ಶಿಕ್ಷಣ ಇಲಾಖೆ ಹುದ್ದೆ ಭರ್ತಿ, KPSC ಅಕ್ರಮ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶಿಕ್ಷಕರ ನೇಮಕಾತಿ ಹಾಗೂ KPSC ಅಕ್ರಮ ಖಂಡಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ. ಸರ್ಕಾರಕ್ಕೆ ನೀಡಿದರು 4 ದಿನಗಳ ಗಡುವು.
ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ತಕ್ಷಣದ ನೇಮಕಾತಿ ಮತ್ತು ಕೆಪಿಎಸ್‌ಸಿಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ, ಉದ್ಯೋಗ ಆಕಾಂಕ್ಷಿಗಳು ಹಾಗೂ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಅಭ್ಯರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು ಏನು?
15 ವರ್ಷಗಳಿಂದ ನಿಂತಿರುವ ಸಂಗೀತ ಶಿಕ್ಷಕರ ನೇಮಕಾತಿ:ಕಳೆದ 15 ವರ್ಷಗಳಿಂದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ. ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ಕನಿಷ್ಠ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ, ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು.
B.Com/B.Ed ಅಭ್ಯರ್ಥಿಗಳಿಗೆ ಅವಕಾಶ ನೀಡಲು ಮನವಿ
15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ B.Com ಮತ್ತು B.Ed ಮುಗಿಸಿ, TET ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಹೊರಗಿಡಲಾಗಿದೆ. ಹೈಕೋರ್ಟ್ ಧಾರವಾಡ ಪೀಠದ ಸ್ಪಷ್ಟ ಆದೇಶವಿದ್ದರೂ ಸರ್ಕಾರ ಇದನ್ನು ಜಾರಿಗೆ ತಂದಿಲ್ಲ. ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಅರ್ಥಶಾಸ್ತ್ರ ಮತ್ತು ವಾಣಿಜ್ಯ ವಿಷಯಗಳನ್ನು ತಾವು ವ್ಯಾಸಂಗ ಮಾಡಿರುವುದರಿಂದ ತಮಗೂ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ನೀಡಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದರು.
PSTR ನೇಮಕಾತಿಯಲ್ಲಿ ಆಗುತ್ತಿರುವ ಅನ್ಯಾಯ
1 ರಿಂದ 5ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ 2015ರ ನಂತರ ಸಮರ್ಪಕವಾಗಿ ನಡೆದಿಲ್ಲ. ಇಂದಿಗೂ ಸಾವಿರಾರು ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದಾರೆ.
ಪರೀಕ್ಷಾ ಪದ್ಧತಿ ಬದಲಾವಣೆ
ಶಿಕ್ಷಣ ಇಲಾಖೆಯ ಪರೀಕ್ಷಾ ಪದ್ಧತಿ ಗೊಂದಲಮಯವಾಗಿದ್ದು, 200 ಅಂಕಗಳ ಡಿಸ್ಕ್ರಿಪ್ಟಿವ್ ಮಾದರಿಯ ಬದಲಿಗೆ ಆಬ್ಜೆಕ್ಟಿವ್ ಮಾದರಿ ತರಬೇಕು. ಜೊತೆಗೆ ಕನ್ನಡ, ಮರಾಠಿ, ಗಣಿತ, ಚಿತ್ರಕಲೆ ಹಾಗೂ ದೈಹಿಕ ಶಿಕ್ಷಕರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
KPSC ಅಕ್ರಮದ CBI ತನಿಖೆಗೆ ಪಟ್ಟು
ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಮತ್ತು ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಲು ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಬೇಕು. ಯುಪಿಎಸ್‌ಸಿ (UPSC) ಮಾದರಿಯಲ್ಲಿ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ವಾದಿಸಿದರು.
ಸರ್ಕಾರಕ್ಕೆ 4 ದಿನಗಳ ಗಡುವು
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ್, ಈ ಹೋರಾಟವು ಸರ್ಕಾರಕ್ಕೆ ನೀಡುತ್ತಿರುವ ಆರಂಭಿಕ ಎಚ್ಚರಿಕೆಯಾಗಿದೆ ಎಂದು ಹೇಳಿದರು.
"ನಾವು ರಾಜ್ಯ ಸರ್ಕಾರಕ್ಕೆ ಹಾಗೂ ಶಿಕ್ಷಣ ಇಲಾಖೆಗೆ 4 ದಿನಗಳ ಗಡುವು ನೀಡುತ್ತಿದ್ದೇವೆ. ಶನಿವಾರ-ಭಾನುವಾರದೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತು ಕೆಪಿಎಸ್‌ಸಿ ಅಕ್ರಮವನ್ನು ಸಿಬಿಐ ತನಿಖೆಗೆ ನೀಡದಿದ್ದರೆ, ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸುತ್ತೇವೆ," ಎಂದು ಎಚ್ಚರಿಸಿದರು.

