
ಕ.ಕರ್ನಾಟದಲ್ಲಿ ಶಿರಪುರ ಮಾದರಿ ಜಲ ಸಂರಕ್ಷಣಾ ಕಾಮಗಾರಿ: ಡಾ. ಅಜಯ್ ಧರ್ಮಸಿಂಗ್
ಕೆಕೆಆರ್ಡಿಬಿ ಅನುದಾನ ಅಡಿಯಲ್ಲಿ 200 ಕೋಟಿ ರೂ. ವೆಚ್ಚದ ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಭ್ಯವಿರುವ ಜಲಸಂಪನ್ಮೂಲವನ್ನು ಸಮರ್ಥವಾಗಿ ನಿರ್ವಹಿಸುವುದು, ಮಳೆನೀರನ್ನು ವ್ಯರ್ಥವಾಗದಂತೆ ಸಂರಕ್ಷಿಸುವುದು ಹಾಗೂ ಅಂತರ್ಜಲ ಮಟ್ಟವನ್ನು ವೃದ್ಧಿಸುವ ಮಹತ್ವದ ಉದ್ದೇಶದಿಂದ ರಾಜ್ಯ ಸರ್ಕಾರ ಬೃಹತ್ ಜಲ ಸಂರಕ್ಷಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಶಿರಪುರ ಮಾದರಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್ಡಿಬಿ) ಅನುದಾನದ ಅಡಿಯಲ್ಲಿ ಒಟ್ಟು 200 ಕೋಟಿ ರೂ. ವೆಚ್ಚದ ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.
ಈ 200 ಕೋಟಿ ರೂ. ವೆಚ್ಚದ ಜಲ ಸಂರಕ್ಷಣಾ ಕಾಮಗಾರಿಗಳನ್ನು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಶಿರಪುರ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿರುವ ಈ ಯೋಜನೆಯಡಿ ಹಲವು ಪ್ರಮುಖ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ಹಳ್ಳ ಮತ್ತು ನಾಲೆಗಳಿಗೆ ಅಡ್ಡಲಾಗಿ ಸರಣಿ ಚೆಕ್ಡ್ಯಾಂಗಳನ್ನು ನಿರ್ಮಾಣ ಮಾಡುವ ಮೂಲಕ ಹರಿಯುವ ನೀರನ್ನು ತಡೆಯಲಾಗುತ್ತದೆ. ಜೊತೆಗೆ, ಹಳ್ಳ ಮತ್ತು ನಾಲೆಗಳ ಆಳ ಹಾಗೂ ಅಗಲವನ್ನು ಹೆಚ್ಚಿಸುವುದರಿಂದ ಹೆಚ್ಚು ಮಳೆನೀರು ಸಂಗ್ರಹವಾಗಲು ಸಾಧ್ಯವಾಗುತ್ತದೆ. ಇದರೊಂದಿಗೆ, ಭೂಮಿಯೊಳಗೆ ನೀರು ಇಂಗುವಂತೆ ಮಾಡುವ ಅಂತರ್ಜಲ ಮರುಪೂರಣ ಘಟಕಗಳ ನಿರ್ಮಾಣ ಮತ್ತು ಸ್ಥಳೀಯ ಕೆರೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಶಿರಪುರ ಮಾದರಿಯ ಉದ್ದೇಶ ಮತ್ತು ರೈತರಿಗೆ ಆಗುವ ಲಾಭ
ಮಳೆಗಾಲದಲ್ಲಿ ಸುರಿಯುವ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆದು, ಅದನ್ನು ಸ್ಥಳೀಯವಾಗಿಯೇ ಸಂಗ್ರಹಿಸಿ ಭೂಮಿಯಲ್ಲಿ ಇಂಗುವಂತೆ ಮಾಡುವುದು ಶಿರಪುರ ಮಾದರಿಯ ಪ್ರಮುಖ ಉದ್ದೇಶವಾಗಿದೆ. ಮಳೆನೀರು ಆಯಾ ಪ್ರದೇಶದಲ್ಲೇ ಸಂಗ್ರಹವಾಗಿ ಭೂಮಿಯಲ್ಲಿ ಇಂಗುವುದರಿಂದ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಲಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ರೈತರು ಕೃಷಿಗಾಗಿ ಕೊಳವೆಬಾವಿಗಳ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡಲು ಈ ಯೋಜನೆ ನೆರವಾಗಲಿದೆ. ಅಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎದುರಾಗುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಕೃಷಿಗೆ ನೀರಿನ ಆಸರೆ ಒದಗಿಸಲು ಈ ಜಲ ಸಂರಕ್ಷಣಾ ಕಾಮಗಾರಿಗಳು ಬಹಳಷ್ಟು ಸಹಕಾರಿಯಾಗಲಿವೆ.
ಜಿಲ್ಲಾವಾರು ಅನುದಾನ ಹಂಚಿಕೆ ಮತ್ತು ಅನುಷ್ಠಾನದ ವಿವರ
ಒಟ್ಟು 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಗಳಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು 100 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು 100 ಕೋಟಿ ರೂ. ಅನುದಾನವನ್ನು ನೀಡಿವೆ. ತಲಾ 100 ಕೋಟಿ ರೂ. ಅನುದಾನದೊಂದಿಗೆ ಒಟ್ಟು 200 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಈ ಎಲ್ಲಾ ಕಾಮಗಾರಿಗಳನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕವೇ ಅನುಷ್ಠಾನಗೊಳಿಸಲಾಗುತ್ತಿದೆ. ಇನ್ನು ಏಳು ಜಿಲ್ಲೆಗಳಿಗೆ ಹಂಚಿಕೆಯಾಗಿರುವ ಅನುದಾನದ ವಿವರವನ್ನು ನೋಡುವುದಾದರೆ, ಕಲಬುರಗಿ ಜಿಲ್ಲೆಗೆ ಅತಿ ಹೆಚ್ಚು 49.20 ಕೋಟಿ ರೂ. ಮೀಸಲಿಡಲಾಗಿದೆ. ರಾಯಚೂರು ಜಿಲ್ಲೆಗೆ 38.80 ಕೋಟಿ ರೂ., ಬಳ್ಳಾರಿ ಜಿಲ್ಲೆಗೆ 35 ಕೋಟಿ ರೂ., ಯಾದಗಿರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಿಗೆ ತಲಾ 21 ಕೋಟಿ ರೂ. ಮತ್ತು ಬೀದರ್ ಜಿಲ್ಲೆಗೆ 14 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.
ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಸುಸ್ಥಿರ ಫಲಿತಾಂಶದ ಗುರಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಅಮ್ಮಿನಭಾವಿ ಅವರು ಕಾಮಗಾರಿಗಳ ಅನುಷ್ಠಾನದ ಕುರಿತು ವಿವರಣೆ ನೀಡಿದ್ದಾರೆ. "ಶಿರಪುರ ಮಾದರಿಯಲ್ಲಿ ಹಳ್ಳ ಮತ್ತು ನಾಲೆಗಳಿಗೆ ಅಡ್ಡಲಾಗಿ ಸರಣಿ ಚೆಕ್ಡ್ಯಾಂಗಳನ್ನು ನಿರ್ಮಿಸುವುದರಿಂದ ಮಳೆನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆದು, ಅಂತರ್ಜಲ ಮರುಪೂರಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬಹುದು" ಎಂದು ಹೇಳಿದ್ದಾರೆ. ಅಲ್ಲದೆ, "ಆಯಾ ಪ್ರದೇಶದ ಭೌಗೋಳಿಕ ಪರಿಸ್ಥಿತಿ, ಮಳೆಯ ಪ್ರಮಾಣ ಹಾಗೂ ನೀರಿನ ಲಭ್ಯತೆಯನ್ನು ಪರಿಗಣಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಜಲಸಂರಕ್ಷಣೆಯಲ್ಲಿ ಸುಸ್ಥಿರ ಫಲಿತಾಂಶ ಸಾಧಿಸುವುದು ಇಲಾಖೆಯ ಉದ್ದೇಶವಾಗಿದೆ" ಎಂದು ತಿಳಿಸಿದ್ದಾರೆ.
ಗ್ರಾಮೀಣ ಜಲ ಭದ್ರತೆಗೆ ವಿಶೇಷ ಆದ್ಯತೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಲ ಸಂರಕ್ಷಣಾ ಮೂಲಸೌಕರ್ಯವನ್ನು ಬಲಪಡಿಸುವುದಕ್ಕೆ ಸರ್ಕಾರವು ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಜಲ ಸಂರಕ್ಷಣಾ ಕಾಮಗಾರಿಗಳ ಮೂಲಕ ಕೃಷಿ ಅಭಿವೃದ್ಧಿಯನ್ನು ಉತ್ತೇಜಿಸುವುದು, ಅಂತರ್ಜಲ ಮಟ್ಟವನ್ನು ವೃದ್ಧಿಸುವುದು ಹಾಗೂ ಗ್ರಾಮೀಣ ಪ್ರದೇಶಗಳ ದೀರ್ಘಕಾಲೀನ ಜಲ ಭದ್ರತೆಯನ್ನು ಖಾತರಿಪಡಿಸುವುದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಶಿರಪುರ ಮಾದರಿಯ ಸರಣಿ ಚೆಕ್ಡ್ಯಾಂ, ಹಳ್ಳ-ನಾಲೆಗಳ ಅಭಿವೃದ್ಧಿ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಗ್ರಾಮೀಣ ಜಲ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಕುರಿತು ಮಾತನಾಡಿದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಡಾ. ಅಜಯ್ ಧರ್ಮಸಿಂಗ್, “ಕಲ್ಯಾಣ ಕರ್ನಾಟಕದಲ್ಲಿ ಬೀಳುವ ಮಳೆಯ ಪ್ರತಿಯೊಂದು ಹನಿಯನ್ನೂ ಸಮರ್ಥವಾಗಿ ಬಳಸಿಕೊಳ್ಳಬೇಕು. ಕೇವಲ ನೀರನ್ನು ಸಂಗ್ರಹಿಸುವುದಷ್ಟೇ ನಮ್ಮ ಗುರಿಯಲ್ಲ; ಅಂತರ್ಜಲವನ್ನು ಪುನಶ್ಚೇತನಗೊಳಿಸಿ ರೈತರಿಗೆ ದೀರ್ಘಕಾಲೀನ ಜಲ ಭದ್ರತೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.

