ಜೈಲಿನಿಂದ ಕೈದಿಗಳು ಪರಾರಿ ಪ್ರಕರಣ; ಎಂಟು ಮಂದಿ ಜೈಲಾಧಿಕಾರಿಗಳ ಅಮಾನತು
x

ಜೈಲಿನಿಂದ ಕೈದಿಗಳು ಪರಾರಿ ಪ್ರಕರಣ; ಎಂಟು ಮಂದಿ ಜೈಲಾಧಿಕಾರಿಗಳ ಅಮಾನತು

ನೆರೆಯ ಬೀದರ್ ಜಿಲ್ಲೆಯ ಹುಮ್ನಾಬಾದ್ ವ್ಯಾಪ್ತಿಯ ರೈತರ ಜಮೀನು ಹಾಗೂ ದಟ್ಟ ಕಬ್ಬಿನ ತೋಟಗಳಲ್ಲಿ ಕೈದಿಗಳು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಕ್ಕಾಗಿ ಸುಧಾರಿತ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.


ಕಲಬುರಗಿ ನಗರದ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಬಂಧಿಗಳು ಕಾಂಪೌಂಡ್ ಗೋಡೆ ಹಾರಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾರಾಗೃಹ ಇಲಾಖೆ ಎಂಟು ಮಂದಿ ಜೈಲಾಧಿಕಾರಿಗಳನ್ನು ಅಮಾನತು ಮಾಡಿದೆ.

ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯದ ಆರೋಪದ ಮೇಲೆ ಜೈಲು ಸೂಪರಿಂಟೆಂಡೆಂಟ್ ರಾಕೇಶ್ ಕಾಂಬ್ಳೆ, ಸಹಾಯಕ ಅಧೀಕ್ಷಕ ಬಿ. ಸುರೇಶ್, ಜೈಲರ್ ಶ್ರೀಮಂತಗೌಡ ಪಾಟೀಲ್, ರಾತ್ರಿ ಪಾಳಿಯ ವಾರ್ಡರ್ಗಳಾದ ಬಿ. ಸುರೇಶ್ , ನಿಂಗಣ್ಣ, ಯಮನಪ್ಪ ಕುರುಬರ, ಬಸವರಾಜ್ ಮೇತ್ರಿ, ಸಾವಿತ್ರಿ ತಳಕೇರಿ, ಅಜೀಮ್ ಸೇರಿ ಒಟ್ಟು ಎಂಟು ಮಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಪರಾರಿಯಾಗಿದ್ದವರಲ್ಲಿ ಒಬ್ಬನ ಬಂಧನ

ಮಂಗಳವಾರ ಬೆಳಿಗ್ಗೆ ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡಿದ್ದ ಬೀದರ್ ಮೂಲದ ಮೂವರು ಕೈದಿಗಳ ಪೈಕಿ ಒಬ್ಬನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂದು ಬುಧವಾರ ಬೆಳಗಿನ ಜಾವ ಕಲಬುರಗಿಯ ಕಪನೂರ್ ಕೈಗಾರಿಕಾ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಸಂತೋಷ್ ಎಂಬ ಕೈದಿಯನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಬಲಗಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಕೈದಿ ಹಾಗೂ ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನುಳಿದ ಇಬ್ಬರು ಆರೋಪಿಗಳಾದ ಮಸ್ತಾನ್ ಹಾಗೂ ಸಾಗರ್ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ನೆರೆಯ ಬೀದರ್ ಜಿಲ್ಲೆಯ ಹುಮ್ನಾಬಾದ್ ವ್ಯಾಪ್ತಿಯ ರೈತರ ಜಮೀನು ಹಾಗೂ ದಟ್ಟ ಕಬ್ಬಿನ ತೋಟಗಳಲ್ಲಿ ಕೈದಿಗಳು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಕ್ಕಾಗಿ ಸುಧಾರಿತ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

ಕಲಬುರಗಿ ಜೈಲಿನಿಂದ ಪರಾರಿ ಪ್ರಕರಣ ಇಡೀ ರಾಜ್ಯದಲ್ಲಿ ತೀವ್ರ ರಾಜಕೀಯ ಸಂಚಲನ ಸೃಷ್ಟಿಸಿದೆ. ಘಟನೆ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಈ ಘಟನೆ ನೋಡಿ ನನಗೆ ದೊಡ್ಡ ಶಾಕ್ ಆಗಿದೆ. ರಾಜ್ಯದ ಕಾರಾಗೃಹಗಳಲ್ಲಿನ ಅವ್ಯವಸ್ಥೆಯನ್ನು ತಕ್ಷಣವೇ ಸರಿಪಡಿಸುವ ಅಗತ್ಯವಿದೆ. ನಾನು ಗೃಹ ಸಚಿವನಾಗಿದ್ದಾಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಪಾರ್ಟಿ ಮಾಡಿದ ತಕ್ಷಣವೇ ಕಠಿಣ ಕ್ರಮ ಕೈಗೊಂಡು ಅಧಿಕಾರಿಗಳನ್ನು ಅಮಾನತು ಮಾಡಿದ್ದೆ. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾರೂ ಕೇಳುವವರೇ ಇಲ್ಲದಂತಾಗಿದೆ. ಇಡೀ ಗೃಹ ಇಲಾಖೆ ವಿಫಲವಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹ

ಇದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿರುವ ಅವರು, ಕಾರಾಗೃಹಗಳ ಸುಧಾರಣೆಯ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ. ಸಚಿವರು ತಮ್ಮ ಇಲಾಖೆಯ ಜವಾಬ್ದಾರಿ ಬಿಟ್ಟು ಬೇರೆಲ್ಲಾ ರಾಜಕೀಯ ಮಾಡುತ್ತಿದ್ದಾರೆ. ಗೃಹ ಇಲಾಖೆ ನಿಭಾಯಿಸಲು ಸಾಧ್ಯವಾಗದಿದ್ದರೆ ಅದನ್ನು ಬೇರೆ ಸಮರ್ಥರಿಗೆ ವಹಿಸಿಕೊಡಲಿ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಜೈಲುಗಳಲ್ಲಿ ಕೈದಿಗಳು ಮೊಬೈಲ್, ಡ್ರಗ್ಸ್ ಹಾಗೂ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದು ಇಡೀ ಕರ್ನಾಟಕಕ್ಕೆ ಕಳಂಕ ತರುವ ವಿಷಯ. ಸಚಿವ ಪ್ರಿಯಾಂಕ್ ಖರ್ಗೆ ಅವರು ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು," ಎಂದು ಅರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.

Read More
Next Story