಲೆದಾಡುವುದನ್ನು ತಪ್ಪಿಸಿ, ತಾವೇ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ಬೆಳೆಯಲು ಇದು ಪ್ರೇರಣೆ ನೀಡಲಿದೆ ಎಂದರು.

ಸುರಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಸರ್ಕಾರ, ಕಲಬುರಗಿ ನಗರ ಮತ್ತು ತಾಲೂಕು ಕೇಂದ್ರಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಜಾಲವನ್ನು ಅಳವಡಿಸಲಿದೆ. ಇದು ಅಪರಾಧಗಳ ಪತ್ತೆಹಚ್ಚುವಿಕೆ, ಸಂಚಾರ ನಿರ್ವಹಣೆ ಮತ್ತು ನಾಗರಿಕ ಸೇವೆಗಳ ಮೇಲ್ವಿಚಾರಣೆಯಲ್ಲಿ ಪಾರದರ್ಶಕತೆ ತರಲಿದೆ. ತಂತ್ರಜ್ಞಾನದ ಬಳಕೆಯು ಆಡಳಿತದಲ್ಲಿ ವೇಗವನ್ನು ಮತ್ತು ಜನರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲಿದೆ. ಕಲ್ಯಾಣ ಕರ್ನಾಟಕದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರಗಳಾದ ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಮತ್ತು ಗಾಣಗಾಪುರವನ್ನು ಸಂಪರ್ಕಿಸುವ 'ಪುಣ್ಯ ಯಾತ್ರಾ ಸರ್ಕ್ಯೂಟ್' ಅಭಿವೃದ್ಧಿಪಡಿಸಲಾಗುವುದು. ಗಾಣಗಾಪುರದ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ 50 ಕೋಟಿ ರೂ. ಮೀಸಲಿಡಲಾಗಿದೆ. ಬಸವಣ್ಣನವರ ವಚನಗಳ ತತ್ವಗಳನ್ನು ಯುವ ಪೀಳಿಗೆಗೆ ತಲುಪಿಸಲು ಕಲಬುರಗಿಯಲ್ಲಿ ಅತ್ಯಾಧುನಿಕ 'ವಚನ ಮಂಟಪ' ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

ಕ್ರೀಡಾ ನಗರ ಸ್ಥಾಪನೆ

ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸಲು, ಚಂದ್ರಶೇಖರ ಪಾಟೀಲ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲಾಗುವುದು. ಕೆಎಸ್‌ಸಿಎ ಜೊತೆಗಿನ ಒಡಂಬಡಿಕೆಯ ಮೂಲಕ ಕ್ರಿಕೆಟ್ ಸೌಲಭ್ಯಗಳನ್ನು ಬಲಪಡಿಸಲಾಗುವುದು. ಕಲಬುರಗಿ ತಾಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕ್ರೀಡಾ ನಗರ ಇಡೀ ಪ್ರದೇಶಕ್ಕೆ ಹೆಮ್ಮೆಯ ವಿಷಯವಾಗಲಿದೆ. ಇಲ್ಲಿ ಒಳಾಂಗಣ ಮತ್ತು ಹೊರಾಂಗಣದ ಬಹುತೇಕ ಎಲ್ಲಾ ಕ್ರೀಡೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳು ದೊರೆಯಲಿವೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ, ಕಲ್ಯಾಣ ಕರ್ನಾಟಕದಾದ್ಯಂತ ಮುಂದಿನ ಎರಡು ವರ್ಷಗಳಲ್ಲಿ ಕೋಟಿ ವೃಕ್ಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಒಂದು ಕೋಟಿ ಸಸಿಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ. ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಮತ್ತು ಈ ಭಾಗವನ್ನು ಹಸಿರುಮಯವಾಗಿಸಲು ಈ ಕಾರ್ಯಕ್ರಮ ಅಡಿಪಾಯ ಹಾಕಲಿದೆ ಎಂದು ಹೇಳಿದರು.

Read More
Next Story