ರೈತರ ಬೆಳೆ ರಕ್ಷಣೆಗೆ ಆದ್ಯತೆ; ಎರಡು ದಿನಗಳಲ್ಲಿ ಕಬಿನಿ ಕಟ್ಟು ನೀರು ಸಮಸ್ಯೆ ಇತ್ಯರ್ಥದ ಭರವಸೆ
x

ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಅವರು ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳ'ದ ಮೊದಲ ಸಭೆ ನಡೆಸಿದರು

ರೈತರ ಬೆಳೆ ರಕ್ಷಣೆಗೆ ಆದ್ಯತೆ; ಎರಡು ದಿನಗಳಲ್ಲಿ 'ಕಬಿನಿ ಕಟ್ಟು ನೀರು' ಸಮಸ್ಯೆ ಇತ್ಯರ್ಥದ ಭರವಸೆ

ನದಿಗಳ ಹೂಳು ತೆಗೆಯುವ ಗುತ್ತಿಗೆಯನ್ನು ನೀರು ಬಳಕೆದಾರರ ಸಂಘಗಳಿಗೇ ನೀಡಬೇಕು. ಹೂಳು ತೆಗೆಯುವ ಅನುದಾನವನ್ನು 2-3 ಲಕ್ಷ ರೂ.ಗಳಿಗೆ ಏರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.


ರೈತರ ಬೆಳೆ ಉಳಿಸಲು ಹಾಗೂ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಕಬಿನಿ ಜಲಾಶಯದಿಂದ ಕಟ್ಟು ಮಾದರಿಯಲ್ಲಿ ನೀರು ಹರಿಸುವ ಬಗ್ಗೆ ಎರಡು ದಿನದಲ್ಲಿ ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ 'ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳ'ದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಕೃಷಿಗೆ ಅನುಕೂಲವಾಗಲು ನಾಲ್ಕು ತಿಂಗಳವರೆಗೂ ನಾಲ್ಕು ಕಟ್ಟು ನೀರು ನೀಡಬೇಕಾಗುತ್ತದೆ. ಮೈಸೂರು ಉಸ್ತುವಾರಿ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ನದಿಗೆ ನೀರು ಬಿಡದಿದ್ದರೆ ವನ್ಯಪ್ರಾಣಿಗಳಿಗೂ ಕಷ್ಟವಾಗಲಿದೆ. ಹೀಗಾಗಿ, ಇಂದು ರಾತ್ರಿಯೇ ಮುಖ್ಯ ಎಂಜಿನಿಯರ್ ಜೊತೆ ಚರ್ಚಿಸಿ, ಎರಡು ಅಥವಾ ನಾಲ್ಕು ಕಟ್ಟು ನೀರು ನೀಡುವ ಬಗ್ಗೆ ಎರಡೇ ದಿನದಲ್ಲಿ ಕ್ರಮ ಜರುಗಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.

ಕಬಿನಿ ಚಾನಲ್ಗಳಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆ ಮಾಡಿ ನೇರವಾಗಿ ಭೂಮಿಗೆ ಹರಿಸುವಂತೆ ಹಾಗೂ ಕಲಬುರಗಿ ಭಾಗದಲ್ಲಿ ಬೆಳೆ ಉಳಿಸಲು ನೀರು ಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಮಂಡ್ಯ ಜಿಲ್ಲೆ ಕೌಡ್ಲೆ ಮತ್ತು ಸೋಮನಹಳ್ಳಿ ಸಬ್ ಬ್ರ್ಯಾಂಚ್‌ಗಳಿಗೂ ನೀರು ಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆರ್ಥಿಕ ಶಿಸ್ತಿಗೆ ಸಚಿವರ ಒತ್ತು

ಹೊಸದಾಗಿ ಸ್ಥಾಪನೆಯಾಗಿರುವ ಮಹಾಮಂಡಳಕ್ಕೆ ಕಚೇರಿ, ಗ್ರೂಪ್ ಡಿ ಸಿಬ್ಬಂದಿ ಹಾಗೂ ಅನುದಾನ ಒದಗಿಸುವಂತೆ ಸದಸ್ಯರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, "ಯಾವುದೇ ಪೂರ್ವಸಿದ್ಧತೆ ಹಾಗೂ ಲೆಕ್ಕಾಚಾರವಿಲ್ಲದೆ ಸುಮ್ಮನೆ ಅನುದಾನ ನೀಡಲು ಸಾಧ್ಯವಿಲ್ಲ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ನಿಮ್ಮ ಬೇಡಿಕೆಗಳಿಗೆ ಅಗತ್ಯ ಸಹಕಾರ ನೀಡಲಾಗುವುದು. ಸಂಘದ ಇಡೀ ಖರ್ಚು-ವೆಚ್ಚಗಳ ಸಂಪೂರ್ಣ ಮಾಹಿತಿ ಒದಗಿಸಿ, ಅದನ್ನು ಆರ್ಥಿಕ ಇಲಾಖೆ ಮೂಲಕ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು" ಎಂದು ಭರವಸೆ ನೀಡಿದರು. ಅಲ್ಲದೆ, ಸಂಘದ ಲಾಭಾಂಶವನ್ನು ಸಂಘದ ಅಭಿವೃದ್ಧಿಗೇ ಮರುಬಳಕೆ ಮಾಡುವಂತೆ ಕಿವಿಮಾತು ಹೇಳಿದ್ದಾರೆ.

ಸಂಘದ ಬಲವರ್ಧನೆಗೆ ಬೆಂಬಲ

ಮಹಾಮಂಡಳದ ಮಹಾಸಭೆಯನ್ನು ಸೆಪ್ಟೆಂಬರ್ 25 ರೊಳಗೆ ಮಾಡಬೇಕಿದ್ದು, ಸಚಿವರೇ ಅಧ್ಯಕ್ಷತೆ ವಹಿಸಬೇಕು ಎಂದು ಸದಸ್ಯರು ಕೋರಿದರು. ಈ ವೇಳೆ ಸಚಿವರು, ಸಂಘದ ಪದಾಧಿಕಾರಿಗಳಲ್ಲಿ ಉತ್ಸಾಹ ತುಂಬಿ ಇದೇ ತಿಂಗಳ 25ರಂದು ಮಹಾಸಭೆ ನಡೆಸಲು ದಿನಾಂಕ ನಿಗದಿಪಡಿಸಿದ್ದಾರೆ.

ನದಿಗಳ ಹೂಳು ತೆಗೆಯುವ ಗುತ್ತಿಗೆಯನ್ನು ನೀರು ಬಳಕೆದಾರರ ಸಂಘಗಳಿಗೇ ನೀಡಬೇಕು. ಹೂಳು ತೆಗೆಯುವ ಅನುದಾನವನ್ನು 2-3 ಲಕ್ಷ ರೂ.ಗಳಿಗೆ ಏರಿಸಬೇಕು. ಕಾಡಾ ನಿರ್ದೇಶಕರನ್ನು ಸಂಘದ ಬಾಡಿ ರಚನೆಗೆ ನೇಮಿಸಬೇಕು ಹಾಗೂ ವಿಷಯ ತಜ್ಞರು, ನಿವೃತ್ತರನ್ನು ಶೃಂಗದ ಸಲಹಾ ಸಮಿತಿಗೆ ಬಳಸಿಕೊಳ್ಳಬೇಕು ಎಂಬ ಬೇಡಿಕೆಗಳನ್ನೂ ಸಚಿವರು ಆಲಿಸಿದ್ದಾರೆ.

Read More
Next Story