
ಬಿಡದಿ ಭೂಸ್ವಾಧೀನದ ವಿರುದ್ಧ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಮೊದಲ ಹಂತದಲ್ಲಿ ಸುಮಾರು 498 ಎಕರೆಗೂ ಹೆಚ್ಚು ಫಲವತ್ತಾದ ಭೂಮಿಯನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಇದರಿಂದ ಸುಮಾರು 750 ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ಜೆಡಿಎಸ್ ಆರೋಪಿಸಿದೆ.
ಟೌನ್‌ಶಿಪ್ ನೆಪದಲ್ಲಿ ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷವು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಶನಿವಾರ ಮನವಿ ಸಲ್ಲಿಸಿದೆ.
ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾದ ಪಕ್ಷದ ನಿಯೋಗವು, ಬಿಡದಿ ಭಾಗದಲ್ಲಿ ನೀರಾವರಿ ಮತ್ತು ಕೃಷಿಯೋಗ್ಯ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶದ ಟೌನ್‌ಶಿಪ್ ಯೋಜನೆಗೆ ಕಸಿದುಕೊಳ್ಳುವುದು ಅಕ್ಷ್ಯಮ್ಯ ಎಂದು ದೂರಿದೆ.
ಈಗಾಗಲೇ ಮೊದಲ ಹಂತದ ಭೂಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರವು ಸಂಪೂರ್ಣವಾಗಿ ರೈತ ವಿರೋಧಿ ನಿಲುವು ತಳೆದಿದ್ದು, ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನಕ್ಕೆ ಸಂಚು ರೂಪಿಸುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ಭೂಸ್ವಾಧೀನ ಯೋಜನೆ ಕೈ ಬಿಡಬೇಕು ಎಂದು ಹೆಚ್.ಎಂ. ರಮೇಶ್ ಗೌಡ ಒತ್ತಾಯಿಸಿದರು.
ಮೊದಲ ಹಂತದಲ್ಲಿ ಸುಮಾರು 498 ಎಕರೆಗೂ ಹೆಚ್ಚು ಫಲವತ್ತಾದ ಭೂಮಿಯನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಇದರಿಂದ ಸುಮಾರು 750 ಕುಟುಂಬಗಳು ಬೀದಿಪಾಲಾಗುತ್ತಿವೆ. ಈ ಪೈಕಿ 614 ಅಂದರೆ ಶೇ 81 ರಷ್ಟು ರೈತರು ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರು ಆಗಿದ್ದಾರೆ. ಒಪ್ಪತ್ತಿನ ಊಟಕ್ಕಾಗಿ ಕಷ್ಟಪಡುತ್ತಿರುವ ಶ್ರಮಜೀವಿಗಳಿದ್ದಾರೆ. ಅರ್ಧ ಎಕರೆ, ಕಾಲು ಎಕರೆ ಭೂಮಿ ಹೊಂದಿರುವ ಅವರು ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಅಂತಹ ರೈತರನ್ನು ಒಕ್ಕಲಿಸುವುದು ಅಮಾನವೀಯ ಕಿಡಿಕಾರಿದರು.
ಇದಲ್ಲದೆ ಮುಂದಿನ ತಿಂಗಳು ಸುಮಾರು 7481ರಿಂದ 9,600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಸಂಚು ರೂಪಿಸಿದೆ. ರೈತರು ಭೂಮಿ ಕೊಡಲು ಇಷ್ಟಪಡುತ್ತಿಲ್ಲ. ಹೀಗಾಗಿ ಸರ್ಕಾರವೇ ಕೋರ್ಟ್ ನಲ್ಲಿ ಪರಿಹಾರ ಹಣ ಜಮೆ ಮಾಡಿ ಭೂಮಿಯನ್ನು ಕಸಿದುಕೊಳ್ಳಲು ಹುನ್ನಾರ ನಡೆಸಿದೆ. ಇದರಿಂದ ಸಾವಿರಾರು ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಭೂಮಿಯನ್ನು ಕಸಿದುಕೊಳ್ಳುತ್ತಿರುವ ಭಾಗವು ಹೈನುಗಾರಿಕೆಯ ಸಮೃದ್ಧ ಜಾಗ. ಮಾಸಿಕ ಸುಮಾರು 6 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ಬೆಂಗಳೂರು ಡೇರಿಗೆ ಪೂರೈಕೆ ಮಾಡಲಾಗುತ್ತಿದೆ. ಈ ಫಲವತ್ತಾದ ಭೂಮಿ ರಿಯಲ್ ಎಸ್ಟೇಟ್ ಕುಳಗಳ ಪಾಲಾದರೆ ಅಷ್ಟೂ ಹಾಲಿನ ಉತ್ಪಾದನೆ ನಿಂತು ಹೋಗಲಿದೆ ಎಂದರು.
ನಿಯೋಗದಲ್ಲಿ ಸಂದರ್ಭದಲ್ಲಿ ಪಕ್ಷದ ಬೆಂಗಳೂರು ಪಶ್ಚಿಮ ಜಿಲ್ಲಾಧ್ಯಕ್ಷ ಟಿ.ತಿಮ್ಮೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹೆಚ್.ಸಿ.ಕೃಷ್ಣ, ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ನಟರಾಜ್ ಗಂಗಾಧರ್ ಹಾಗೂ ಗ್ರೇಟರ್ ಬೆಂಗಳೂರು ಮಹಾಪ್ರಧಾನ ಕಾರ್ಯದರ್ಶಿ ಎಸ್.ರಮೇಶ ಇದ್ದರು.

