
ಗೃಹ ಜ್ಯೋತಿ ಯೋಜನೆ ಉಚಿತ ವಿದ್ಯುತ್ ಅಕ್ರಮ ತಡೆಗೆ ಜುಲೈ 1 ರಿಂದ ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ಆರಂಭವಾಗಲಿದೆ.
ಗೃಹ ಜ್ಯೋತಿ ಯೋಜನೆ ಮರುಪರಿಶೀಲನೆ: ಇಂದಿನಿಂದ ಮನೆ-ಮನೆಗೆ ಬರಲಿದ್ದಾರೆ ಎಸ್ಕಾಂ ಸಿಬ್ಬಂದಿ
ಗೃಹ ಜ್ಯೋತಿ ಯೋಜನೆ ಉಚಿತ ವಿದ್ಯುತ್ ಅಕ್ರಮ ತಡೆಗೆ ಜುಲೈ 1 ರಿಂದ ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ಆರಂಭವಾಗಲಿದ್ದು, ಗ್ರಾಹಕರು ಆಧಾರ್, ವೋಟರ್ ಐಡಿ ಹಾಗೂ ಬಾಡಿಗೆ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಮತ್ತು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಇಂಧನ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ಕೆಲವು ಕಡೆಗಳಲ್ಲಿ ಸತ್ತವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವ ನಿಟ್ಟಿನಲ್ಲಿ ಜುಲೈ 1ರಿಂದ ರಾಜ್ಯಾದ್ಯಂತ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯ ಆರಂಭವಾಗುತ್ತಿದೆ.
ಈ ವಿಶೇಷ ತಪಾಸಣಾ ಪ್ರಕ್ರಿಯೆಯನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಸಿಬ್ಬಂದಿ ಹಾಗೂ ಆಯಾ ಭಾಗದ ಮೀಟರ್ ರೀಡರ್‌ಗಳು ನಡೆಸಲಿದ್ದಾರೆ. ಇವರು ನೇರವಾಗಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ವಿಶೇಷ ಮೊಬೈಲ್ ಆಪ್ ಹಾಗೂ ಅಧಿಕೃತ ಘೋಷಣಾ ಪತ್ರದ ಮೂಲಕ ಅರ್ಜಿದಾರರ ಮಾಹಿತಿ ಮತ್ತು ಅರ್ಹತೆಯನ್ನು ಸ್ಥಳದಲ್ಲೇ ಪರಿಶೀಲಿಸಲಿದ್ದಾರೆ. ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಗ್ರಾಹಕರು ಮತ್ತು ಸಾರ್ವಜನಿಕರು ಮೀಟರ್ ರೀಡರ್‌ಗಳಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಇಂಧನ ಇಲಾಖೆ ಮನವಿ ಮಾಡಿದೆ.
ಎಸ್ಕಾಂ ಸಿಬ್ಬಂದಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮ ದೃಢೀಕರಣಕ್ಕಾಗಿ ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಾಗುತ್ತದೆ. ಪರಿಶೀಲನೆ ವೇಳೆ ಫಲಾನುಭವಿಯ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರವನ್ನು ತೋರಿಸಬೇಕಾಗಿ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಾಗಿದ್ದರೆ, ಅವರು ಪ್ರಸ್ತುತ ಚಾಲ್ತಿಯಲ್ಲಿರುವ ಬಾಡಿಗೆ ಒಪ್ಪಂದದ ಪತ್ರಗಳನ್ನು (ರೆಂಟ್ ಅಗ್ರಿಮೆಂಟ್) ಕಡ್ಡಾಯವಾಗಿ ಹಾಜರುಪಡಿಸಬೇಕಾಗುತ್ತದೆ.
ರಾಜ್ಯದ ಪ್ರತಿಯೊಂದು ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದು ಈ ಗೃಹಜ್ಯೋತಿ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಇದು ಕೇವಲ ಗೃಹ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಉದ್ದೇಶದ ಅಂಗಡಿ ಮುಂಗಟ್ಟುಗಳಿಗೆ ಅಥವಾ ಮಳಿಗೆಗಳಿಗೆ ಈ ರಿಯಾಯಿತಿ ಸಿಗುವುದಿಲ್ಲ. ಅಲ್ಲದೆ, ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಒಂದು ಆಧಾರ್ ಕಾರ್ಡ್ ಸಂಖ್ಯೆಗೆ ಕೇವಲ ಒಂದು ಮೀಟರ್‌ಗೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಸಹ ಇದು ಅನ್ವಯಿಸಲಿದೆ. ಅನರ್ಹರನ್ನು ಹೊರದಬ್ಬಿ, ಅರ್ಹರಿಗೆ ನ್ಯಾಯ ಒದಗಿಸುವ ಈ ಫಿಲ್ಟರ್ ಕಾರ್ಯಕ್ಕೆ ಸಾರ್ವಜನಿಕರು ಸೂಕ್ತ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಕೋರಲಾಗಿದೆ.

